ಇಸ್ರೇಲ್‌ ಜೊತೆ ಒಪ್ಪಂದ ಮಾಡಿ ಯುಎಇಯಿಂದ ಮುಸ್ಲಿಂ ಜಗತ್ತಿಗೆ ದ್ರೋಹ: ಇರಾನ್ ಸರ್ವೋಚ್ಛ ನಾಯಕ ಖಾಮಿನೈ

Update: 2020-09-01 16:01 GMT

ಟೆಹರಾನ್ (ಇರಾನ್), ಸೆ. 1: ಇಸ್ರೇಲ್ ಜೊತೆಗೆ ಸಂಬಂಧಗಳನ್ನು ಸಾಮಾನ್ಯ ಸ್ಥಿತಿಗೆ ತರುವ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮುಸ್ಲಿಂ ಜಗತ್ತಿಗೆ ವಿಶ್ವಾಸದ್ರೋಹ ಮಾಡಿದೆ ಎಂದು ಇರಾನ್‌ನ ಸರ್ವೋಚ್ಛ ನಾಯಕ ಆಯತುಲ್ಲಾ ಅಲಿ ಖಾಮಿನೈ ಮಂಗಳವಾರ ಹೇಳಿದ್ದಾರೆ.

‘‘ಯುಎಇಯು ಇಸ್ಲಾಮ್ ಜಗತ್ತು, ಅರಬ್ ದೇಶಗಳು, ವಲಯದ ದೇಶಗಳು ಮತ್ತು ಫೆಲೆಸ್ತೀನ್‌ಗೆ ದ್ರೋಹ ಬಗೆದಿದೆ’’ ಎಂಬುದಾಗಿ ಖಾಮಿನೈ ಟ್ವೀಟ್ ಮಾಡಿದ್ದಾರೆ.

‘‘ಖಂಡಿತವಾಗಿಯೂ, ಈ ದ್ರೋಹ ಹೆಚ್ಚು ಸಮಯ ನಿಲ್ಲುವುದಿಲ್ಲ. ಆದರೆ, ಅದರ ಕಳಂಕ ಅವರೊಂದಿಗೆ ಇರುತ್ತದೆ’’ ಎಂದು ಸರಣಿ ಟ್ವೀಟ್‌ಗಳಲ್ಲಿ ಅವರು ಹೇಳಿದ್ದಾರೆ.

ಯುಎಇಯೊಂದಿಗೆ ಮಾಡಿಕೊಂಡಿರುವ ಒಪ್ಪಂದದಲ್ಲಿ, ಫೆಲೆಸ್ತೀನ್ ಭೂಭಾಗವನ್ನು ಇಸ್ರೇಲ್‌ಗೆ ಸೇರಿಸಿಕೊಳ್ಳುವ ಯೋಜನೆಯನ್ನು ಕೈಬಿಡಲು ಇಸ್ರೇಲ್ ಒಪ್ಪಿಕೊಂಡಿದೆ. ಇದು ಅರಬ್ ದೇಶವೊಂದರ ಜೊತೆಗೆ ಇಸ್ರೇಲ್ ಮಾಡಿಕೊಂಡಿರುವ ಇಂಥ ಮೂರನೇ ಶಾಂತಿ ಒಪ್ಪಂದವಾಗಿದೆ.

ಆದರೆ, ಜೋರ್ಡಾನ್ ಕಣಿವೆಯನ್ನು ಮತ್ತು ಆಕ್ರಮಿತ ಪಶ್ಚಿಮ ದಂಡೆಯಾದ್ಯಂತ ಇರುವ ಯಹೂದಿ ವಸಾಹತುಗಳನ್ನು ಇಸ್ರೇಲ್‌ಗೆ ಸೇರಿಸಿಕೊಳ್ಳುವುದನ್ನು ಇಸ್ರೇಲ್ ಕೈಬಿಡುತ್ತದೆ ಎನ್ನುವುದು ಒಪ್ಪಂದದ ಅರ್ಥವಲ್ಲ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.

‘‘ಇದರಿಂದ ಎಮಿರಾತಿಗಳು ಕೂಡಲೇ ಎಚ್ಚೆತ್ತುಕೊಳ್ಳುತ್ತಾರೆ ಹಾಗೂ ತಾವು ಮಾಡಿರುವ ತಪ್ಪಿಗೆ ಪರಿಹಾರ ನೀಡುತ್ತಾರೆ ಎಂದು ನಾನು ಆಶಿಸುತ್ತೇನೆ’’ ಎಂದು ಖಾಮಿನೈ ನುಡಿದರು.

‘‘ಯುಎಇಯ ದೊರೆಗಳು ಈ ವಲಯದ ಬಾಗಿಲನ್ನು ಇಸ್ರೇಲ್‌ಗೆ ತೆರೆದಿದ್ದಾರೆ ಹಾಗೂ ಅವರು ಫೆಲೆಸ್ತೀನ್ ವಿಷಯವನ್ನು ಉಪೇಕ್ಷಿಸಿದ್ದಾರೆ ಹಾಗೂ ಅದನ್ನು ಸಾಮಾನ್ಯವೆಂಬಂತೆ ಚಿತ್ರಿಸಿದ್ದಾರೆ’’ ಎಂದರು.

ಯುಎಇ ಮತ್ತು ಇಸ್ರೇಲ್ ನಡುವೆ ಏರ್ಪಟ್ಟಿರುವ ಒಪ್ಪಂದವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಗಸ್ಟ್ 13ರಂದು ಪ್ರಕಟಿಸಿದ್ದಾರೆ. ಇದು ಈ ಒಪ್ಪಂದಕ್ಕೆ ಖಾಮಿನೈ ನೀಡುತ್ತಿರುವ ಮೊದಲ ಪ್ರತಿಕ್ರಿಯೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News