ರಾಷ್ಟ್ರೀಯ ಶಿಕ್ಷಣ ನೀತಿ, ಸಂವಿಧಾನ ಮತ್ತು ಗಣತಂತ್ರ ವ್ಯವಸ್ಥೆ

Update: 2020-08-31 19:30 GMT

ಕೇಂದ್ರ ಸರಕಾರದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಒಂದು ಚೌಕಟ್ಟು/ಮಾರ್ಗಸೂಚಿಯಾಗಿ ಮಾತ್ರವೇ ಸ್ವಾಗತಿಸಬೇಕಾಗಿದೆಯೇ ಹೊರತು ಗಣತಂತ್ರ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಅದೇ ಧರ್ಮಗ್ರಂಥವಾಗಬಾರದು. ನಮ್ಮ ಧರ್ಮಗ್ರಂಥ ಒಂದೇ ಅದು ನಮ್ಮ ಸಂವಿಧಾನ. ನಮ್ಮ ರಾಜಕೀಯ ಕಾರಣಗಳಿಗೆ ಸಂವಿಧಾನವನ್ನು ಉಲ್ಲಂಘಿಸಿ, ರಾಜ್ಯದ ಅಸ್ಮಿತೆಯನ್ನು ಕಡೆಗಣಿಸಿ ಅನುಷ್ಠಾನಕ್ಕೆ ಮುಂದಾದರೆ ಅದು ಸಂವಿಧಾನಕ್ಕೆ ಎಸಗುವ ಅಪಚಾರವಲ್ಲದೆ ರಾಜ್ಯದ ಅಸ್ಮಿತೆ ಮತ್ತು ಜನತೆಗೆ ತೋರುವ ಅಗೌರವ. 


ಅಭಿವೃದ್ಧಿ ಶಿಕ್ಷಣತಜ್ಞ ಜುಲೈ 29,2020ರಂದು ಕೇಂದ್ರ ಸರಕಾರದ ಸಚಿವ ಸಂಪುಟವು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅಂಗೀಕರಿಸಿದ ನಂತರ ದೇಶಾದ್ಯಂತ ಹಲವು ಚರ್ಚೆಗಳು ನಡೆಯುತ್ತಿವೆ. ಯಾವ ರಾಜ್ಯಗಳಲ್ಲಿ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ರಾಜಕೀಯ ಪಕ್ಷವೇ ಆಡಳಿತ ನಡೆಸುತ್ತಿವೆಯೋ, ಆ ರಾಜ್ಯಗಳು ಈ ಶಿಕ್ಷಣ ನೀತಿಯನ್ನು ತಕ್ಷಣವೇ ಜಾರಿಗೊಳಿಸುವುದಾಗಿ ಹೇಳುತ್ತಿದ್ದು, ಅನುಷ್ಠಾನಕ್ಕೆ ಸಮಿತಿಗಳನ್ನೂ ರಚಿಸಿವೆ. ನಮ್ಮ ರಾಜ್ಯದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಾಗೂ ಉನ್ನತ ಶಿಕ್ಷಣ ಸಚಿವರು ನೀತಿಯನ್ನು ಆದಷ್ಟು ಶೀಘ್ರವಾಗಿ ಜಾರಿಗೊಳಿಸುವ ಬಗ್ಗೆ ಮೇಲಿಂದ ಮೇಲೆ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ಗಣತಂತ್ರವ್ಯವಸ್ಥೆಯಲ್ಲಿ ಕೇಂದ್ರಸರಕಾರವು ರೂಪಿಸುವ ನೀತಿಗಳು ರಾಜ್ಯಸರಕಾರಗಳನ್ನು ಎಷ್ಟರಮಟ್ಟಿಗೆ ನಿರ್ಬಂಧಕ್ಕೊಳಪಡಿಸುತ್ತವೆ ಎಂಬುದನ್ನು ಸಾಂವಿಧಾನಿಕ ಚೌಕಟ್ಟಿನಲ್ಲಿ ನೋಡುವುದು ಬಹಳ ಮುಖ್ಯವಾಗುತ್ತದೆ. ನಮ್ಮ ಸಂವಿಧಾನದ ಪ್ರಸ್ತಾವನೆಯಂತೆ ಭಾರತೀಯರಾದ ನಾವು ಭಾರತವನ್ನು ಒಂದು ಸಾರ್ವಭೌಮ ಸಮಾಜವಾದ ಜಾತ್ಯತೀತ ಪ್ರಜಾಪ್ರಭುತ್ವ ಗಣರಾಜ್ಯವನ್ನಾಗಿಸುವ ಆಶಯವನ್ನು ಹೊಂದಿದ್ದೇವೆ. ಜೊತೆಗೆ, ನಮ್ಮ ಸಂವಿಧಾನದ 1 (1)ನೇ ವಿಧಿಯು ಹೇಳುವಂತೆ ಇಂಡಿಯಾ, ಅಂದರೆ ಭಾರತ, ಒಂದು ರಾಜ್ಯಗಳ ಒಕ್ಕೂಟವಾಗಿರುತ್ತದೆ.

ಗಣತಂತ್ರ ವ್ಯವಸ್ಥೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಸಂಬಂಧಗಳನ್ನು ಅರ್ಥೈಸುವ ವಿಧಾನಕ್ಕೆ ಪೂರಕವಾಗಿ ಕರಡು ಸಂವಿಧಾನ ಸಮಿತಿಯ ಅಧ್ಯಕ್ಷರಾಗಿದ್ದ ಡಾ.ಅಂಬೇಡ್ಕರ್‌ರವರು ನವೆಂಬರ್ 25, 1949ರಂದು ಸಂವಿಧಾನ ಸಭೆಗೆ ಕರಡು ಸಂವಿಧಾನವನ್ನು ಮಂಡಿಸುವಾಗ ಹೇಳಿದ ಮಾತು ಇಲ್ಲಿ ಅತ್ಯಂತ ಸಾಂದರ್ಭಿಕವಾಗುತ್ತದೆ. ಅವರು ಮಾತನಾಡುತ್ತಾ ‘‘ಅಧಿಕಾರ ಹೆಚ್ಚು ಕೇಂದ್ರೀಕರಣವಾಗಿದೆ ಮತ್ತು ರಾಜ್ಯಗಳನ್ನು ಪುರಸಭೆಗಳಿಗೆ ಇಳಿಸಲಾಗಿದೆ ಎಂಬ ಗಂಭೀರ ಆರೋಪವಿದೆ. ಈ ದೃಷ್ಟಿಕೋನವು ಉತ್ಪ್ರೇಕ್ಷೆ ಮಾತ್ರವಲ್ಲ, ಸಂವಿಧಾನವು ನಿಖರವಾಗಿ ಏನು ಮಾಡಬೇಕೆಂಬುದನ್ನು ತಪ್ಪಾಗಿ ಅರ್ಥೈಸಿಕೊಂಡಿರುವುದು ಎಂಬುದು ಸ್ಪಷ್ಟವಾಗಿದೆ. ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಂಬಂಧಕ್ಕೆ ಸಂಬಂಧಿಸಿದಂತೆ, ಅದು ಯಾವ ಮೂಲ ತತ್ವವನ್ನು ಆಧರಿಸಿದೆ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು ಅವಶ್ಯಕ. ಗಣತಂತ್ರ ವ್ಯವಸ್ಥೆಯ ಮೂಲ ತತ್ವವೆಂದರೆ ಶಾಸಕಾಂಗ ಮತ್ತು ಕಾರ್ಯಾಂಗದ ಅಧಿಕಾರ. ಇದು ಕೇಂದ್ರ ಮತ್ತು ರಾಜ್ಯಗಳ ನಡುವೆ ವಿಭಜನೆಯಾಗಿದೆ. ನಮ್ಮ ಸಂವಿಧಾನದ ಅನ್ವಯ ರಾಜ್ಯಗಳು ತಮ್ಮ ಶಾಸಕಾಂಗ ಅಥವಾ ಕಾರ್ಯಾಂಗದ ಅಧಿಕಾರಕ್ಕಾಗಿ ಕೇಂದ್ರವನ್ನು ಅವಲಂಬಿಸಿಲ್ಲ. ಶಾಸಕಾಂಗ ಮತ್ತು ಕಾರ್ಯಾಂಗದ ಅಧಿಕಾರವು ಕೇಂದ್ರ ಮತ್ತು ರಾಜ್ಯಗಳ ನಡುವೆ ವಿಭಜನೆಯಾಗಿದೆಯೇ ಹೊರತು ಕೇಂದ್ರವು ಮಾಡುವ ಕಾನೂನಿನಿಂದಲ್ಲ. ಇದು ನಮ್ಮ ಸಂವಿಧಾನದಲ್ಲಿ ಮೂಡಿಬಂದಿರುವ ಪ್ರಮುಖ ತತ್ವ. ಈ ವಿಷಯದಲ್ಲಿ ಕೇಂದ್ರ ಮತ್ತು ರಾಜ್ಯಗಳು ಸಹ-ಸಮಾನವಾಗಿವೆ. ಕೇಂದ್ರವು ಇದನ್ನು ಬದಲಾಯಿಸಲು ಸಾಧ್ಯವಿಲ್ಲ. ನ್ಯಾಯಾಂಗಕ್ಕೂ ಸಾಧ್ಯವಿಲ್ಲ’’.

ಕೇಂದ್ರ ಸರಕಾರವು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದ್ದಾಗಿದ್ದರೂ ಸಂವಿಧಾನದ ಈ ಮೂಲಚೌಕಟ್ಟನ್ನು ಉಲ್ಲಂಘಿಸಲಾಗದು. ಅದೇ ರೀತಿ ಯಾವುದೇ ರಾಜ್ಯ ಸರಕಾರವು, ತಮ್ಮದೇ ಪಕ್ಷದ ಸರಕಾರ ಕೇಂದ್ರದಲ್ಲಿದೆ ಎನ್ನುವ ಒಂದೇ ಕಾರಣಕ್ಕೆ ಸಂವಿಧಾನದ ಮೂಲತತ್ವವನ್ನು ಉಲ್ಲಂಘಿಸಿ ಕೇಂದ್ರ ಸರಕಾರವು ರೂಪಿಸುವ ಯಾವುದೇ ನೀತಿ-ಕಾನೂನುಗಳನ್ನು ಯಥಾವತ್ತಾಗಿ ಜಾರಿಗೊಳಿಸಿದರೆ ಅದು ಸಂವಿಧಾನಕ್ಕೆ, ರಾಜ್ಯದ ಶಾಸಕಾಂಗಕ್ಕೆ ಮತ್ತು ಜನತೆಗೆ ದ್ರೋಹವೆಸಗಿದಂತಾಗುತ್ತದೆ. ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ ಭಾರತದ ಸಂವಿಧಾನದ 246ನೇ ವಿಧಿಅನ್ವಯ ಕೇಂದ್ರದ ಸಂಸತ್ತು ಮತ್ತು ರಾಜ್ಯದ ಶಾಸಕಾಂಗ ಯಾವ ವಿಷಯಗಳಲ್ಲಿ ಕಾನೂನುಗಳನ್ನು ಮಾಡಬಹುದೆಂಬುದನ್ನು ಕ್ರಮವಾಗಿ ಕೇಂದ್ರ, ರಾಜ್ಯ ಹಾಗೂ ಸಮವರ್ತಿ ಪಟ್ಟಿಯಲ್ಲಿ ಸೇರಿಸಿ ಸಂವಿಧಾನದ ಏಳನೇ ಅನುಬಂಧದಲ್ಲಿ ನೀಡಲಾಗಿದೆ. ಅದರಂತೆ, ರಾಜ್ಯದ ಶಾಸಕಾಂಗವು ಏಳನೇ ಅನುಬಂಧ ಪಟ್ಟಿ IIIರಲ್ಲಿ ನಮೂದಿಸಲಾಗಿರುವ ಯಾವುದೇ ವಿಷಯಗಳಿಗೆ ಸಂಬಂಧಿಸಿದಂತೆ ಕಾನೂನುಗಳನ್ನು ಮಾಡುವ ಅಧಿಕಾರವನ್ನು ಹೊಂದಿದೆ.

ಸಮವರ್ತಿ ಪಟ್ಟಿಯಲ್ಲಿನ ಕ್ರಮಸಂಖ್ಯೆ 25ರಲ್ಲಿ ತಾಂತ್ರಿಕ ಶಿಕ್ಷಣ, ವೈದ್ಯಕೀಯ ಶಿಕ್ಷಣ ಮತ್ತು ವಿಶ್ವವಿದ್ಯಾನಿಲಯದ ಶಿಕ್ಷಣವೂ ಸೇರಿದಂತೆ ಶಿಕ್ಷಣ ವಿಷಯದಲ್ಲಿ ಕಾನೂನು-ನೀತಿಗಳನ್ನು ಮಾಡುವ ಅಧಿಕಾರ ಸಂಪೂರ್ಣವಾಗಿ ರಾಜ್ಯ ಸರಕಾರಗಳಿಗಿದೆ. ಈ ಸಾಂವಿಧಾನಿಕ ಚೌಕಟ್ಟನ್ನು ಗೌರವಿಸಿ ಸಂವಿಧಾನದಲ್ಲಿ ಮೂಲಭೂತ ಹಕ್ಕಾದ ವಿಧಿ ‘21-ಎ’ನ್ನು ಸಾಕಾರಗೊಳಿಸಲು ಶಿಕ್ಷಣ ಹಕ್ಕು ಕಾನೂನು ರೂಪಿಸಿದ ಸಂದರ್ಭದಲ್ಲಿ, ಪ್ರಕರಣ 7ರ ಅಡಿಯಲ್ಲಿ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳ ಜವಾಬ್ದಾರಿಯನ್ನು ಸ್ಪಷ್ಟವಾಗಿ ಗುರುತಿಸಲಾಗಿದೆ. ಅದರಂತೆ ಶಿಕ್ಷಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರಕಾರವು ವಿಶಾಲ ತಳಹದಿಯ ಮೇಲೆ ಒಂದು ವಿಸ್ತೃತ ಚೌಕಟ್ಟು ಅಥವಾ ಮಾರ್ಗಸೂಚಿಯನ್ನು ನೀಡಬಹುದೇ ಹೊರತು ಯಾವುದನ್ನೂ ಬಲವಂತವಾಗಿ ಹೇರಲು ಬರುವುದಿಲ್ಲ. ಹೀಗಾಗಿ, ಕೇಂದ್ರ ಸರಕಾರದ ಸಂಪುಟವು ಒಪ್ಪಿರುವ ರಾಷ್ಟ್ರೀಯ ಶಿಕ್ಷಣ ನೀತಿಯು ಒಂದು ಚೌಕಟ್ಟೇ ವಿನಃ ಅದು ಕರ್ನಾಟಕ ರಾಜ್ಯದ ಶಿಕ್ಷಣ ನೀತಿಯಾಗುವುದಿಲ್ಲ. ಜೊತೆಗೆ ರಾಜ್ಯ ಸರಕಾರವು 2016 ರಲ್ಲಿ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಅದರಲ್ಲೂ ವಿಶೇಷವಾಗಿ ಸರಕಾರಿ ಶಾಲೆಗಳನ್ನು ಬಲವರ್ಧನೆಗೊಳಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನೇತೃತ್ವದಲ್ಲಿ ರಚಿಸಿದ್ದ ತಜ್ಞರ ಸಮಿತಿಯು ಸೆಪ್ಟ್ಟಂಬರ್ 2017ರಲ್ಲಿ ಸಲ್ಲಿಸಿದ ವರದಿಯು ರಾಜ್ಯದ ಶಾಲಾ ಶಿಕ್ಷಣ ವ್ಯವಸ್ಥೆಯನ್ನು ಬಲಗೊಳಿಸಲು ಅತ್ಯಂತ ಮಹತ್ವದ ಮತ್ತು ನಿರ್ಣಾಯಕವಾಗಬಹುದಾದ ಶಿಫಾರಸುಗಳನ್ನು ಅತ್ಯಂತ ವೈಜ್ಞಾನಿಕ ಹಾಗೂ ವಿಸ್ತೃತ ಸಂಶೋಧನೆಯ ನೆಲೆಯಲ್ಲಿ ಚರ್ಚಿಸಿ ರೂಪಿಸಿದೆ.

ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ರಾಜ್ಯ ಸರಕಾರದ ಸರಕಾರಿ ಶಾಲೆಗಳ ವರದಿಯನ್ನು ತುಲನಾತ್ಮಕವಾಗಿ ನೋಡಿದರೆ, ರಾಜ್ಯ ಸರಕಾರ ನೇಮಿಸಿದ್ದ ತಜ್ಞರ ಸಮಿತಿಯು ರೂಪಿಸಿದ ಸರಕಾರಿ ಶಾಲೆಗಳ ಸಬಲೀಕರಣ ವರದಿಯು ಹೆಚ್ಚು ವಸ್ತುನಿಷ್ಠವಾಗಿರುವುದಲ್ಲದೆ ಪ್ರಾಯೋಗಿಕವಾಗಿ ಜಾರಿಗೊಳಿಸಲು ಹತ್ತಿರವಿರುವ ವರದಿಯಾಗಿ ಕಾಣಿಸುತ್ತದೆ. ಈ ಎಲ್ಲಾ ಅಂಶಗಳ ಹಿನ್ನೆಲೆಯಲ್ಲಿ, ಕೇಂದ್ರ ಸರಕಾರದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಒಂದು ಚೌಕಟ್ಟು/ಮಾರ್ಗಸೂಚಿಯಾಗಿ ಮಾತ್ರವೇ ಸ್ವಾಗತಿಸಬೇಕಾಗಿದೆಯೇ ಹೊರತು ಗಣತಂತ್ರ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಅದೇ ಧರ್ಮಗ್ರಂಥವಾಗಬಾರದು. ನಮ್ಮ ಧರ್ಮಗ್ರಂಥ ಒಂದೇ ಅದು ನಮ್ಮ ಸಂವಿಧಾನ. ನಮ್ಮ ರಾಜಕೀಯ ಕಾರಣಗಳಿಗೆ ಸಂವಿಧಾನವನ್ನು ಉಲ್ಲಂಘಿಸಿ, ರಾಜ್ಯದ ಅಸ್ಮಿತೆಯನ್ನು ಕಡೆಗಣಿಸಿ ಅನುಷ್ಠಾನಕ್ಕೆ ಮುಂದಾದರೆ ಅದು ಸಂವಿಧಾನಕ್ಕೆ ಎಸಗುವ ಅಪಚಾರವಲ್ಲದೆ ರಾಜ್ಯದ ಅಸ್ಮಿತೆ ಮತ್ತು ಜನತೆಗೆ ತೋರುವ ಅಗೌರವ. ಜೊತೆಗೆ ಈ ನೀತಿಯನ್ನು ಸೂಕ್ಷ್ಮವಾಗಿ ಗಮನಿಸಿ ನೋಡಿದಾಗ ನೀತಿಯ ಬುನಾದಿ ಹಾಗೂ ಮುಂಗಾಣ್ಕೆ ನಮ್ಮ ಸಂವಿಧಾನದ ಮೂಲ ಆಶಯವಾದ ಸಾರ್ವಭೌಮ, ಸಮಾಜವಾದಿ, ಜಾತ್ಯತೀತ ಮತ್ತು ಪ್ರಜಾಪ್ರಭುತ್ವ ಗಣರಾಜ್ಯವನ್ನು ಕಟ್ಟಿಕೊಡುವುದಾಗಬೇಕಿತ್ತು. ಆದರೆ, ನೀತಿಯು ಸಂವಿಧಾನ ಮತ್ತು ಅದರ ಆಶಯಗಳನ್ನು ತನ್ನ ತಳಹದಿಯನ್ನಾಗಿಸಿಕೊಳ್ಳುವ ಬದಲು ಕೇವಲ ಕಾಟಾಚಾರಕ್ಕೆ ಅಲ್ಲೊಮ್ಮೆ ಇಲ್ಲೊಮ್ಮೆ ಪ್ರಸ್ತಾಪಿಸುವ ಮೂಲಕ ಸಂವಿಧಾನವನ್ನು ವ್ಯವಸ್ಥಿತವಾಗಿ ಕಡೆಗಣಿಸುವ ಕೆಲಸವನ್ನು ಮಾಡಿದೆ.

ಹಲವು ಕಡೆ ನೈತಿಕ, ಮಾನವೀಯ ಮತ್ತು ಸಂವಿಧಾನದ ಮೌಲ್ಯಗಳು ಎನ್ನುವ ಅನುಕ್ರಮಣಿಕೆಯಲ್ಲಿ ಸಂವಿಧಾನವನ್ನು ಉಲ್ಲೇಖಿಸುವ ಮೂಲಕ ಸಂವಿಧಾನವನ್ನು ಕೇವಲ ನೈತಿಕ ಮೌಲ್ಯಕ್ಕೆ ಸಮೀಕರಿಸಿದೆ. ಈ ಎಲ್ಲಾ ಅಂಶಗಳನ್ನು ಗಮನದಲ್ಲಿರಿಸಿಕೊಂಡು, ರಾಜ್ಯದ ಜನತೆ ಹಾಗೂ ಶಿಕ್ಷಣದ ಮೂಲ ವಾರಸುದಾರರನ್ನು ಒಳಮಾಡಿಕೊಳ್ಳುವ ನಿಟ್ಟಿನಲ್ಲಿ, ಕೇಂದ್ರ ಸಂಪುಟದಿಂದ ಒಪ್ಪಿಗೆ ಪಡೆದಿರುವ 66 ಪುಟಗಳ ಈ ನೀತಿಯನ್ನು ಕನ್ನಡಕ್ಕೆ ಅನುವಾದಿಸಿ ನಾಡಿನ ಜನತೆಗೆ ತಲುಪಿಸಬೇಕಿದೆ. ನೀತಿಯ ಅಂತಿಮ ವರದಿ ಜನಭಾಷೆಯಾದ ಕನ್ನಡದಲ್ಲಿ ದೊರೆಯದ ಕಾರಣ ಅದರಲ್ಲಿ ಏನಿದೆ ಎಂದು ತಿಳಿಯಲು ಸಾಮಾನ್ಯ ಜನರಿಗೆ ಅದರಲ್ಲೂ ಮೂಲವಾರಸುದಾರರಿಗೆ ಸಾಧ್ಯವಾಗುತ್ತಿಲ್ಲ. ನೀತಿಯು ಪೂರ್ವ-ಪ್ರಾಥಮಿಕ ಶಿಕ್ಷಣವನ್ನೂ ಒಳಗೊಂಡಂತೆ 3ವರ್ಷದ ಮಕ್ಕಳಿಂದ 18 ವರ್ಷದ ಮಕ್ಕಳಿಗೆ ಸಂಬಂಧಿಸಿದ ಶಾಲಾಶಿಕ್ಷಣ ವ್ಯವಸ್ಥೆಯನ್ನು ಸಮಗ್ರವಾಗಿ ಬದಲಾಯಿಸುವ ಪ್ರಸ್ತಾಪ ಮಾಡಿದೆ.

ಈಗಾಗಲೇ ಜಾರಿಯಿರುವ ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯ್ದೆಯ ಪ್ರಕರಣ 6, 9, 21 ಹಾಗೂ 22ರ ಅನ್ವಯ ಶಾಲಾ ಶಿಕ್ಷಣ ಯಾವುದೇ ನೀತಿ-ಕಾರ್ಯಕ್ರಮಗಳ ಅನುಷ್ಠಾನ ಶಾಲಾಹಂತದಲ್ಲಿ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಮತ್ತು ಪಂಚಾಯತ್ ಹಂತದಲ್ಲಿ ಗ್ರಾಮಪಂಚಾಯತ್‌ಗಳ ಮೇಲಿದೆ. ಜೊತೆಗೆ ಶಿಕ್ಷಣ ಸಮವರ್ತಿ ಪಟ್ಟಿಯಲ್ಲಿರುವುದರಿಂದ, ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕನ್ನಡದಲ್ಲಿ ಹೊರತಂದು ಶಾಲೆ, ಪಂಚಾಯತ್, ತಾಲೂಕು, ಜಿಲ್ಲೆ ಹಾಗೂ ರಾಜ್ಯ ಹಂತದಲ್ಲಿ ಅದರ ಸಾಧಕ-ಬಾಧಕಗಳ ಬಗ್ಗೆ ವ್ಯಾಪಕವಾಗಿ ಚರ್ಚಿಸಿ ನೀತಿಯಿಂದ ಯಾವುದನ್ನು ಅಳವಡಿಸಿಕೊಳ್ಳಬಹುದು ಮತ್ತು ಯಾವುದನ್ನು ಕೈಬಿಡಬಹುದೆಂದು ಪ್ರಜಾಸತ್ತಾತ್ಮಕವಾಗಿ ತೀರ್ಮಾನಿಸಬೇಕಿದೆ.

ಜೊತೆಗೆ, ರಾಜ್ಯ ಸರಕಾರ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಬಲವರ್ಧನೆಗೊಳಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನೇತೃತ್ವದಲ್ಲಿ ರಚಿಸಿದ್ದ ತಜ್ಞರ ಸಮಿತಿಯು ವರದಿಯು ರಾಜ್ಯದ ಅಸ್ಮಿತೆಯನ್ನು ಆಧರಿಸಿ ಶಾಲಾ ಶಿಕ್ಷಣ ವ್ಯವಸ್ಥೆಯನ್ನು ಬಲಗೊಳಿಸಲು ಅತ್ಯಂತ ವೈಜ್ಞಾನಿಕ ಹಾಗೂ ವಿಸ್ತೃತ ಸಂಶೋಧನೆಯ ನೆಲೆಯಲ್ಲಿ ಚರ್ಚಿಸಿ ರೂಪಿಸಿರುವ ವರದಿಯಾಗಿದ್ದು ಆ ಶಿಫಾರಸುಗಳನ್ನು ಆಧರಿಸಿ ನಮ್ಮ ರಾಜ್ಯದ ಅವಶ್ಯಕತೆಗೆ ಅನುಗುಣವಾಗಿ ‘‘ಕರ್ನಾಟಕ ಶಿಕ್ಷಣ ನೀತಿ’’(ಕಶಿನೀ) ರೂಪಿಸುವುದು ಸಾಂವಿಧಾನಿಕ ಕ್ರಮವಾಗುತ್ತದೆ. ಪ್ರಕ್ರಿಯೆಯ ಕೊನೆಯ ಹಂತವಾಗಿ ಕರ್ನಾಟಕ ಶಿಕ್ಷಣ ನೀತಿಯನ್ನು, ವಿಧಾನಸಭೆ ಮತ್ತು ವಿಧಾನ ಪರಿಷತ್ತು ಎರಡರಲ್ಲೂ ಮಂಡಿಸಿ, ವಿಸ್ತೃತವಾಗಿ ಚರ್ಚಿಸಿ ಅಂಗೀಕರಿಸಿದರೆ ಅದೊಂದು ಸರ್ವಸಮ್ಮತ ಪಕ್ಷಾತೀತ ನೀತಿಯಾಗುತ್ತದೆ. ಇಲ್ಲದಿದ್ದರೆ ಪ್ರತೀ ಸರಕಾರವು ತಾನು ಅಧಿಕಾರಕ್ಕೆ ಬಂದಾಗ ಸಂವಿಧಾನ ಮೂಲತತ್ವಗಳನ್ನು ತಿರಸ್ಕರಿಸಿ, ತಮ್ಮ ಸಿದ್ಧಾಂತ ಮತ್ತು ರಾಜಕೀಯ ನೆಲೆಗಳಲ್ಲಿ ನೀತಿ-ಕಾನೂನುಗಳನ್ನು ಜಾರಿಗೊಳಿಸುವ ಕೆಟ್ಟ ಅಸಾಂವಿಧಾನಿಕ ಸಂಪ್ರದಾಯ ಅನೂಚಾನವಾಗಿ ಮುಂದುವರಿಯುತ್ತದೆ. ಇದನ್ನು ಕೊನೆಯಾಗಿಸುವ ಕಾಲಕೂಡಿ ಬಂದಿದೆ.

Writer - ನಿರಂಜನಾರಾಧ್ಯ ವಿ. ಪಿ.

contributor

Editor - ನಿರಂಜನಾರಾಧ್ಯ ವಿ. ಪಿ.

contributor

Similar News