ನೂರು ಮೀಟರ್ ವ್ಯಾಪ್ತಿಯಲ್ಲಿ ಮೂರಕ್ಕಿಂತ ಹೆಚ್ಚಿನ ಸೋಂಕಿತರಿದ್ದರೆ ಮಾತ್ರ ಕಂಟೈನ್ಮೆಂಟ್: ಮಂಜುನಾಥ್ ಪ್ರಸಾದ್

Update: 2020-08-31 17:56 GMT

ಬೆಂಗಳೂರು, ಆ.31: ಮೂರು ಅಥವಾ ಮೂರಕ್ಕಿಂತ ಹೆಚ್ಚು ಪ್ರಕರಣ ನೂರು ಮೀಟರ್ ವ್ಯಾಪ್ತಿಯೊಳಗೆ ಕಂಡುಬಂದರೆ ಮಾತ್ರ ಆ ಜಾಗವನ್ನು ಕಂಟೈನ್‍ಮೆಂಟ್ ಮಾಡಲಾಗುವುದು ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೂರು ಮೀಟರ್ ವ್ಯಾಪ್ತಿಯಲ್ಲಿ ಒಂದು ಅಥವಾ ಎರಡು ಕೊರೋನ ಪ್ರಕರಣ ಕಂಡುಬಂದರೆ ಬ್ಯಾರಿಕೇಡಿಂಗ್ ಮಾಡುವ ಅಗತ್ಯ ಇಲ್ಲ ಎಂದು ತಿಳಿಸಿದರು.

ಪ್ರಾಥಮಿಕ, ದ್ವಿತೀಯ ಸಂಪರ್ಕ, ಕಂಟೈನ್‍ಮೆಂಟ್ ವಲಯ, ಕ್ಲಿನಿಕ್, ಆಸ್ಪತ್ರೆಗಳಲ್ಲಿ ಸೋಂಕಿನ ಲಕ್ಷಣ ಇರುವವರಿಗೆ ಕೊರೋನ ಸೋಂಕು ಪರೀಕ್ಷೆ ಮುಂದುವರಿಸಲಾಗುವುದು. ಪ್ರತಿದಿನ 25 ಸಾವಿರ ಜನರಿಗೆ ಟೆಸ್ಟ್ ಮಾಡಲಾಗುತ್ತಿದೆ. ಹೆಚ್ಚು ಟೆಸ್ಟ್ ಮಾಡಿದಾಗ ಆರಂಭದಲ್ಲಿ ಹೆಚ್ಚು ಪ್ರಕರಣ ಬರಲಿದೆ. ಆದರೆ ಎಲ್ಲರನ್ನೂ ಐಸೋಲೇಟ್ ಮಾಡಿದರೆ ಸೋಂಕು ಹರಡುವುದು ಕಡಿಮೆಯಾಗಲಿದೆ ಎಂದರು.

ಹೋಂ ಐಸೋಲೇಷನ್‍ನಲ್ಲಿ ಇರುವವರ ಮನೆಗೆ ಬಿಬಿಎಂಪಿ ತಂಡ ಭೇಟಿ ನೀಡುತ್ತದೆ. ಕುಶಲ ಎಂಬ ಆ್ಯಪ್ ಮೂಲಕ ಸ್ವಸ್ಥ್ ಅನ್ನುವ ಸಂಸ್ಥೆ ಜೊತೆಗೆ ಸಂಪರ್ಕ ಮಾಡಿ, ಆ ಆ್ಯಪ್‍ನಿಂದ ವೈದ್ಯರು ಪ್ರತಿದಿನ ಮೂರು ಬಾರಿ ಫೋನ್ ಮಾಡಿ ರೋಗಿಗಳ ಆರೋಗ್ಯ ವಿಚಾರಿಸಿಕೊಳ್ಳುತ್ತಾರೆ. ತೊಂದರೆಗಳಿದ್ದರೆ ಕೂಡಲೇ ಆಸ್ಪತ್ರೆಗೆ ದಾಖಲಿಸಲು ನಮಗೆ ಸೂಚನೆ ಬರುತ್ತದೆ. ಇದರಿಂದ ಸಾವಿನ ಪ್ರಮಾಣವೂ ಕಡಿಮೆಯಾಗಲಿದೆ. ಮನೆಮನೆಗೆ ಆಕ್ಸಿಮೀಟರ್, ಮೆಡಿಸಿನ್ ಹಂಚುತ್ತೇವೆ ಎಂದರು.

ಖಾಸಗಿ ಆಸ್ಪತ್ರೆಗಳಲ್ಲಿ ಪಾಲಿಕೆ ವತಿಯಿಂದ ದಾಖಲು ಮಾಡಿಸಿದರೆ, ಅವರ ಸಂಪೂರ್ಣ ವೆಚ್ಚವನ್ನು ಸರಕಾರವೇ ಭರಿಸುತ್ತದೆ. ಪಾಲಿಕೆಯ ವತಿಯಿಂದ ರೋಗಿಗಳಿಂದ ಹಣ ಕೇಳಿರುವ ಆರೋಪ ಬಂದರೆ ಕ್ರಮ ಕೈಗೊಳ್ಳುತ್ತೇವೆ. ಬಿಬಿಎಂಪಿ ವತಿಯಿಂದ ಟೆಸ್ಟ್ ಮಾಡಲು, ಸಿಸಿಸಿ ಕೇಂದ್ರಕ್ಕೆ ಸೇರಲು ಹಾಗೂ ಆಸ್ಪತ್ರೆ ಸೇರಲು ಜನರಿಗೆ ಯಾವುದೇ ಖರ್ಚಾಗುವುದಿಲ್ಲ ಎಂದು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News