ಕೊರೋನಕ್ಕೆ ಬಲಿಯಾದ ವೈದ್ಯರನ್ನು ಹುತಾತ್ಮರೆಂದು ಪರಿಗಣಿಸಿ: ಪ್ರಧಾನಿಗೆ ಐಎಂಎ ಆಗ್ರಹ

Update: 2020-08-31 17:00 GMT

 ಹೊಸದಿಲ್ಲಿ, ಅ.31: ಕೋವಿಡ್-19 ಸೋಂಕಿನಿಂದ ಮೃತಪಟ್ಟ ಎಲ್ಲಾ ವೈದ್ಯರನ್ನು ಹುತಾತ್ಮರೆಂಬುದಾಗಿ ಪರಿಗಣಿಸಬೇಕು ಹಾಗೂ ಅವರನ್ನು ಅವಲಂಬಿಸಿದವರಿಗೆ ಅರ್ಹತೆಗನುಸಾರ ಸರಕಾರಿ ಉದ್ಯೋಗಳನ್ನು ನೀಡಬೇಕೆಂದು ಆಗ್ರಹಿಸಿ ಭಾರತೀಯ ಮೆಡಿಕಲ್‌ಅಸೋಸಿಯೇಶನ್ (ಐಎಂಎ) ಸೋಮವಾರ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದೆ.

 ಈವರೆಗೆ ವೈದ್ಯರು ಸೇರಿಂತೆ 87,000 ಆರೋಗ್ಯಪಾಲನಾ ಕಾರ್ಯಕರ್ತರಿಗೆ ಕೋವಿಡ್-19 ಸೋಂಕಿತರಾಗಿದ್ದಾರೆ ಹಾಗೂ ಅವರಲ್ಲಿ 573 ಮಂದಿ ಮೃತಪಟ್ಟಿದ್ದಾರೆಂದು ಅದು ಹೇಳಿದೆ.

  ಆದಾಗ್ಯೂ, ಈ ಅಂಕಿಅಂಶಗಳನ್ನು ಕೇಂದ್ರ ಸರಕಾರವು ಅಧಿಕೃತವಾಗಿ ಪ್ರಕಟಿಸಿಲ್ಲವೆಂದು ತಿಳಿದುಬಂದಿದೆ. ಈವರೆಗೆ 2006 ಮಂದಿ ವೈದ್ಯರಿಗೆ ಸೋಂಕು ತಗಲಿದೆ ಹಾಗೂ 307 ಮಂದಿ ಬಲಿಯಾಗಿದ್ದಾರೆ. ಮೃತ ವೈದ್ಯರಲ್ಲಿ 188 ಮಂದಿ ಜನರಲ್ ಪ್ರಾಕ್ಟಿಶನರ್ ‌ಗಳಾಗಿದ್ದು, ಅವರೆಲ್ಲರೂ ಚಿಕಿತ್ಸೆ ನೀಡುವ ಸಂದರ್ಭ ಸೋಂಕಿತ ರೋಗಿಗಳಿಗೆ ಸಂಪರ್ಕಕ್ಕೆ ಬಂದಿದ್ದರು ಎಂದು ಐಎಂಎ ತಿಳಿಸಿದೆ.

 ‘‘ ಸಾಂಕ್ರಾಮಿಕದ ಹಾವಳಿಯ ಸಂದರ್ಭ ಈ ವೈದ್ಯರು ಮನೆಯಲ್ಲಿ ಉಳಿದುಕೊಂಡು ಸುರಕ್ಷಿತವಾಗಿರಬಹುದಾಗಿತ್ತು. ಆದರೆ ಅವರು ವೈದ್ಯಕೀಯ ವೃತ್ತಿಯ ಶ್ರೇಷ್ಠ ಪರಂಪರೆಗೆ ಅನುಗುಣವಾಗಿ ದೇಶಕ್ಕೆ ಸೇವೆ ಸಲ್ಲಿಸುವುದನ್ನು ಆಯ್ಕೆ ಮಾಡಿಕೊಂಡರು’’ ಎಂದು ಆಗಸ್ಟ್ 30ರಂದು ಪ್ರಕಟವಾದ ಪತ್ರವು ತಿಳಿಸಿದೆ.

  ‘‘ ಈ ಸಾಂಕ್ರಾಮಿಕದ ವಿರುದ್ಧ ಹೋರಾಡುತ್ತಾ ತಮ್ಮ ಪ್ರಾಣವನ್ನು ಕಳೆದುಕೊಂಡ ಎಲ್ಲಾ ವೈದ್ಯರನ್ನು ಭಾರತೀಯ ಶಸ್ತ್ರಾಸ್ತ್ರ ಪಡೆಗಳ ಹುತಾತ್ಮರಿಗೆ ಸರಿಸಮಾನವಾಗಿ ಪರಿಗಣಿಸಬೇಕು ಹಾಗೂ ಅವರ ಸೇವೆಯನ್ನು ಸೂಕ್ತವಾಗಿ ಗೌರವಿಸಬೇಕು. ಅವರ ಪತಿ ಯಾ ಪತ್ನಿ ಅಥವಾ ಅವಲಂಬಿತರಿಗೆ ಅವರ ಅರ್ಹತೆಗೆ ಅನುಗುಣವಾಗಿ ಸರಕಾರಿ ಉದ್ಯೋಗವನ್ನು ನೀಡಬೇಕು’’ ಎಂದು ಐಎಂಎ ತಿಳಿಸಿದೆ.

ಆಡಳಿತದ ಅನಾಸಕ್ತಿ, ಅಸಮರ್ಪಕ ವ್ಯವಸ್ಥೆಯಿಂದಾಗಿ, ಸಂತ್ರಸ್ತ ಅವಲಂಭಿತರಿಗೆ ಪರಿಹಾರವು ಕೈಸೇರುವಲ್ಲಿ ವಿಫಲವಾಗಿದೆ ಎಂದು ಐಎಂಎ ಪತ್ರದಲ್ಲಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News