×
Ad

ಸ್ವಂತ ಖರ್ಚಿನಲ್ಲಿ ನಿತ್ಯ 700 ಬೀದಿನಾಯಿಗಳಿಗೆ ಆಹಾರ ಪೂರೈಸುತ್ತಿರುವ ಬೆಂಗಳೂರು ನಿವಾಸಿ

Update: 2020-09-02 23:26 IST
ಸಾಂದರ್ಭಿಕ ಚಿತ್ರ

ಬೆಂಗಳೂರು, ಸೆ.2: ಬೆಳ್ಳಂದೂರಿನ ಇಬ್ಬಲೂರು ನಿವಾಸಿ ಮಿನುಸಿಂಗ್ ಎಂಬುವವರು ತಮ್ಮ ಸ್ವಂತ ಖರ್ಚಿನಿಂದ ನಗರದಲ್ಲಿ 700 ಬೀದಿನಾಯಿಗಳಿಗೆ ನಿತ್ಯ ಆಹಾರ ಬಡಿಸಿ ಅವುಗಳನ್ನು ಪೋಷಿಸುತ್ತಿದ್ದಾರೆ.

ಇವರು ಕಳೆದ 11 ವರ್ಷಗಳಿಂದ ಆಹಾರ ಪೂರೈಕೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಜಾರ್ಖಂಡ್‍ನಲ್ಲಿ ಜನಿಸಿರುವ ಇವರು, ಬೆಂಗಳೂರು ನಗರದಲ್ಲಿ ನೆಲೆಸಿದ್ದಾರೆ. ಇವರು ಸಣ್ಣವರಿದ್ದಾಗಿನಿಂದಲೂ ಬೀದಿ ನಾಯಿಗಳ ಮೇಲೆ ಅಪಾರವಾದ ಪ್ರೀತಿ ಹಾಗೂ ಕಾಳಜಿಯನ್ನು ಹೊಂದಿದ್ದರು.

''ಚಿಕ್ಕ ವಯಸ್ಸಿನಲ್ಲೇ ಬೀದಿನಾಯಿಗಳೊಂದಿಗೆ ಹೆಚ್ಚು ನಂಟು ಬೆಳೆಸಿಕೊಂಡೆ. ಮನೆಯಲ್ಲಿ ಸದಾ ಬೈಯುತ್ತಿದ್ದರು. ಅವರ ಕಣ್ತಪ್ಪಿಸಿ ನಾಯಿಗಳಿಗೆ ಆಹಾರ ನೀಡುತ್ತಿದ್ದೆ. ಆ ಪ್ರವೃತ್ತಿಯೇ ಇಂದು ನಾಯಿಗಳನ್ನು ಪೋಷಿಸಲು ಪ್ರೇರಣೆಯಾಯಿತು ಎಂದು ಮಿನುಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

ಸಾಮಾನ್ಯವಾಗಿ ಹೈಬ್ರಿಡ್ ನಾಯಿಗಳನ್ನು ಎಲ್ಲರೂ ಮೆಚ್ಚುತ್ತಾರೆ. ಆದರೆ, ಬೀದಿನಾಯಿಗಳೆಂದರೆ ತಾರತಮ್ಯ ಮಾಡುತ್ತಾರೆ. ಪ್ರಾಣಿ ಎಂದ ಮೇಲೆ ಎಲ್ಲವೂ ಒಂದೇ ಎಂಬುದನ್ನು ಜನರು ಅರ್ಥ ಮಾಡಿಕೊಳ್ಳಬೇಕು. ಬೀದಿನಾಯಿಗಳಿಗೆ ಸರಿಯಾದ ಪೋಷಣೆ ಸಿಗುವುದಿಲ್ಲ. ಹಸಿವಿನಿಂದ ಅವು ಜನರನ್ನು ಹಿಂಬಾಲಿಸುತ್ತವೆ. ಇದನ್ನೇ ಜನ ತಪ್ಪಾಗಿ ತಿಳಿದು, ಅವುಗಳನ್ನು ದೂಷಿಸುತ್ತಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಆರಂಭದಲ್ಲಿ 50 ನಾಯಿಗಳಿಗೆ ಸಾಕಾಗುವಷ್ಟು ಆಹಾರ ಪೂರೈಕೆ ಮಾಡುತ್ತಿದ್ದೆ. ಸದ್ಯ 700 ಬೀದಿನಾಯಿಗಳಿಗೆ ಆಹಾರ ಪೂರೈಕೆ ಮಾಡುತ್ತಿದ್ದೇನೆ. ನಗರದ ಬೆಳ್ಳಂದೂರು, ಇಬ್ಬಲೂರು, ಅಗರ ಹಾಗೂ ಸರ್ಜಾಪುರ ರಸ್ತೆಗಳಲ್ಲಿರುವ ನಾಯಿಗಳಿಗೆ ಆಹಾರ ನೀಡಲಾಗುತ್ತದೆ. ಸಂಜೆ 7 ರಿಂದ ಮಧ್ಯರಾತ್ರಿವರೆಗೂ ಆಹಾರ ನೀಡುತ್ತೇವೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News