ಬೆಂಗಳೂರಿನಲ್ಲಿ 1,862 ಮಂದಿಗೆ ಕೊರೋನ ದೃಢ: ಸೋಂಕಿತರ ಸಂಖ್ಯೆ 1,27,336ಕ್ಕೆ ಏರಿಕೆ

Update: 2020-08-31 16:11 GMT

ಬೆಂಗಳೂರು, ಆ.31: ನಗರದಲ್ಲಿ ಸೋಮವಾರ ಒಂದೇ ದಿನ 1,862 ಜನರಿಗೆ ಕೊರೋನ ಸೋಂಕು ದೃಢಪಟ್ಟಿದೆ. 2,422 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇನ್ನು ಸೋಂಕಿಗೆ 27 ಜನರು ಮೃತರಾಗಿದ್ದಾರೆ.

ನಗರದಲ್ಲಿ ಒಟ್ಟು 1,27,336 ಸೋಂಕಿತರು ದೃಢಪಟ್ಟಿದ್ದು, ಇಲ್ಲಿಯವರೆಗೆ 1,965 ಜನರು ಸೋಂಕಿಗೆ ಬಲಿಯಾಗಿದ್ದಾರೆ. 90,043 ಜನರು ಇಲ್ಲಿಯವರೆಗೆ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಕೋವಿಡ್ ನಿಗದಿತ ಆಸ್ಪತ್ರೆಗಳು ಹಾಗೂ ಆರೋಗ್ಯ ಕೇಂದ್ರಗಳು ಹಾಗೂ ಆರೈಕೆ ಕೇಂದ್ರಗಳು ಒಳಗೊಂಡಂತೆ 37,116 ಜನ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ 150 ಜ್ವರ ಚಿಕಿತ್ಸಾಲಯದಲ್ಲಿ ಒಟ್ಟು 1,71,240 ವ್ಯಕ್ತಿಗಳಿಗೆ ತಪಾಸಣೆ ಮಾಡಲಾಗಿದೆ.

ರವಿವಾರದ ಬಿಬಿಎಂಪಿ ಕೋವಿಡ್ ವರದಿಯಲ್ಲಿ ನಗರದಲ್ಲಿ ಒಟ್ಟು ಸಕ್ರಿಯ 15,723 ಕಂಟೈನ್ಮೆಂಟ್ ಝೋನ್‍ಗಳಿವೆ. ಇದುವರೆಗೂ 40,563 ಕಂಟೈನ್ಮೆಂಟ್ ಝೋನ್‍ಗಳನ್ನು ಗುರುತಿಸಲಾಗಿದೆ.

ನಗರದ 3,29,029 ಜನರನ್ನು ಪ್ರಾಥಮಿಕ ಸಂಪರ್ಕಿತರನ್ನು ಗುರುತಿಸಲಾಗಿದ್ದು, ದ್ವಿತೀಯ ಸಂಪರ್ಕಿತ 4,22,446 ಜನರನ್ನು ಗುರುತಿಸಲಾಗಿದೆ. ನಗರದಲ್ಲಿ 8,42,277 ಜನರಿಗೆ ಕೊರೋನ ಪರೀಕ್ಷೆ ನಡೆಸಲಾಗಿದ್ದು, ಇದರಲ್ಲಿ ಪಾಸಿಟಿವ್ ಪ್ರಮಾಣ ಶೇ.15.11 ರಷ್ಟಿದೆ. ಕೊರೋನ ಸೋಂಕಿಗೆ ಮೃತರಾಗುತ್ತಿರುವ ಪ್ರಮಾಣ ಶೇ.1.54 ರಷ್ಟಿದ್ದು, ಗುಣಮುಖರಾಗುತ್ತಿರುವ ಪ್ರಮಾಣ ಶೇ.68.48ರಷ್ಟಿದೆ.

ತಗ್ಗಿದ ವೈದ್ಯಕೀಯ ಉಪಕರಣಗಳ ಬೇಡಿಕೆ

ಮೊದ ಮೊದಲು ಕೊರೋನ ಹಬ್ಬುತ್ತಿರುವಾಗ ಜನ ಭೀತಿಗೊಳಗಾಗಿ ಹೆಚ್ಚಾಗಿ ವೈದ್ಯಕೀಯ ಉಪಕರಣಗಳನ್ನು ಖರೀದಿಸುತ್ತಿದ್ದರು. ಹಾಗಾಗಿ ಶೇ.100ರಷ್ಟು ಬೇಡಿಕೆ ಹೆಚ್ಚಿತ್ತು. ಆದರೆ ಅದೀಗ ಶೇ.30ಕ್ಕೆ ಇಳಿದಿದೆ. ಈಗ ಪಲ್ಸ್ ಆಕ್ಸಿಮೀಟರ್, ಥರ್ಮೋಮೀಟರ್ ಮೆಡಿಕಲ್ ಶಾಪ್‍ನಲ್ಲಿ ಮಾತ್ರವಲ್ಲದೇ ಬೇರೆ ಅಂಗಡಿಗಳಲ್ಲಿಯೂ ಮಾರುತ್ತಿದ್ದಾರೆ. ಆದರೆ, ಮೆಡಿಕಲ್ ಸ್ಟೋರ್ ಬಿಟ್ಟು ಬೇರೆಡೆ ಕೊಂಡುಕೊಳ್ಳುವಾಗ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ಬೃಹತ್ ಬೆಂಗಳೂರು ಮೆಡಿಕಲ್ ಅಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ಹರೀಶ್ ಸಲಹೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News