ರಕ್ತದೊತ್ತಡ ಕುರಿತು ಮಿಥ್ಯೆಗಳು ಮತ್ತು ಸತ್ಯಗಳು ಇಲ್ಲಿವೆ

Update: 2020-08-29 19:07 GMT

ಬಿಪಿ ಅಥವಾ ಅಧಿಕ ರಕ್ತದೊತ್ತಡವು ಭಾರತ ಮತ್ತು ವಿಶ್ವಾದ್ಯಂತ ಕೋಟ್ಯಂತರ ಜನರನ್ನು ಕಾಡುತ್ತಿದೆ. ಇದು ಹೆಚ್ಚಾಗಿ ಲಕ್ಷಣರಹಿತವಾಗಿರುವುದರಿಂದ ಅಪಾಯಕಾರಿಯಾಗಿದೆ ಮತ್ತು ಇದನ್ನು ‘ಸದ್ದಿಲ್ಲದ ಕೊಲೆಗಾರ ’ಎಂದೇ ಕರೆಯಲಾಗುತ್ತದೆ. ಈ ಹಿಂದೆ ಹೆಚ್ಚಾಗಿ ವಯಸ್ಸಾದವರನ್ನು ಕಾಡುತ್ತಿದ್ದ ಬಿಪಿ ಈಗ ಜೀವನಶೈಲಿ ಬದಲಾವಣೆಗಳು ಮತ್ತು ಹೆಚ್ಚುತ್ತಿರುವ ಬೊಜ್ಜಿನಿಂದಾಗಿ ಯುವಜನರಲ್ಲಿ ಹೆಚ್ಚು ಸಾಮಾನ್ಯವಾಗುತ್ತಿದೆ. ಅದು ಹೃದ್ರೋಗಗಳು,ಪಾರ್ಶ್ವವಾಯು ಮತ್ತು ಇತರ ಅಪಾಯಕಾರಿ ಕಾಯಿಲೆಗಳಿಗೆ ತುತ್ತಾಗುವ ಅಪಾಯವನ್ನು ಹೆಚ್ಚಿಸುತ್ತದೆ. ಗಂಭೀರ ಹಾನಿಯುಂಟಾಗುವ ಮೊದಲೇ ಅಧಿಕ ರಕ್ತದೊತ್ತಡವನ್ನು ಪತ್ತೆ ಹಚ್ಚುವುದು ಅಗತ್ಯವಾಗಿದೆ. ಅಧಿಕ ರಕ್ತದೊತ್ತಡವನ್ನು ಪ್ರತಿದಿನ ಪರೀಕ್ಷಿಸಿಕೊಳ್ಳುವುದು ಒಳ್ಳೆಯದು. ದಿಢೀರ ತೊಂದರೆಗಳನ್ನು ತಡೆಯಲು ಡಿಜಿಟಲ್ ಬಿಪಿ ಮಾನಿಟರ್‌ಗಳ ಮೂಲಕ ಮನೆಯಲ್ಲಿಯೇ ರಕ್ತದೊತ್ತಡವನ್ನು ಪರೀಕ್ಷಿಸಿಕೊಳ್ಳಬಹುದು. ರಕ್ತದೊತ್ತಡ ಕುರಿತು ಹಲವಾರು ಮಿಥ್ಯೆಗಳು ಜನರ ಮನಸ್ಸಿನಲ್ಲಿವೆ. ಅವುಗಳ ಹಿಂದಿನ ಸತ್ಯಗಳು ಇಲ್ಲಿವೆ.....

► ನಾನು ಚೆನ್ನಾಗಿಯೇ ಇದ್ದೇನೆ,ಮತ್ತೇಕೆ ನನ್ನ ರಕ್ತದೊತ್ತಡದ ಮೇಲೆ ನಿಗಾಯಿರಿಸಬೇಕು?

 -ಬಿಪಿಯು ಸದ್ದಿಲ್ಲದ ಕೊಲೆಗಾರ ಎಂದೇ ಹೆಸರಾಗಿರುವುದರಿಂದ ವಯಸ್ಕರು ತಮ್ಮ ರಕ್ತದೊತ್ತಡವನ್ನು ನಿಯಮಿತವಾಗಿ ಪರೀಕ್ಷಿಸಿಕೊಳ್ಳುವುದು ಹೆಚ್ಚು ಸುರಕ್ಷಿತವಾಗಿದೆ.

 ► ತಲೆನೋವು,ತಲೆ ಸುತ್ತುವಿಕೆ,ಹೆಚ್ಚಿನ ಎದೆಬಡಿತ,ಬೆವರುವಿಕೆ,ಉದ್ವೇಗ ಅಥವಾ ಆತಂಕ,ವಾಕರಿಕೆಯಂತಹ ಅಧಿಕ ರಕ್ತದೊತ್ತಡದ ಯಾವುದೇ ಲಕ್ಷಣಗಳು ನನ್ನಲ್ಲಿಲ್ಲ,ಹೀಗಾಗಿ ತಪಾಸಣೆ ಮಾಡಿಸಿಕೊಳ್ಳುವುದಕ್ಕೆ ಅರ್ಥವಿಲ್ಲ

 -ಹೆಚ್ಚಿನ ಬಿಪಿ ಪ್ರಕರಣಗಳು ಲಕ್ಷಣರಹಿತವಾಗಿರುತ್ತವೆ. ರೋಗನಿರ್ಣಯ ಮಾಡಿರದ ಪ್ರಕರಣಗಳು ಪರಿಧಮನಿ ಹೃದ್ರೋಗಗಳು, ಪಾರ್ಶ್ವವಾಯು,ಮೂತ್ರಪಿಂಡ ವೈಫಲ್ಯದಂತಹ ಗಂಭೀರ ಕಾಯಿಲೆಗಳಿಗೆ ಕಾರಣವಾಗುತ್ತವೆ. ಹೀಗಾಗಿ ರೋಗನಿರ್ಧಾರವಾಗಿರದ, ಆದರೆ ಅಧಿಕ ರಕ್ತದೊತ್ತಡ ಇರಬಹುದಾದವರು ನಿಯಮಿತವಾಗಿ ತಪಾಸಣೆ ಮಾಡಿಸಿಕೊಳ್ಳುವುದು ಒಳ್ಳೆಯದು.

► ನನಗೆ ಅಧಿಕ ರಕ್ತದೊತ್ತಡವಿಲ್ಲ ಮತ್ತು ಕಡಿಮೆ ರಕ್ತದೊತ್ತಡವು ಗಂಭೀರ ಕಾಯಿಲೆಯೇನಲ್ಲ. ಹೀಗಾಗಿ ನಾನೇಕೆ ಆ ಬಗ್ಗೆ ಚಿಂತಿಸಬೇಕು?

  -ಅಧಿಕ ರಕ್ತದೊತ್ತಡ ಅಥವಾ ಕಡಿಮೆ ರಕ್ತದೊತ್ತಡವಿರಲಿ,ವ್ಯಕ್ತಿಯು ತಲೆನೋವು,ಏಕಾಗ್ರತೆ ನಷ್ಟ,ತಲೆ ಸುತ್ತುವಿಕೆ ಅಥವಾ ಬವಳಿಯಂತಹ ಲಕ್ಷಣಗಳನ್ನು ಅನುಭವಿಸುತ್ತಿದ್ದರೆ ತಪಾಸಣೆ ಮಾಡಿಸಿಕೊಳ್ಳಲೇಬೇಕು ಮತ್ತು ರಕ್ತದೊತ್ತಡದ ಮೇಲೆ ನಿಗಾಯಿರಿಸಬೇಕು. ಲಕ್ಷಣಗಳಿಗೆ ತಕ್ಷಣ ಚಿಕಿತ್ಸೆ ಪಡೆದುಕೊಳ್ಳದಿದ್ದರೆ ಅವು ಇತರ ತೊಂದರೆಗಳಿಗೆ ಕಾರಣವಾಗಬಹುದು. ಕಡಿಮೆ ರಕ್ತದೊತ್ತಡ ಕೆಲವರಲ್ಲಿ ಸಾಮಾನ್ಯವಾಗಿದ್ದರೂ ನಿಮ್ಮ ರಕ್ತದೊತ್ತಡವನ್ನು ತಿಳಿದುಕೊಳ್ಳುವುದು ಅಗತ್ಯ.

► ನನ್ನದಿನ್ನೂ ಚಿಕ್ಕ ವಯಸ್ಸು. ಹೀಗಾಗಿ ನಿಯಮಿತವಾಗಿ ಬಿಪಿ ತಪಾಸಣೆ ಅಗತ್ಯವಿಲ್ಲ

-ಇಂದು ಯುವಜನರೂ ಬಿಪಿಗೆ ತುತ್ತಾಗುತ್ತಿದ್ದಾರೆ. ಹೀಗಾಗಿ ಹದಿಹರೆಯವನ್ನು ದಾಟಿರುವ ಯಾರೇ ಆದರೂ ಮುಂಜಾಗ್ರತೆ ಕ್ರಮವಾಗಿ ಮನೆಯಲ್ಲಿಯೇ ಮಾನಿಟರ್ ಮೂಲಕ ಕೆಲವೇ ನಿಮಿಷಗಳಲ್ಲಿ ಬಿಪಿಯನ್ನು ಪರೀಕ್ಷೆ ಮಾಡಿಕೊಳ್ಳಬಹುದು.

► ನಾವು ಅಡಿಗೆಯಲ್ಲಿ ಕಡಿಮೆ ಉಪ್ಪನ್ನು ಬಳಸುತ್ತೇವೆ. ಹೀಗಾಗಿ ಅತಿ ಉಪ್ಪಿನ ಸೇವನೆಯಿಂದ ರಕ್ತದೊತ್ತಡದ ಬಗ್ಗೆ ನಾವು ಕಳವಳಪಡಬೇಕಿಲ್ಲ

-ಸೋಡಿಯಂ ಅಥವಾ ಉಪ್ಪಿನ ಸೇವನೆಯನ್ನು ನಿಯಂತ್ರಿಸುವುದು ಅಡಿಗೆಯಲ್ಲಿ ಬಳಸುವ ಉಪ್ಪಿಗೆ ಸೀಮಿತವಲ್ಲ. ಅಂಗಡಿಗಳಲ್ಲಿ ಮಾರಾಟವಾಗುವ ತಿನಿಸುಗಳು,ಸಾಸ್‌ಗಳು,ಕ್ಯಾನ್ಡ್ ಮತ್ತು ಸಂಸ್ಕರಿತ ಆಹಾರಗಳು ಸಹ ಅಧಿಕ ಸೋಡಿಯಂ ಅನ್ನು ಒಳಗೊಂಡಿರುತ್ತವೆ. ಶೇ.75ರಷ್ಟು ಸೋಡಿಯಂ ಇಂತಹ ಆಹಾರಗಳಿಂದಲೇ ನಮ್ಮ ಶರೀರಕ್ಕೆ ಪೂರೈಕೆಯಾಗುತ್ತದೆ. ಆಹಾರ ಅಥವಾ ತಿನಿಸು ಖರೀದಿಸುವ ಮುನ್ನ ಲೇಬಲ್‌ಗಳಲ್ಲಿ ಸೋಡಿಯಂ ಮತ್ತು ಸೋಡಾ ಶಬ್ದಗಳಿವೆಯೇ ಎಂದು ಪರೀಕ್ಷಿಸಿ. ಇವು ಅಧಿಕ ಪ್ರಮಾಣದಲ್ಲಿ ಸೋಡಿಯಂ ಇರುವುದನ್ನು ಸೂಚಿಸುತ್ತವೆ.

► ಈಗ ನಾನು ಆರಾಮವಾಗಿದ್ದೇನೆ,ಹೀಗಾಗಿ ಬಿಪಿ ಔಷಧಿಗಳ ಸೇವನೆಯನ್ನು ಮುಂದುವರಿಸುವ ಅಗತ್ಯವಿಲ್ಲ

-ವೈದ್ಯರ ಅನುಮತಿಯಿಲ್ಲದೆ ಔಷಧಿಗಳ ಡೋಸೇಜ್ ಕಡಿಮೆ ಮಾಡುವುದು ಅಥವಾ ಅವುಗಳ ಸೇವನೆಯನ್ನು ನಿಲ್ಲಿಸುವುದು ಇತರ ಸಹಅನಾರೋಗ್ಯಗಳ ಹಿನ್ನೆಲೆಯಲ್ಲಿ ಅಪಾಯಕಾರಿಯಾಗುತ್ತದೆ. ಅಲ್ಲದೇ ಬಿಪಿಯ ಮೇಲೆ ನಿತ್ಯ ನಿಗಾಯಿರಿಸುವುದು ಸಹ ಅತ್ಯಗತ್ಯವಾಗಿದೆ.

► ವೈದ್ಯರ ಕ್ಲಿನಿಕ್‌ನಲ್ಲಿ ಮತ್ತು ಮನೆಯಲ್ಲಿ ಬಿಪಿ ರೀಡಿಂಗ್‌ಗಳ ನಡುವೆ ಯಾವಾಗಲೂ ವ್ಯತ್ಯಾಸವಿರುತ್ತದೆ. ಡಿಜಿಟಲ್ ಬಿಪಿ ಮಾನಿಟರ್‌ಗಳು ನಿಖರವಲ್ಲ ಎಂದು ಅನಿಸುತ್ತದೆ

=ವೈದ್ಯರನ್ನು ಭೇಟಿಯಾದಾಗ ಮಾನಸಿಕ ಒತ್ತಡದಿಂದಾಗಿ ಸಹಜವಾಗಿಯೇ ಬಿಪಿ ಹೆಚ್ಚಾಗುತ್ತದೆ ಮತ್ತು ಇದನ್ನು ವೈಟ್ ಕೋಟ್ ಹೈಪರ್‌ಟೆನ್ಶನ್ ಎನ್ನಲಾಗುತ್ತದೆ. ಇದೇ ವೇಳೆ ಅಧಿಕ ರಕ್ತದೊತ್ತಡವನ್ನು ಸೂಚಿಸುವ ವಿವಿಧ ರೀಡಿಂಗ್‌ಗಳನ್ನು ನಾವು ಕಡೆಗಣಿಸಬಾರದು. ಇಂತಹ ಪ್ರಕರಣಗಳಲ್ಲಿ ಪೂರ್ವ ನಿರ್ಧರಿತ ಅವಧಿಗೆ ಮನೆಯಲ್ಲಿಯೇ ಪ್ರತಿದಿನ ಬಿಪಿ ರೀಡಿಂಗ್‌ಗಳನ್ನು ತೆಗೆದುಕೊಳ್ಳುವುದು ಬಳಕೆದಾರನ ಪಾಲಿಗೆ ಆದರ್ಶ ರಕ್ತದೊತ್ತಡ ರೀಡಿಂಗ್‌ಗಳನ್ನು ನಿರ್ಧರಿಸುವಲ್ಲಿ ಸಹಾಯಕವಾಗುತ್ತದೆ ಮತ್ತು ಇವುಗಳನ್ನು ವೈದ್ಯರೊಂದಿಗೆ ಹಂಚಿಕೊಳ್ಳಬೇಕು.

► ನನ್ನ ಸ್ನೇಹಿತ ಬಿಪಿಯಿಂದ ಗುಣಮುಖನಾಗಿದ್ದಾನೆ. ಔಷಧಿಗಳಿಗೆ ದಾಸನಾಗುವ ಬದಲು ಆತನ ಚಿಕಿತ್ಸಾ ಕ್ರಮವನ್ನೇ ಅನುಸರಿಸಲು ನಾನು ಬಯಸಿದ್ದೇನೆ

 -ದುರದೃಷ್ಟವಶಾತ್ ಅಧಿಕ ರಕ್ತದೊತ್ತಡವು ಗುಣಪಡಿಸಬಹುದಾದ ಕಾಯಿಲೆಯಲ್ಲ. ಆದರೆ ಸೂಕ್ತ ಜೀವನಶೈಲಿ ಬದಲಾವಣೆಗಳು ಮತ್ತು ನಿಯಮಿತ ಔಷಧಿ ಸೇವನೆ ಸ್ಥಿತಿಯನ್ನು ಸುರಕ್ಷಿತವಾಗಿ ಎದುರಿಸಲು ನೆರವಾಗುತ್ತವೆ. ಕಡಿಮೆ ಉಪ್ಪು ಸೇವನೆ,ಸಮತೋಲಿತ ಆಹಾರ, ಮದ್ಯಪಾನ ಅಥವಾ ಧೂಮ್ರಪಾನದಿಂದ ಸಾಧ್ಯವಿದ್ದಷ್ಟು ದೂರವಿರುವುದು,ನಿಯಮಿತ ವ್ಯಾಯಾಮ,ಆರೋಗ್ಯಕರ ದೇಹತೂಕ ಕಾಯ್ದುಕೊಳ್ಳುವಿಕೆ ಮತ್ತು ನಿಯಮಿತವಾಗಿ ವೈದ್ಯರು ಸೂಚಿಸಿದ ಔಷಧಿಗಳ ಸೇವನೆ ಇವುಗಳಲ್ಲಿ ಸೇರಿವೆ.

► ನಾನು ಕೆಲವು ವಾರಗಳಿಗೊಮ್ಮೆ ವೈದ್ಯರನ್ನು ಭೇಟಿಯಾದಾಗ ಬಿಪಿ ತಪಾಸಣೆ ಮಾಡಿಸಿಕೊಳ್ಳುತ್ತೇನೆ. ಹೀಗಿರುವಾಗ ನಾನೇಕೆ ಮನೆಯಲ್ಲಿ ಪ್ರತಿದಿನ ಬಿಪಿಯ ಮೆಲೆ ನಿಗಾಯಿರಿಸಬೇಕು?

-ಅಧಿಕ ರಕ್ತದೊತ್ತಡವು ಲಕ್ಷಣರಹಿತವಾಗಿರಬಲ್ಲದು ಮತ್ತು ದೀರ್ಘಕಾಲಿಕ ಸ್ಥಿತಿಯಾಗಬಹುದು,ಹೀಗಾಗಿ ಬಿಪಿ ಇದೆ ಎಂದು ನಿರ್ಧಾರವಾಗಿರುವವರು ಸಹ ಮನೆಯಲ್ಲಿ ಬಿಪಿಯ ಮೇಲೆ ನಿಗಾಯಿರಿಸಬೇಕು. ದೈಹಿಕ ಚಟುವಟಿಕೆ,ತಾಪಮಾನ,ಆಹಾರ ಸೇವನೆ ಅಥವಾ ಭಾವನಾತ್ಮಕ ಒತ್ತಡ ಇತ್ಯಾದಿಗಳು ರಕ್ತದೊತ್ತಡದಲ್ಲಿ ಏರಿಳಿತಗಳಿಗೆ ಕಾರಣವಾಗುತ್ತವೆ. ಅಲ್ಲದೆ ಪ್ರತಿದಿನದ ರೀಡಿಂಗ್‌ಗಳನ್ನು ಗಮನಿಸಿ ಅವುಗಳನ್ನು ವ್ಯವಸ್ಥಿತವಾಗಿ ಬರೆದಿಡುವುದು ಒಳ್ಳೆಯದು. ಔಷಧಿ ಸೇವನೆಯ ಹೊರತಾಗಿಯೂ ಬಿಪಿ ಹೆಚ್ಚುತ್ತಲೇ ಇದ್ದರೆ ಔಷಧಿಗಳನ್ನು ಬದಲಿಸಬೇಕೇ ಎನ್ನುವುದನ್ನು ನಿಮ್ಮ ವೈದ್ಯರು ನಿರ್ಧರಿಸುತ್ತಾರೆ.

►  ಡಿಜಿಟಲ್ ಬಿಪಿ ಮಾನಿಟರ್‌ಗಳು ನಿಖರವಲ್ಲ

 ಡಿಜಿಟಲ್ ಬಿಪಿ ಮಾನಿಟರ್‌ಗಳ ಜೊತೆಯಲ್ಲಿರುವ ಕಂಪನಿ ಕೈಪಿಡಿಗಳಲ್ಲಿಯ ಸೂಚನೆಗಳನ್ನು ಪಾಲಿಸಿದರೆ ಅವು ನಿಖರವಾದ ಫಲಿತಾಂಶಗಳನ್ನು ನೀಡುತ್ತವೆ. ಅಲ್ಲದೆ ಈ ಮಾನಿಟರ್‌ಗಳನ್ನು ಮನೆಯಲ್ಲಿಯೇ ತ್ವರಿತವಾಗಿ ಪರೀಕ್ಷಿಸಲು,ಮೊದಲ ಬಾರಿಗೆ ಬಳಸುವವರು ಮತ್ತು ಮನೆಗಳಲ್ಲಿ ಒಂಟಿಯಾಗಿರುವವರು ಯಾರದೇ ನೆರವಿಲ್ಲದೆ ಬಳಸಲು ಸಾಧ್ಯವಾಗಿರುವಂತೆ ವಿನ್ಯಾಸಗೊಳಿಸಿರಲಾಗುತ್ತದೆ. ಬ್ಲೂಟೂಥ್‌ನಂತಹ ಆಧುನಿಕ ತಂತ್ರಜ್ಞಾನದ ಮೂಲಕ ಯಾರೇ ಆದರೂ ಹಾಲಿ ಮತ್ತು ಹಿಂದಿನ ರೀಡಿಂಗ್‌ಗಳನ್ನು ರಿಯಲ್ ಟೈಮ್‌ನಲ್ಲಿ ತಮ್ಮ ವೈದ್ಯರೊಂದಿಗೆ ಹಂಚಿಕೊಳ್ಳಬಹುದು. ಇದು ವೈದ್ಯರು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ನೆರವಾಗುತ್ತದೆ.

         

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News