ಕತರ್: ಇನ್ನು ವಲಸೆ ಕಾರ್ಮಿಕರು ಉದ್ಯೋಗ ಬದಲಿಸಲು ಮಾಲಕರ ಒಪ್ಪಿಗೆ ಬೇಕಿಲ್ಲ

Update: 2020-08-31 14:25 GMT

ಜಿನೀವ (ಸ್ವಿಟ್ಸರ್‌ಲ್ಯಾಂಡ್), ಆ. 31: ಹಳೆಯ ಉದ್ಯೋಗ ವ್ಯವಸ್ಥೆಯೊಂದನ್ನು ರದ್ದುಪಡಿಸಿರುವುದಕ್ಕಾಗಿ ವಿಶ್ವಸಂಸ್ಥೆಯ ಕಾರ್ಮಿಕ ಘಟಕವು ರವಿವಾರ ಕತರ್ ದೇಶವನ್ನು ಶ್ಲಾಘಿಸಿದೆ.

ಆ ಉದ್ಯೋಗ ವ್ಯವಸ್ಥೆಯ ಪ್ರಕಾರ, ವಲಸಿಗ ಕಾರ್ಮಿಕರು ತಮ್ಮ ಕೆಲಸವನ್ನು ಬದಲಾಯಿಸಬೇಕಾದರೆ ತಮ್ಮ ಉದ್ಯೋಗದಾತರ ಅನುಮೋದನೆಯನ್ನು ಪಡೆದುಕೊಳ್ಳಬೇಕಾಗಿತ್ತು.

ಕತರ್ ತನ್ನ ಉದ್ಯೋಗ ಮಾರುಕಟ್ಟೆಗೆ ಪ್ರಮುಖ ಬದಲಾವಣೆಗಳನ್ನು ತಂದಿದ್ದು, ತಾರತಮ್ಯರಹಿತ ಕನಿಷ್ಠ ವೇತನವನ್ನು ಅಂಗೀಕರಿಸಿದ ಈ ವಲಯದ ಮೊದಲ ದೇಶವಾಗಿದೆ ಎಂದು ಅಂತರ್‌ರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ಐಎಲ್‌ಒ) ಹೇಳಿದೆ. ಇದರೊಂದಿಗೆ ವಲಸಿಗ ಕಾರ್ಮಿಕರು ತಮ್ಮ ಉದ್ಯೋಗವನ್ನು ಬದಲಾಯಿಸಬೇಕಾದರೆ ತಮ್ಮ ಧಣಿಗಳ ಒಪ್ಪಿಗೆಯನ್ನು ಪಡೆದುಕೊಳ್ಳಬೇಕೆಂಬ ನಿಯಮವೊಂದು ಕೊನೆಗೊಂಡಿದೆ ಎಂದು ಅದು ತಿಳಿಸಿದೆ.

‘‘ಈ ಮಹತ್ವದ ಬದಲಾವಣೆಗಳನ್ನು ಜಾರಿಗೆ ತರುವ ಮೂಲಕ, ಕತರ್ ತನ್ನ ಬದ್ಧತೆಯೊಂದನ್ನು ಪೂರೈಸಿದೆ. ಇದು ವಲಸೆ ಕಾರ್ಮಿಕರಿಗೆ ಹೆಚ್ಚಿನ ಸ್ವಾತಂತ್ರ್ಯ ಮತ್ತು ರಕ್ಷಣೆ ಹಾಗೂ ಉದ್ಯೋಗದಾತರಿಗೆ ಹೆಚ್ಚಿನ ಆಯ್ಕೆಗಳನ್ನು ಒದಗಿಸಿದೆ. ಎಲ್ಲರಿಗೂ ನ್ಯಾಯೋಚಿತ ಕೆಲಸದ ವಾತಾವರಣವನ್ನು ಸೃಷ್ಟಿಸುವ ನಿಟ್ಟಿನಲ್ಲಿ ಸರಕಾರಗಳು, ಕಾರ್ಮಿಕರು ಮತ್ತು ಉದ್ಯೋಗದಾತರು ಅಂತರ್‌ರಾಷ್ಟ್ರೀಯ ಕಾರ್ಮಿಕ ಸಂಸ್ಥೆಯೊಂದಿಗೆ ಜೊತೆಯಾಗಿ ಕೆಲಸ ಮಾಡಿದರೆ ಏನೇನೆಲ್ಲವನ್ನು ಸಾಧಿಸಬಹುದು ಎನ್ನುವುದನ್ನು ನಾವೀಗ ನೋಡುತ್ತಿದ್ದೇವೆ’’ ಎಂದು ಸಂಸ್ಥೆಯ ಮಹಾನಿರ್ದೇಶಕ ಗಯ್ ರೈಡರ್ ಹೇಳಿದರು.

ತಾರತಮ್ಯರಹಿತ 1,000 ಕತರಿ ರಿಯಾಲ್ (ಸುಮಾರು 20,150 ರೂಪಾಯಿ)ನ ತಾರತಮ್ಯರಹಿತ ಕನಿಷ್ಠ ವೇತನವನ್ನು ಅಂಗೀಕರಿಸಿದ ಮೊದಲ ದೇಶವೂ ಕತರ್ ಆಗಿದೆ ಎಂದು ವಿಶ್ವ ಕಾರ್ಮಿಕ ಸಂಸ್ಥೆ ತಿಳಿಸಿದೆ.

ನೂತನ ಕಾನೂನು ಘೋಷಣೆಯಾದ ಆರು ತಿಂಗಳಲ್ಲಿ ಜಾರಿಗೆ ಬರಲಿದೆ.

 ‘ಕಫಾಲ’ ಸ್ಪಾನ್ಸರ್‌ಶಿಪ್ ವ್ಯವಸ್ಥೆಯಿಂದ ಮುಕ್ತಿ

ವಲಸೆ ಕಾರ್ಮಿಕರಿಗೆ ಸಂಬಂಧಿಸಿದ ಕಾನೂನಿಗೆ ಖತರ್ ಸರಕಾರ ತಿದ್ದುಪಡಿ ತಂದ ಬಳಿಕ, ‘ಕಫಾಲ’ ಸ್ಪಾನ್ಸರ್‌ಶಿಪ್ ವ್ಯವಸ್ಥೆ ಕೊನೆಗೊಂಡಿದೆ ಹಾಗೂ ಕತರ್ ಕಾರ್ಮಿಕ ಮಾರುಕಟ್ಟೆಯ ನೂತನ ಶಕೆಯೊಂದು ಆರಂಭಗೊಂಡಿದೆ ಎಂದು ವಿಶ್ವ ಕಾರ್ಮಿಕ ಸಂಸ್ಥೆ ತಿಳಿಸಿದೆ.

ಫುಟ್ಬಾಲ್ ವಿಶ್ವಕಪ್ ಕಾರಣ?

2022ರ ಫಿಫಾ ಫುಟ್ಬಾಲ್ ವಿಶ್ವಕಪ್ ಕತರ್‌ನಲ್ಲಿ ನಡೆಯಲಿದ್ದು, ಅದಕ್ಕೆ ಪೂರ್ವಭಾವಿಯಾಗಿ ಈ ಬೆಳವಣಿಗೆ ನಡೆದಿದೆ. ಕಾರ್ಮಿಕ ಸುಧಾರಣೆಗಳನ್ನು ತರುವ ಭರವಸೆಯನ್ನು ಕತರ್ ನೀಡಿದ ಬಳಿಕ, ಈ ವಿಶ್ವಕಪ್ ಆತಿಥ್ಯವನ್ನು ಅದಕ್ಕೆ ನೀಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News