ಜಿಎಸ್‌ಟಿ ಪರಿಹಾರ ಬಾಕಿ:ರಾಜ್ಯಗಳಿಗೆ ಎರಡು ಸಾಲ ಆಯ್ಕೆಗಳ ವಿವರಗಳನ್ನು ಪ್ರಕಟಿಸಿದ ಕೇಂದ್ರ

Update: 2020-08-29 18:43 GMT

ಹೊಸದಿಲ್ಲಿ,ಆ.29: ಪ್ರಸಕ್ತ ಹಣಕಾಸು ವರ್ಷದಲ್ಲಿ ನಿರೀಕ್ಷಿಸಲಾಗಿರುವ ತಮ್ಮ ಪಾಲಿನ ಜಿಎಸ್‌ಟಿ ಆದಾಯದಲ್ಲಿ 2.35 ಲ.ಕೋ.ರೂ.ಗಳ ಕೊರತೆಯನ್ನು ತುಂಬಿಕೊಳ್ಳಲು ರಾಜ್ಯಗಳು ಸಾಲ ಪಡೆದುಕೊಳ್ಳಲು ಕೇಂದ್ರವು ಅವುಗಳ ಮುಂದಿಟ್ಟಿರುವ ಎರಡು ಆಯ್ಕೆಗಳ ವಿವರಗಳನ್ನು ವಿತ್ತ ಸಚಿವಾಲಯವು ಶನಿವಾರ ಪ್ರಕಟಿಸಿದೆ. ಆರ್‌ಬಿಐ ಮೂಲಕ ಸ್ಥಾಪಿಸಲಾಗುವ ವಿಶೇಷ ಗವಾಕ್ಷಿಯ ಮೂಲಕ ಸಾಲವನ್ನು ಪಡೆಯಬಹುದು ಅಥವಾ ಮಾರುಕಟ್ಟೆಯಿಂದ ಸಾಲವನ್ನೆತ್ತಬಹುದು ಎಂದು ರಾಜ್ಯಗಳಿಗೆ ಬರೆದಿರುವ ಪತ್ರದಲ್ಲಿ ಸಚಿವಾಲಯವು ತಿಳಿಸಿದೆ.

ಜಿಎಸ್‌ಟಿ ಸಂಗ್ರಹ ಕುಸಿತದೊಂದಿಗೆ 2019,ಆಗಸ್ಟ್‌ನಿಂದ ಪರಿಹಾರ ಪಾವತಿಯು ಸಮಸ್ಯೆಯನ್ನು ಸೃಷ್ಟಿಸಿತ್ತು. ಪ್ರಸಕ್ತ ಹಣಕಾಸು ವರ್ಷದಲ್ಲಿ ರಾಜ್ಯಗಳ ಜಿಎಸ್‌ಟಿ ಪಾಲು ಮೂರು ಲ.ಕೋ.ರೂ.ಗಳೆಂದು ಅಂದಾಜಿಸಲಾಗಿದ್ದು,ಈ ಪೈಕಿ 65,000 ಕೋ.ರೂ.ಗಳನ್ನು ಸೆಸ್ ಹೇರಿಕೆ ಮೂಲಕ ಸಂಗ್ರಹಿಸಲಾದ ಆದಾಯದಿಂದ ಪಾವತಿಸಲಾಗುವುದು. ಇದು 2.35 ಲ.ಕೋ.ರೂ.ಗಳ ಕೊರತೆಯನ್ನುಂಟು ಮಾಡಲಿದೆ.

ಜಿಎಸ್‌ಟಿಯನ್ನು ಅಕ್ಷರಶಃ ಜಾರಿಗೊಳಿಸಲು ಭಾರತ ಸರಕಾರವು ಬದ್ಧವಾಗಿದೆ. ಈ ಬದ್ಧತೆಗೆ ಅನುಗುಣವಾಗಿ ಕೆಲವು ಸಾಲ ಆಯ್ಕೆಗಳನ್ನು ರಾಜ್ಯಗಳ ಮುಂದಿಡಲಾಗಿದೆ. ಪರಿಹಾರ ಸೆಸ್‌ನ ಅವಧಿಯ ವಿಸ್ತರಣೆಯನ್ನು ಸರಕಾರವು ಬೆಂಬಲಿಸುತ್ತದೆ ಮತ್ತು ಪರಿಹಾರ ಬಾಕಿಗಳನ್ನು ಸಂಪೂರ್ಣವಾಗಿ ಪಾವತಿಸುವವರೆಗೆ ಈ ವಿಸ್ತರಣೆ ಅಗತ್ಯವಾಗಬಹುದು ಎಂದು ವಿತ್ತ ಸಚಿವಾಲಯದ ಅಧಿಕೃತ ಹೇಳಿಕೆಯು ತಿಳಿಸಿದೆ.

ಕೊರೋನ ವೈರಸ್ ಪಿಡುಗಿನಿಂದ ಮಾತ್ರ ಕೇಂದ್ರದ ಆದಾಯ ಕುಸಿತಗೊಂಡಿದ್ದಲ್ಲ,ರಾಷ್ಟ್ರೀಯ ಭದ್ರತೆಯೂ ಇದಕ್ಕೆ ಕಾರಣವಾಗಿದೆ. ಹೀಗಾಗಿ ರಾಜ್ಯಮಟ್ಟದಲ್ಲಿ ಮಾಡಬಹುದಾದ ಯಾವುದೇ ಸಾಲವನ್ನು ಕೇಂದ್ರಮಟ್ಟದಲ್ಲಿ ಮಾಡುವುದನ್ನು ನಿವಾರಿಸುವುದು ಕೇಂದ್ರ ಮತ್ತು ರಾಜ್ಯಗಳ ಸಾಮೂಹಿಕ ಹಿತಾಸಕ್ತಿಯಾಗುತ್ತದೆ,ಅದು ರಾಷ್ಟ್ರದ ಮತ್ತು ಎಲ್ಲ ಹಣಕಾಸು ಸಂಸ್ಥೆಗಳ ಹಿತಾಸಕ್ತಿಯೂ ಆಗಿರುತ್ತದೆ ಎಂದು ತಿಳಿಸಿರುವ ಹೇಳಿಕೆಯು,ರಾಜ್ಯಗಳು ಮಾಡುವ ಸಾಲಕ್ಕೆ ಸಾಮಾನ್ಯವಾಗಿ ಕೇಂದ್ರವು ಮಾಡುವ ಸಾಲಕ್ಕಿಂತ ಹೆಚ್ಚಿನ ಬಡ್ಡಿಯನ್ನು ವಿಧಿಸಲಾಗುತ್ತದೆ. ಕೇಂದ್ರ ಸರಕಾರಕ್ಕೆ ಇದರ ಅರಿವಿದೆ ಮತ್ತು ವ್ಯತಿರಿಕ್ತ ಪರಿಣಾಮಗಳಿಂದ ರಾಜ್ಯಗಳನ್ನು ರಕ್ಷಿಸಲು ಈ ಅಂಶವನ್ನು ಪರಿಗಣಿಸಿದೆ ಎಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News