×
Ad

ಬೆಂಗಳೂರು: ಕೊರೋನ ಸೋಂಕಿಗೆ ಆರೋಗ್ಯ ಸಹಾಯಕಿ ಸೇರಿ 29 ಮಂದಿ ಬಲಿ

Update: 2020-09-03 21:37 IST

ಬೆಂಗಳೂರು, ಆ.3: ನಗರದಲ್ಲಿ ಗುರುವಾರ ಒಂದೇ ದಿನ 3,189 ಜನರಿಗೆ ಕೊರೋನ ಸೋಂಕು ದೃಢಪಟ್ಟಿದೆ. 2,631 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದು, ಸೋಂಕಿಗೆ 29 ಜನರು ಮೃತರಾಗಿದ್ದಾರೆ.

ನಗರದಲ್ಲಿ ಒಟ್ಟು 1,38,701 ಕೊರೋನ ಸೋಂಕಿತರು ದೃಢಪಟ್ಟಿದ್ದು, ಇಲ್ಲಿಯವರೆಗೆ 2,066 ಜನರು ಸೋಂಕಿಗೆ ಬಲಿಯಾಗಿದ್ದಾರೆ. ಅಲ್ಲದೇ 96,194 ಜನರು ಇಲ್ಲಿಯವರೆಗೆ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಕೋವಿಡ್ ನಿಗದಿತ ಆಸ್ಪತ್ರೆಗಳು ಹಾಗೂ ಆರೋಗ್ಯ ಕೇಂದ್ರಗಳು ಹಾಗೂ ಆರೈಕೆ ಕೇಂದ್ರಗಳು ಒಳಗೊಂಡಂತೆ 40,440 ಜನ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ 150 ಜ್ವರ ಚಿಕಿತ್ಸಾಲಯದಲ್ಲಿ ಒಟ್ಟು 24,60,376 ವ್ಯಕ್ತಿಗಳಿಗೆ ತಪಾಸಣೆ ಮಾಡಲಾಗಿದೆ.

ಬುಧವಾರದ ಬಿಬಿಎಂಪಿ ಕೋವಿಡ್ ವರದಿಯಲ್ಲಿ ನಗರದಲ್ಲಿ ಒಟ್ಟು ಸಕ್ರಿಯ 9,225 ಕಂಟೈನ್ಮೆಂಟ್ ಝೋನ್‍ಗಳಿವೆ. ಇದುವರೆಗೂ 9,395 ಕಂಟೈನ್ಮೆಂಟ್ ಝೋನ್‍ಗಳನ್ನು ಗುರುತಿಸಲಾಗಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಇಲ್ಲಿಯವರೆಗೂ ಒಟ್ಟು 3,55,451 ಮಂದಿ ಪ್ರಾಥಮಿಕ ಸಂಪರ್ಕಿತರನ್ನು ಗುರುತಿಸಲಾಗಿದ್ದು, ದ್ವಿತೀಯ ಸಂಪರ್ಕಿತ 4,52,859 ಜನರನ್ನು ಗುರುತಿಸಲಾಗಿದೆ. ನಗರದಲ್ಲಿ 8,42,277 ಜನರಿಗೆ ಕೊರೋನ ಪರೀಕ್ಷೆ ನಡೆಸಲಾಗಿದ್ದು, ಇದರಲ್ಲಿ ಪಾಸಿಟಿವ್ ಪ್ರಮಾಣ ಶೇ.14.74ರಷ್ಟಿದೆ. ಕೊರೋನ ಸೋಂಕಿಗೆ ಮೃತರಾಗುತ್ತಿರುವ ಪ್ರಮಾಣ ಶೇ.1.50 ರಷ್ಟಿದ್ದು, ಗುಣಮುಖರಾಗುತ್ತಿರುವ ಪ್ರಮಾಣ ಶೇ.69.04ರಷ್ಟಿದೆ.

ಕೊರೋನಕ್ಕೆ ಆರೋಗ್ಯ ಸಹಾಯಕಿ ಬಲಿ

ಸಹಕಾರ ನಗರದ ಬಿಬಿಎಂಪಿಯ ಪ್ರಾಥಮಿಕ ಆರೋಗ್ಯ ಕೇಂದ್ರ ಹಿರಿಯ ಮಹಿಳಾ ಆರೋಗ್ಯ ಸಹಾಯಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ 59 ವರ್ಷದ ಮಹಿಳೆಯೊಬ್ಬರು ಕೊರೋನ ಸೋಂಕಿನಿಂದ ಗುರುವಾರ ಮೃತಪಟ್ಟಿದ್ದಾರೆ.

ಕಳೆದ ಐದಾರು ತಿಂಗಳಿನಿಂದ ಆರೋಗ್ಯ ಸಹಾಯಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅವರು ಕೊರೋನ ಸಂದರ್ಭದಲ್ಲಿ ಹಗಲಿರುಳು ಕರ್ತವ್ಯ ನಿರ್ವಹಿಸಿದ್ದರು. ಕಳೆದ ಒಂದು ತಿಂಗಳಿನಿಂದ ಸೋಂಕಿನ ವಿರುದ್ಧ ಹೋರಾಡುತ್ತಿದ್ದ ಅವರು ಗುರುವಾರ ನಿಧನರಾಗಿದ್ದಾರೆ.

ಹಕ್ಕಿನ ರಜೆ ನೀಡಲು ಮನವಿ

ವಯೋಸಹಜ ಕಾಯಿಲೆ ಇರುವ ವೈದ್ಯಕೀಯ ಸಿಬ್ಬಂದಿಗೆ ಅವರ ಹಕ್ಕಿನ ರಜೆಗಳನ್ನು ಪಡೆಯಲು ಅನುಮತಿ ನೀಡಬೇಕು ಎಂದು ಆರೋಗ್ಯ ಸಚಿವ ಶ್ರೀರಾಮುಲು ಅವರಿಗೆ ರಾಜ್ಯ ಆರೋಗ್ಯ ಸಹಾಯಕರ ಮತ್ತು ಮೇಲ್ವಿಚಾರಕರ ಕೇಂದ್ರ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಗೌಡ ಮನವಿ ಮಾಡಿದ್ದಾರೆ.

ಈಗಾಗಲೇ ಹಲವಾರು ಆರೋಗ್ಯ ಸಹಾಯಕರು ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ. ವಿವಿಧ ವಯೋಸಹಜ ಕಾಯಿಲೆಗಳುಳ್ಳ ಆರೋಗ್ಯ ಸಹಾಯಕರಿಗೆ ರಜೆ ಮಂಜೂರಾತಿಗೆ ವಿನಂತಿಸಲಾಗಿದ್ದರೂ ಪ್ರಯೋಜನವಾಗಿಲ್ಲ. ತೀವ್ರ ಒತ್ತಡದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇಲಾಖೆಯ ಆರೋಗ್ಯ ಸಹಾಯಕ ವೃಂದದ ನೌಕರರು ಐದಾರು ತಿಂಗಳುಗಳಿಂದ ಒಂದು ದಿನವೂ ರಜೆ ಪಡೆಯದೆ ದುಡಿಯುತ್ತಿದ್ದಾರೆ. ಇನ್ನು ಮುಂದಾದರೂ ಇಲಾಖೆ ನಮ್ಮ ನೋವನ್ನು ಅರ್ಥ ಮಾಡಿಕೊಂಡು ಕನಿಷ್ಠ ವಾರದಲ್ಲಿ ಒಂದು ದಿನವಾದರೂ ರಜೆ ನೀಡೆಬೇಕು ಎಂದು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News