ಸೌದಿ: ಇಬ್ಬರು ರಾಜಕುಮಾರರು, 4 ಸೇನಾಧಿಕಾರಿಗಳ ವಜಾ

Update: 2020-09-01 14:36 GMT
ಸಲ್ಮಾನ್ ಬಿನ್ ಅಬ್ದುಲಝೀಝ್

ರಿಯಾದ್ (ಸೌದಿ ಅರೇಬಿಯ), ಸೆ. 1: ಸೌದಿ ಅರೇಬಿಯದ ದೊರೆ ಸಲ್ಮಾನ್ ತನ್ನ ಆಡಳಿತದಲ್ಲಿದ್ದ ಇಬ್ಬರು ರಾಜಕುಮಾರರನ್ನು ವಜಾಗೊಳಿಸಿದ್ದಾರೆ ಹಾಗೂ ರಕ್ಷಣಾ ಸಚಿವಾಲಯದಲ್ಲಿ ನಡೆದಿದೆಯೆನ್ನಲಾದ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಈ ಇಬ್ಬರು ರಾಜಕುಮಾರರು ಮತ್ತು ನಾಲ್ವರು ಸೇನಾಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸುವಂತೆ ಆದೇಶ ನೀಡಿದ್ದಾರೆ.

ದೊರೆ ಸಲ್ಮಾನ್ ಬಿನ್ ಅಬ್ದುಲಝೀಝ್ ಮಂಗಳವಾರ ಮುಂಜಾನೆ ಈ ಆದೇಶ ಹೊರಡಿಸಿದ್ದಾರೆ.

ಯೆಮನ್‌ನಲ್ಲಿ ಬಂಡುಕೋರರ ವಿರುದ್ಧ ಕಾರ್ಯಾಚರಣೆಯಲ್ಲಿ ತೊಡಗಿರುವ ಸೌದಿ ಅರೇಬಿಯ ನೇತೃತ್ವದ ಮಿತ್ರಪಡೆಯ ಕಮಾಂಡರ್ ಹುದ್ದೆಯಿಂದ ರಾಜಕುಮಾರ ಫಹದ್ ಬಿನ್ ತುರ್ಕಿ ಬಿನ್ ಅಬ್ದುಲಝೀಝ್ ಅಲ್ ಸೌದ್‌ರನ್ನು ವಜಾಗೊಳಿಸಲಾಗಿದೆ ಎಂದು ಸೌದಿ ದೊರೆಯ ಆದೇಶ ತಿಳಿಸಿದೆ. ಹಾಗೂ ಅವರ ಮಗ ರಾಜಕುಮಾರ ಅಬ್ದುಲಝೀಝ್ ಬಿನ್ ಫಹದ್‌ರನ್ನು ಅಲ್ ಜೌಫ್ ವಲಯದ ಉಪ ರಾಜ್ಯಪಾಲ ಹುದ್ದೆಯಿಂದ ತೆರವುಗೊಳಿಸಲಾಗಿದೆ ಎಂಬುದಾಗಿಯೂ ಆದೇಶ ತಿಳಿಸಿದೆ.

‘‘ರಕ್ಷಣಾ ಸಚಿವಾಲಯದಲ್ಲಿ ನಡೆದಿದೆಯೆನ್ನಲಾದ ಶಂಕಿತ ಹಣಕಾಸು ವ್ಯವಹಾರಗಳ ಬಗ್ಗೆ ತನಿಖೆ ನಡೆಸುವಂತೆ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಭ್ರಷ್ಟಾಚಾರ ನಿಗ್ರಹ ಸಮಿತಿಗೆ ಬರೆದ ಪತ್ರವನ್ನು ಆಧರಿಸಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ” ಎಂದು ಆದೇಶ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News