ಹಿಮ್ಮಡಿ ಮತ್ತು ಅಂಗಾಲು ನೋವಿನಿಂದ ಪಾರಾಗಲು ಸರಳ ಉಪಾಯಗಳಿಲ್ಲಿವೆ

Update: 2020-08-31 14:12 GMT

ಹಿಮ್ಮಡಿ ಮತ್ತು ಅಂಗಾಲುಗಳಲ್ಲಿ ನೋವು ಕಾಣಿಸಿಕೊಳ್ಳಲು ಹಲವಾರು ಕಾರಣಗಳಿವೆ. ಸಾಮಾನ್ಯವಾಗಿ ಹೆಚ್ಚಿನ ನಡಿಗೆ,ಓಟ,ಡ್ಯಾನ್ಸಿಂಗ್ ಅಥವಾ ತಪ್ಪು ಅಳತೆಯ ಶೂಗಳ ಧರಿಸುವಿಕೆಯಿಂದ ಈ ನೋವು ಉಂಟಾಗುತ್ತದೆ. ಅಲ್ಲದೆ ಕೆಲವೊಮ್ಮೆ ಅಭಿಧಮನಿಗಳ ಹಿಗ್ಗುವಿಕೆಯೂ ಪಾದಗಳು ಮತ್ತು ಅಂಗಾಲುಗಳಲ್ಲಿ ನೋವನ್ನುಂಟು ಮಾಡುತ್ತದೆ. ಈ ನೋವು ನಮ್ಮ ದೈನಂದಿನ ಚಟುವಟಿಕೆಗಳಿಗೆ ವ್ಯತ್ಯಯವನ್ನುಂಟು ಮಾಡುತ್ತದೆ. ಹೀಗಾಗಿ ಹಿಮ್ಮಡಿ ಮತ್ತು ಅಂಗಾಲುಗಳಲ್ಲಿಯ ನೋವನ್ನು ಕಡೆಗಣಿಸಬೇಡಿ. ನೋವಿನಿಂದ ಪಾರಾಗಲು ಈ ಸುಲಭ ಮತ್ತು ಪರಿಣಾಮಕಾರಿ ಮನೆಮದ್ದುಗಳನ್ನು ಬಳಸಿ. ಆದಾಗ್ಯೂ ನೋವು ಕಡಿಮೆಯಾಗದಿದ್ದರೆ ಅದಕ್ಕೆ ಮೂಲಕಾರಣವನ್ನು ತಿಳಿದುಕೊಂಡು ಸೂಕ್ತ ಚಿಕಿತ್ಸೆ ಪಡೆಯಲು ವೈದ್ಯರ ಭೇಟಿ ಅಗತ್ಯವಾಗುತ್ತದೆ.

* ಐಸ್ ಬಾಟಲ್ ಮಸಾಜ್

 ಅಂಗಾಲುಗಳಲ್ಲಿ ಊತ ಅಥವಾ ನೋವಿನಿಂದ ನರಳುತ್ತಿರುವವರಿಗೆ ಐಸ್ ಬಾಟಲ್ ಮಸಾಜ್ ತುಂಬ ಉಪಯೋಗಿಯಾಗಿದೆ. ಇದಕ್ಕಾಗಿ ಪ್ಲಾಸ್ಟಿಕ್ ಬಾಟಲ್‌ನಲ್ಲಿ ಮುಕ್ಕಾಲು ಭಾಗ ನೀರನ್ನು ತುಂಬಿ ಅದನ್ನು ಫ್ರೀಝರ್‌ನಲ್ಲಿರಿಸಿ. ನೀರು ಘನೀಕೃತಗೊಂಡ ಬಳಿಕ ಬಾಟಲ್‌ನ್ನು ಹೊರಗೆ ತೆಗೆದು ಚೆನ್ನಾಗಿ ಒರೆಸಿಕೊಳ್ಳಿ. ಈಗ ಬಾಟಲ್‌ನ್ನು ಒಣ ಟವೆಲ್,ಬಟ್ಟೆ ಅಥವಾ ಡೋರ್‌ಮ್ಯಾಟ್ ಮೇಲಿರಿಸಿ ಖುರ್ಚಿಯಲ್ಲಿ ಕುಳಿತುಕೊಂಡು ಬಾಟಲ್‌ನ ಮೇಲೆ ನಿಮ್ಮ ಪಾದವನ್ನು ಇರಿಸಿ ಹಿಮ್ಮಡಿಯಿಂದ ಅದನ್ನು ಹಿಂದೆ ಮುಂದೆ ಮಾಡುತ್ತಿರಿ. ಇದರಿಂದ ಹಿಮ್ಮಡಿಗಳಲ್ಲಿ ರಕ್ತಸಂಚಾರವು ಹೆಚ್ಚುತ್ತದೆ ಮತ್ತು ಸ್ನಾಯುವಿಗೆ ಸೌಮ್ಯ ಮಸಾಜ್ ದೊರೆಯುತ್ತದೆ. ಹಿಮ್ಮಡಿಯ ನೋವು ಸಂಪೂರ್ಣವಾಗಿ ಗುಣವಾಗುವವರೆಗೆ ಪ್ರತಿದಿನ 10-15 ನಿಮಿಷಗಳ ಕಾಲ ಇದನ್ನು ಮಾಡಿ.

* ಬಿಸಿ ಮತ್ತು ತಣ್ಣೀರಿನ ಚಿಕಿತ್ಸೆ

ಹಿಮ್ಮಡಿಗಳ ನೋವು ನಿವಾರಿಸಲು ಈ ಚಿಕಿತ್ಸೆ ಅತ್ಯುತ್ತಮವಾಗಿದೆ. ಎರಡು ಬಕೆಟ್‌ಗಳನ್ನು ತೆಗೆದುಕೊಂಡು ಒಂದರಲ್ಲಿ ತಣ್ಣೀರು ಮತ್ತು ಇನ್ನೊಂದರಲ್ಲಿ ಬೆಚ್ಚಗಿನ ನೀರನ್ನು ತುಂಬಿ. ಮೊದಲು ಪಾದವನ್ನು ಬೆಚ್ಚಗಿನ ನೀರಿನಲ್ಲಿ ಮೂರು ನಿಮಿಷಗಳ ಕಾಲ ಮುಳುಗಿಸಿದ ಬಳಿಕ ತಣ್ಣೀರಿನ ಬಕೆಟ್‌ನಲ್ಲಿ ಮೂರು ನಿಮಿಷಗಳ ಕಾಲ ಮುಳುಗಿಸಿ. ವಿರಾಮ ನೀಡದೆ ಈ ಪ್ರಕ್ರಿಯೆಯನ್ನು 2-3 ಸಲ ಪುನರಾವರ್ತಿಸಿ. ಇದು ಪಾದದ ಸ್ನಾಯು ಅಥವಾ ನರದ ಬಿಗಿತದಿಂದ ಆರಾಮವನ್ನು ನೀಡುತ್ತದೆ.

* ಫೂಟ್ ಸೋಕ್

ಕಲ್ಲುಪ್ಪು ಇನ್ನೊಂದು ಪರಿಣಾಮಕಾರಿ ಮನೆಮದ್ದಾಗಿದ್ದು ಪಾದದ ನೋವನ್ನು ತಕ್ಷಣ ಶಮನಗೊಳಿಸಲು ನೆರವಾಗುತ್ತದೆ. ಬಿಸಿನೀರಿನ ಟಬ್‌ಗೆ 2-3 ಟೇಬಲ್‌ಸ್ಪೂನ್ ಕಲ್ಲುಪ್ಪನ್ನು ಸೇರಿಸಿ ಅದು ಕರಗುವಂತೆ ಮಾಡಿ. ಈಗ 10-15 ನಿಮಿಷಗಳ ಕಾಲ ಪಾದವನ್ನು ಈ ನೀರಿನಲ್ಲಿ ಮುಳುಗಿಸಿ. ಬಳಿಕ ಪಾದವನ್ನು ಹೊರಗೆ ತೆಗೆದು ಮಾಯಿಶ್ಚರೈಸರ್ ಲೇಪಿಸಿ ಮೃದುವಾಗಿ ಮಸಾಜ್ ಮಾಡಿ.

* ಎಣ್ಣೆಯ ಮಸಾಜ್

  ಎಣ್ಣೆಯಿಂದ ಮಸಾಜ್ ರಕ್ತ ಸಂಚಾರವನ್ನು ಹೆಚ್ಚಿಸುವ ಜೊತೆಗೆ ಉರಿಯೂತವನ್ನೂ ತಗ್ಗಿಸುತ್ತದೆ. ಹಿಮ್ಮಡಿಗಳು ಮತ್ತು ಅಂಗಾಲುಗಳು ಸೇರಿದಂತೆ ಪಾದಗಳಿಗೆ ಲಘುವಾಗಿ ಮಸಾಜ್ ಮಾಡಿ. ಇದಕ್ಕಾಗಿ ಆಲಿವ್ ಎಣ್ಣೆ,ಲ್ಯಾವೆಂಡರ್ ಎಣ್ಣೆ,ತೆಂಗಿನೆಣ್ಣೆ ಹೀಗೆ ನಿಮ್ಮ ಆಯ್ಕೆಯ ಯಾವುದೇ ತೈಲವನ್ನು ಬಳಸಬಹುದು. ಈ ಮಸಾಜ್ ಸ್ನಾಯುಗಳಲ್ಲಿ ರಕ್ತಸಂಚಾರವನ್ನು ಹೆಚ್ಚಿಸುತ್ತದೆ. ಸ್ನಾಯುಗಳು ಬಿಸಿಯಾಗಿ ನೋವನ್ನುಂಟು ಮಾಡುವ ಲ್ಯಾಕ್ಟಿಕ್ ಆ್ಯಸಿಡ್ ನಿವಾರಣೆಯಾಗುತ್ತದೆ.

* ಮಂಜುಗಡ್ಡೆ

 ಮಂಜುಗಡ್ಡೆ ಚಿಕಿತ್ಸೆಯೂ ಪಾದಗಳ ಊತ ಮತ್ತು ನೋವನ್ನು ಕಡಿಮೆ ಮಾಡುವ ಪರಿಣಾಮಕಾರಿ ವಿಧಾನವಾಗಿದೆ. ಮಂಜುಗಡ್ಡೆಯನ್ನು ಜಜ್ಜಿ ಸಣ್ಣ ಪ್ಲಾಸ್ಟಿಕ್ ಬ್ಯಾಗ್‌ನಲ್ಲಿ ಹಾಕಿಕೊಂಡು ಅದರಿಂದ ಪೀಡಿತ ಭಾಗದಲ್ಲಿ ವೃತ್ತಾಕಾರವಾಗಿ ಮಸಾಜ್ ಮಾಡಿ. ಇದು ಉರಿಯೂತ ಮತ್ತು ನೋವನ್ನು ಶಮನಿಸಲು ನೆರವಾಗುತ್ತದೆ. ಆದರೆ ಈ ಐಸ್‌ಪ್ಯಾಕ್‌ನ್ನು ಒಂದು ಸಲಕ್ಕೆ 10 ನಿಮಿಷಕ್ಕಿಂತ ಹೆಚ್ಚು ಬಳಸಬೇಡಿ. ಹೆಚ್ಚಿನ ಅವಧಿಗೆ ಬಳಸಿದರೆ ಅದು ಚರ್ಮ ಮತ್ತು ನರಗಳಿಗೆ ಹಾನಿಯನ್ನುಂಟು ಮಾಡಬಲ್ಲದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News