ಮಾಸ್ಕ್ ಖರೀದಿಸುತ್ತೀರಾ?: ಈ ವಿಷಯಗಳು ಗಮನದಲ್ಲಿರಲಿ

Update: 2020-08-30 13:24 GMT

 ಕೊರೋನ ವೈರಸ್ ಪಿಡುಗನ್ನು ತಡೆಯಲು ಸರಣಿ ಲಾಕ್‌ಡೌನ್‌ಗಳನ್ನು ನಾವು ಅನುಭವಿಸಿದ್ದೇವೆ. ಈಗ ಕೆಲವೊಂದು ನಿರ್ಬಂಧಗಳನ್ನು ಹೊರತುಪಡಿಸಿದರೆ ಇತರ ನಿರ್ಬಂಧಗಳನ್ನು ಹಂತಹಂತವಾಗಿ ಹಿಂದೆಗೆದುಕೊಳ್ಳಲಾಗಿದೆ. ಹಾಗೆಂದು ಕೊರೋನ ವೈರಸ್ ಪಿಡುಗೇನೂ ಮುಗಿದಿಲ್ಲ,ಬದಲಿಗೆ ಹೆಚ್ಚುತ್ತಲೇ ಇದೆ. ಹೀಗಾಗಿ ನಾವು ವಿಶ್ವ ಆರೋಗ್ಯ ಸಂಸ್ಥೆಯು ಬಿಡುಗಡೆಗೊಳಿಸಿರುವ ಮಾರ್ಗಸೂಚಿಗಳನ್ನು ಅನುಸರಿಸದಿದ್ದರೆ ಈ ಮಾರಣಾಂತಿಕ ಸೋಂಕಿಗೆ ತುತ್ತಾಗುವ ಅಪಾಯ ಎಂದಿಗಿಂತ ಹೆಚ್ಚಿದೆ.

 ನಮ್ಮ ಸುತ್ತ ಎಲ್ಲೆಲ್ಲೂ ಲಕ್ಷಣರಹಿತ ಪ್ರಕರಣಗಳು ಮತ್ತು ವೈರಸ್ ವಾಹಕರು ತುಂಬಿರುವ ಈ ದಿನಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮುನ್ನೆಚ್ಚರಿಕೆ ವಹಿಸದಿದ್ದರೆ ನಾವೂ ಸೋಂಕಿಗೆ ಗುರಿಯಾಗುವ ಹೆಚ್ಚಿನ ಸಾಧ್ಯತೆಗಳಿವೆ. ವೈರಸ್ ನಮ್ಮ ಮೂಗು ಮತ್ತು ಬಾಯಿಯ ಮೂಲಕ ನಮ್ಮ ಶರೀರವನ್ನು ಪ್ರವೇಶಿಸುತ್ತದೆ,ಇದೇ ಕಾರಣದಿಂದ ರಕ್ಷಣಾ ಸಾಧನಗಳನ್ನು ಧರಿಸುವುದು,ಸ್ಯಾನಿಟೈಜರ್‌ಗಳನ್ನು ಬಳಸುವುದು ಮತ್ತು ಆಗಾಗ್ಗೆ ಕೈಗಳನ್ನು ತೊಳೆದುಕೊಳ್ಳುವುದು ಅತ್ಯಗತ್ಯವಾಗಿದೆ.

 ಈ ಕೊರೋನ ಯುಗದಲ್ಲಿ ಮಾಸ್ಕ್ ನಮ್ಮ ಜೀವನಶೈಲಿಯ ಒಂದು ಭಾಗವಾಗಿಬಿಟ್ಟಿದೆ ಮತ್ತು ಅದು ಅಗತ್ಯವೂ ಆಗಿದೆ. ಮಾಸ್ಕ್‌ಗಳು ಕಳಪೆ ಗುಣಮಟ್ಟದ್ದಾಗಿರಬಾರದು ಮತ್ತು ನಮಗೆ ವೈರಸ್‌ನಿಂದ ಸೂಕ್ತ ರಕ್ಷಣೆಯನ್ನು ನೀಡಬೇಕು. ಹೀಗಾಗಿ ಮಾಸ್ಕ್‌ಗಳಿಗೆ ಕೆಲವು ಮಾನದಂಡಗಳನ್ನು ನಿಗದಿಗೊಳಿಸಲಾಗಿದೆ.

ಬಟ್ಟೆಯ/ಸರ್ಜಿಕಲ್ ಮಾಸ್ಕ್‌ಗಳಲ್ಲಿ ಪದರಗಳ ಸಂಖ್ಯೆ: ಒಂದೇ ಪದರವುಳ್ಳ ಮಾಸ್ಕ್ ವೈರಸ್ ಪ್ರವೇಶವನ್ನು ತಡೆಯಲು ಅಸಮರ್ಥವಾಗಿರುವುದರಿಂದ ಅದನ್ನು ಧರಿಸುವುದಕ್ಕೆ ಯಾವುದೇ ಅರ್ಥವಿಲ್ಲ. ಹಿಗಾಗಿ ಬಟ್ಟೆಯಿಂದ ತಯಾರಿಸಿದ ಮಾಸ್ಕ್‌ಗಳನ್ನು ಖರೀದಿಸುವಾಗ ಅದು ಕನಿಷ್ಠ ಮೂರು ಪದರಗಳನ್ನು ಹೊಂದಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು. ಸರ್ಜಿಕಲ್ ಮಾಸ್ಕ್ ಒಂದೇ ಪದರ ಹೊಂದಿದ್ದು ಒಂದು ಬಾರಿ ಬಳಕೆಗೆ ಮಾತ್ರ ಸೂಕ್ತವಾಗಿದೆ.

ಕಿವಿಯ ಲೂಪ್‌ಗಳು ಮತ್ತು ವಾಲ್ವ್‌ಗಳು: ಮೂಗು ಮತ್ತು ಮುಖ ಸರಿಯಾಗಿ ಮುಚ್ಚುವಂತೆ ಕಿವಿಯ ಲೂಪ್‌ಗಳು ಇಲಾಸ್ಟಿಕ್ ಆಧಾರಿತವಾಗಿರಬೇಕು ಮತ್ತು ಹೊಂದಿಸಿಕೊಳ್ಳುವಂತಿರಬೇಕು. ಬಹಳ ಹೊತ್ತು ಧರಿಸಿದರೆ ಈ ಲೂಪ್‌ಗಳು ಕಿವಿಯ ಹಿಂಭಾಗದಲ್ಲಿ ನೋವನ್ನುಂಟು ಮಾಡುತ್ತವೆ. ಹೀಗಾಗಿ ಹೆಚ್ಚು ಸಮಯ ಮನೆಯಿಂದ ಹೊರಗಿರುವವರು ಅನುಕೂಲಕರ ಮತ್ತು ಹಿತಕರವಾದ ಲೂಪ್‌ಗಳಿರುವ ಮಾಸ್ಕ್‌ಗಳನ್ನೇ ಖರೀದಿಸಬೇಕು. ವಾಲ್ವ್‌ಗಳು ಅಥವಾ ರೆಸ್ಪಿರೇಟರ್‌ಗಳಿರುವ ಮಾಸ್ಕ್‌ಗಳು ಉಸಿರಾಟಕ್ಕೆ ಹೆಚ್ಚಿನ ಅನುಕೂಲ ಮಾಡುವುದರಿಂದ ದೀರ್ಘ ಸಮಯದ ಬಳಕೆಗೆ ಅವುಗಳನ್ನು ಖರೀದಿಸಬಹುದು.

ಹೆಚ್ಚು ಪದರಗಳಿದ್ದಷ್ಟೂ ಮಾಸ್ಕ್ ಒಳ್ಳೆಯದು. ಎನ್ ಸಿರೀಸ್‌ನ ಮಾಸ್ಕ್‌ಗಳು ಉತ್ತಮ ರಕ್ಷಣೆಗಾಗಿ ಐದರವರೆಗೆ ಪದರಗಳನ್ನು ಹೊಂದಿರುತ್ತವೆ.

ಮಾಸ್ಕ್‌ನ ಜೀವಿತಾವಧಿ: ಸರ್ಜಿಕಲ್ ಮಾಸ್ಕ್ ಒಂದು ಬಾರಿಯ ಬಳಕೆಗೆ ಮಾತ್ರ ಇರುತ್ತದೆ ಮತ್ತು ಅದನ್ನು ಒಮ್ಮೆ ಧರಿಸಿ ತೆಗೆದ ನಂತರ ಮತ್ತೆ ಬಳಸಬಾರದು. ಎನ್ ಸಿರೀಸ್ ಮಾಸ್ಕ್‌ನ್ನು ಕೇವಲ 5-7 ದಿನಗಳ ಕಾಲ ಬಳಸಬಹುದು ಮತ್ತು ಅದರ ಅತಿಯಾದ ಬಳಕೆ ಸಲ್ಲದು. ನಿಗದಿತ ಜೀವಿತಾವಧಿ ಮುಗಿದ ಬಳಿಕ ಎನ್-ಸಿರೀಸ್ ಅಥವಾ ಸರ್ಜಿಕಲ್ ಮಾಸ್ಕನ್ನು ಒಗೆದು ಮತ್ತೆ ಬಳಸಬಾರದು,ಏಕೆಂದರೆ ಅದು ವೈರಸ್ ಹರಡುವಿಕೆಯನ್ನು ತಡೆಯಲು ಅಸಮರ್ಥವಾಗಿರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News