ಮನೆಗಳ್ಳತನ ಪ್ರಕರಣ: ಬೆರಳಚ್ಚಿನ ಗುರುತಿನಿಂದ ಸಿಕ್ಕಿಬಿದ್ದ ಆರೋಪಿ
ಬೆಂಗಳೂರು, ಆ.31: ಮನೆಗಳ್ಳತನ ಆರೋಪ ಪ್ರಕರಣ ಸಂಬಂಧ ವ್ಯಕ್ತಿಯೋರ್ವ ಬೆರಳಚ್ಚಿನ ಗುರುತಿನ ಸಹಾಯದಿಂದ ಸಿಕ್ಕಿಬಿದ್ದಿದ್ದಾನೆ.
ನಗರದ ನಿವಾಸಿ ಖಲೀಲ್ ಎಂಬಾತ ಬಂಧಿತ ಆರೋಪಿ ಎಂದು ಸಿ.ಕೆ.ಅಚ್ಚುಕಟ್ಟು ಠಾಣಾ ಪೊಲೀಸರು ತಿಳಿಸಿದ್ದಾರೆ.
ಬಂಧಿತ ಆರೋಪಿ ವಿಲಾಸಿ ಜೀವನ ನಡೆಸಲು ಕಳ್ಳತನ ಮಾಡುವ ಪ್ರವೃತ್ತಿ ಹೊಂದಿದ್ದು, ಈತ ಜು.6 ರಂದು ಬನಶಂಕರಿಯಲ್ಲಿರುವ ಮನೆಗೆ ಹಾಡಹಗಲೇ ನುಗ್ಗಿ ಬೀರುವಿನಲ್ಲಿದ್ದ 230 ಗ್ರಾಂ ಚಿನ್ನಾಭರಣ ಕಳ್ಳತನ ಮಾಡಿ ಪರಾರಿಯಾಗಿದ್ದ ಎನ್ನಲಾಗಿದೆ.
ಈ ಸಂಬಂಧ ಸಿ.ಕೆ.ಅಚ್ಚುಕಟ್ಟು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಕಳ್ಳತನ ಕೃತ್ಯ ನಡೆದ ಬಳಿಕ ಘಟನಾ ಸ್ಥಳಕ್ಕೆ ಬಂದ ನಗರ ಬೆರಳಚ್ಚು ವಿಭಾಗದ ಅಧಿಕಾರಿಗಳು, ಸಂಪೂರ್ಣ ತಪಾಸಣೆ ನಡೆಸಿ ಬೆರಳಚ್ಚು ಗುರುತು ಪತ್ತೆ ಹಚ್ಚಿದ್ದರು. ಈ ಆಧಾರದ ಮೇಲೆ ಇದೀಗ ಆರೋಪಿಯನ್ನು ಬಂಧಿಸಲಾಗಿದೆ.
ಸಿ.ಕೆ.ಅಚ್ಚುಕಟ್ಟು ಪೊಲೀಸ್ ಠಾಣೆ ಸೇರಿದಂತೆ ವಿವಿಧ ಠಾಣಾ ವ್ಯಾಪ್ತಿಯಲ್ಲಿ ಈತ ಅಪರಾಧ ಪ್ರಕರಣಗಳಲ್ಲಿ ತೊಡಗಿಸಿಕೊಂಡಿರುವುದು ತಿಳಿದುಬಂದಿದೆ. ಇನ್ನು ಬಂಧಿತನಿಂದ 19.65 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ 2 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಜೊತೆಗೆ ಆರೋಪಿಯ ಬಂಧನದಿಂದ 5 ಮನೆಕಳ್ಳತನ ಹಾಗೂ 2 ದ್ವಿಚಕ್ರ ವಾಹನ ಕಳವು ಪ್ರಕರಣ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.