3ನೇ ಟ್ವೆಂಟಿ-20: ಪಾಕಿಸ್ತಾನಕ್ಕೆ ರೋಚಕ ಗೆಲುವು

Update: 2020-09-02 19:21 GMT

ಮ್ಯಾಂಚೆಸ್ಟರ್: ಓಲ್ಡ್ ಟ್ರಾಫೋರ್ಡ್‌ನಲ್ಲಿ ಮಂಗಳವಾರ ನಡೆದ ಮೂರನೇ ಟ್ವೆಂಟಿ -20 ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನ ಐದು ರನ್‌ಗಳ ರೋಚಕ ಜಯ ಗಳಿಸಿದೆ.

 ಹಿರಿಯ ಆಲ್‌ರೌಂಡರ್ ಮುಹಮ್ಮದ್ ಹಫೀಝ್ ಮತ್ತು ಚೊಚ್ಚಲ ಪಂದ್ಯವನ್ನು ಆಡಿದ ಯುವಬ್ಯಾಟ್ಸ್‌ಮನ್ ಹೈದರ್ ಅಲಿ ಬ್ಯಾಟಿಂಗ್‌ನಲ್ಲಿ ದೊಡ್ಡ ಕೊಡುಗೆ ನೀಡುವ ಮೂಲಕ ತಂಡದ ಗೆಲು ವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಇದು 66 ದಿನಗಳ ಕಾಲ ಇಂಗ್ಲೆಂಡ್ ಪ್ರವಾಸದಲ್ಲಿದ್ದ ಪಾಕಿಸ್ತಾನದ ಮೊದಲ ಜಯವಾಗಿದೆ ಮತ್ತು ಕಳೆದ ತಿಂಗಳು ಮೂರು ಟೆಸ್ಟ್ ಸರಣಿಯಲ್ಲಿ 1-0 ಅಂತರದಲ್ಲಿ ಸೋಲು ಅನುಭವಿಸಿದ ನಂತರ ಮೂರು ಪಂದ್ಯಗಳ ಸರಣಿಯನ್ನು 1-1 ಅಂತರದಲ್ಲಿ ಸಮಬಲ ಸಾಧಿಸಿತು.

    ಅಂತಿಮ ಪಂದ್ಯದಲ್ಲಿ ಹಫೀಝ್ ಔಟಾಗದೆ 86 ರನ್ ಮತ್ತು ಹೈದರ್ ಅಲಿ ಗಳಿಸಿದ 54 ರನ್ ನೆರವಿನಲ್ಲಿ ಪಾಕಿಸ್ತಾನ 4 ವಿಕೆಟ್ ನಷ್ಟದಲ್ಲಿ 190 ರನ್ ಗಳಿಸಿತ್ತು.

  39 ವರ್ಷದ ಹಫೀಝ್ ಮತ್ತು 19 ವರ್ಷದ ಹೈದರ್ ನಡುವೆ 20 ವರ್ಷದ ವಯಸ್ಸಿನ ಅಂತರವಿದ್ದರೂ, ಇವರ ಆಟದ ನಡುವೆ ಯಾವುದೇ ವ್ಯತ್ಯಾಸ ಕಂಡು ಬರಲಿಲ್ಲ. 4.2 ಓವರ್‌ಗಳಲ್ಲಿ 32ಕ್ಕೆ 2 ವಿಕೆಟ್ ಕಳೆದುಕೊಂಡಿದ್ದ ಪಾಕಿಸ್ತಾನ ತಂಡದ ಬ್ಯಾಟಿಂಗ್‌ನ್ನು ಮುನ್ನಡೆಸಿದ ಹೈದರ್ ಅಲಿ ಮತ್ತು ಹಫೀಝ್ 100ರನ್‌ಗಳ ಜೊತೆಯಾಟ ನೀಡಿದರು.

ಓಲ್ಡ್ ಟ್ರಾಫೋರ್ಡ್‌ನಲ್ಲಿ ರವಿವಾರ ನಡೆದ ಎರಡನೇ ಟ್ವೆಂಟಿ-20 ಪಂದ್ಯದಲ್ಲಿ ಇಂಗ್ಲೆಂಡ್ ಐದು ವಿಕೆಟ್‌ಗಳ ಜಯ ಗಳಿಸಿತ್ತು. ಪಾಕ್ ಈ ಪಂದ್ಯದಲ್ಲಿ ಸೋತಿದ್ದರೂ ಹಫೀಝ್ 69 ರನ್ ಗಳಿಸಿದ್ದರು. ಅವರ ಕಳೆದ ಐದು ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಇನಿಂಗ್ಸ್‌ನಲ್ಲಿ ಇದು ನಾಲ್ಕನೇ ಅರ್ಧಶತಕವಾಗಿದೆ.

   ಗೆಲುವಿಗೆ 191 ರನ್ ಗಳಿಸಬೇಕಿದ್ದ ಇಂಗ್ಲೆಂಡ್ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 185 ರನ್ ಗಳಿಸಿತು.ಏಳು ರನ್‌ಗಳಿಗೆ ರನೌಟಾಗುವ ಅವಕಾಶದಿಂದ ಪಾರಾಗಿದ್ದ ಇಂಗ್ಲೆಂಡ್‌ನ ಮೊಯಿನ್ ಅಲಿ 61 ರನ್ ಗಳಿಸಿ ಔಟಾಗುವುದರೊಂದಿಗೆ ಇಂಗ್ಲೆಂಡ್‌ನ ಗೆಲುವಿನ ಅವಕಾಶ ಕ್ಷೀಣಿಸಿತು. 7.5 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 69 ರನ್ ಗಳಿಸಿದ್ದ ಇಂಗ್ಲೆಂಡ್‌ಗೆ ಮೊಯಿನ್ ಗೆಲುವಿನ ಭರವಸೆ ಮೂಡಿಸಿದ್ದರು.

 ಅಲಿ ಔಟಾದಾಗ ಇಂಗ್ಲೆಂಡ್ 18. 1 ಓವರ್‌ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 174 ರನ್ ಗಳಿಸಿತ್ತು. ಏಳು ಎಸೆತಗಳಲ್ಲಿ 17 ರನ್ ಬೇಕಿತ್ತು. ಮುಂದೆ ಕರನ್ ಮತ್ತು ಆದಿಲ್ ರಶೀದ್ ನೆರವಿನಲ್ಲಿ ಐದು ಎಸೆತಗಳಲ್ಲಿ 5 ರನ್ ಬಂತು. ಕೊನೆಯ ಎಸೆತದಲ್ಲಿ 12 ರನ್ ಗಳಿಸಬೇಕಿತ್ತು ಹಾರೀಸ್ ರವೂಫ್ ಎಸೆತದಲ್ಲಿ ಟಾಮ್ ಕರನ್ ಸಿಕ್ಸರ್ ಎತ್ತಿದರು. ಅಂತಿಮ ಯಾರ್ಕರ್ ಎಸೆತದಲ್ಲಿ ಇನ್ನೊಂದು ಸಿಕ್ಸರ್ ಎತ್ತುವ ಪ್ರಯತ್ನದಲ್ಲಿ ಎಡವಿದರು.ಇದರೊಂದಿಗೆ ಇಂಗ್ಲೆಂಡ್‌ನ ಇನಿಂಗ್ಸ್ ಕೊನೆಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News