ಸ್ಯಾಂಡಲ್‍ವುಡ್ ಡ್ರಗ್ಸ್ ದಂಧೆ ಆರೋಪಕ್ಕೆ ಮಹತ್ವದ ತಿರುವು: ನಟಿ ರಾಗಿಣಿ ದ್ವಿವೇದಿ ಬಂಧನ

Update: 2020-09-04 14:47 GMT

ಬೆಂಗಳೂರು, ಸೆ.4: ಸ್ಯಾಂಡಲ್‍ವುಡ್ ಡ್ರಗ್ಸ್ ದಂಧೆ ಆರೋಪಕ್ಕೆ ಸಂಬಂಧಿಸಿದಂತೆ ಚಿತ್ರ ನಟಿ ರಾಗಿಣಿ ದ್ವಿವೇದಿಯನ್ನು ಸಿಸಿಬಿ ಪೊಲೀಸರು ಬಂಧಿಸಿ ಪೊಲೀಸ್ ಕಸ್ಟಡಿಗೆ ಪಡೆದಿದ್ದಾರೆ.

ದಿನಕ್ಕೊಂದು ಸ್ಫೋಟಕ ತಿರುವು ಪಡೆದುಕೊಳ್ಳುತ್ತಿರುವ ಡ್ರಗ್ಸ್ ದಂಧೆ ಪ್ರಕರಣದಲ್ಲಿ ಗುರುವಾರ ರಾಗಿಣಿ ಆಪ್ತ ಎನ್ನಲಾದ ರವಿಶಂಕರ್ ನನ್ನು ಸಿಸಿಬಿ ಪೊಲೀಸರು ಕಸ್ಟಡಿಗೆ ಪಡೆದು ತೀವ್ರ ವಿಚಾರಣೆಗೊಳಪಡಿಸಿದ್ದರು. ಈ ವೇಳೆ ರಾಗಿಣಿಯೊಂದಿಗೆ ಸಂಪರ್ಕ ಹೊಂದಿರುವ ಬಗ್ಗೆ ರವಿಶಂಕರ್ ಬಾಯಿಬಿಟ್ಟಿದ್ದ ಎನ್ನಲಾಗಿದೆ.

ಆರೋಪಿಯ ಪ್ರಾಥಮಿಕ ಮಾಹಿತಿಯಂತೆ ನ್ಯಾಯಾಲಯದಿಂದ ಸರ್ಚ್ ವಾರೆಂಟ್ ಪಡೆದ ಸಿಸಿಬಿ ತನಿಖಾಧಿಕಾರಿಗಳು ಶುಕ್ರವಾರ ಮುಂಜಾನೆ ಇಲ್ಲಿನ ಯಲಹಂಕದಲ್ಲಿನ ನ್ಯಾಯಾಂಗ ಬಡಾವಣೆಯ ಅಪಾರ್ಟ್ ಮೆಂಟ್‍ನಲ್ಲಿ ನೆಲೆಸಿರುವ ರಾಗಿಣಿ ಅವರ ಫ್ಲಾಟ್ ಮೇಲೆ ದಾಳಿ ನಡೆಸಿ 4 ಗಂಟೆಗಳಿಗೂ ಹೆಚ್ಚು ಕಾಲ ಶೋಧ ಕಾರ್ಯ ಕೈಗೊಂಡರು.

ತದನಂತರ, ಹಾಡ್ಕ್ ಡಿಸ್ಕ್, ಲ್ಯಾಪ್‍ಟಾಪ್ ಹಾಗೂ ಕಂಪ್ಯೂಟರ್‍ವೊಂದನ್ನು ಜಪ್ತಿ ಮಾಡಿದ್ದಾರೆ. ಬಳಿಕ ಚಾಮರಾಜಪೇಟೆಯ ಸಿಸಿಬಿ ಕಚೇರಿಗೆ ರಾಗಿಣಿಯನ್ನು ಕರೆತಂದ ತನಿಖಾಧಿಕಾರಿಗಳು, ಸತತ ವಿಚಾರಣೆ ನಡೆಸಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಕಲೆಹಾಕಿ, ಬಂಧಿಸಿದ್ದಾರೆ.

ಪ್ರಕರಣ ದಾಖಲು: 12 ಮಂದಿ ವಿರುದ್ಧ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲು ಮಾಡಲಾಗಿದೆ. ಬಂಧಿತ ಆರೋಪಿಗಳಾದ ರವಿಶಂಕರ್ ಹಾಗೂ ರಾಹುಲ್‍ನನ್ನು ನ್ಯಾಯಾಲಯದಿಂದ ಅನುಮತಿ ಪಡೆದು ಪೊಲೀಸ್ ವಶಕ್ಕೆ ಪಡೆದುಕೊಂಡಿದ್ದೇವೆ. ಕಳೆದ ಒಂದು ತಿಂಗಳ ಹಿಂದಿನಿಂದಲೂ ಡ್ರಗ್ಸ್ ಬಳಸುವವರ ಮೇಲೆ ನಿಗಾ ವಹಿಸಿದ್ದೇವೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಮಾಹಿತಿ ನೀಡಿದರು.

ಸರಕಾರಿ ನೌಕರ: ಈ ಪ್ರಕರಣದಲ್ಲಿ ಸರಕಾರಿ ಇಲಾಖೆಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಕಾರ್ಯಕ್ರಮ(ಪಾರ್ಟಿ) ಆಯೋಜಿಸಿ ಡ್ರಗ್ಸ್ ಬಳಸುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿತ್ತು. ಈ ಆಧಾರದ ಮೇಲೆ ರವಿಶಂಕರ್ ಎಂಬಾತನನ್ನು ಬಂಧಿಸಲಾಗಿದೆ. ಈತ ಜಯನಗರದ ಆರ್‍ಟಿಓ ಕಚೇರಿಯಲ್ಲಿ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ. ಈತ ನಟಿ ಸೇರಿದಂತೆ ಇನ್ನೂ ಹಲವರನ್ನು ತಾನು ಆಯೋಜನೆ ಮಾಡುತ್ತಿದ್ದ ಪಾರ್ಟಿಗಳಿಗೆ ಭಾಗಿಯಾಗಿಸಿಕೊಂಡು ಡ್ರಗ್ಸ್ ಸರಬರಾಜು ಮಾಡುತ್ತಿದ್ದ ಎಂಬ ಆರೋಪದಡಿ ಈತನನ್ನು ಬಂಧಿಸಲಾಗಿದೆ ಎಂದು ಆಯುಕ್ತರು ತಿಳಿಸಿದರು.

ಪ್ರಕರಣದ ಸೂಕ್ಷ್ಮ್ಮತೆಯ ದೃಷ್ಟಿಯಿಂದ ನಮಗಿನ್ನೂ ಸಮಯ ಬೇಕಾಗಿದ್ದು, ಮುಂದೆ ಎಲ್ಲವನ್ನು ಬಹಿರಂಗಪಡಿಸುತ್ತೇವೆ. ಆದರೆ, ಈಗಲೇ ಏನನ್ನೂ ತಿಳಿಸಲು ಸಾಧ್ಯವಿಲ್ಲ ಎಂದ ಅವರು, ಎರಡನೆ ಹಂತದ ತನಿಖೆ ಪ್ರಾರಂಭಿಸಿದ್ದು, ಇನ್ನೂ, ಕೆಲವರ ಬಗೆಗಿನ ಮಾಹಿತಿ ಲಭಿಸಿದೆ ಎಂದು ತಿಳಿಸಿದರು.

ಹಲವು ಮಂದಿಗೆ ನೋಟಿಸ್

ಕೆಲವರು ಡ್ರಗ್ಸ್ ತೆಗೆದುಕೊಂಡು ಪಾರ್ಟಿಗಳನ್ನು ಮಾಡುತ್ತಿದ್ದರು. ಅವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿ ಸಾಕಷ್ಟು ಮಾಹಿತಿ ಸಿಕ್ಕಿದೆ. ಅವರ ಮೊಬೈಲ್‍ನಲ್ಲಿದ್ದ ದಾಖಲೆಗಳು ಪರಿಶೀಲನೆ ಮಾಡಿದಾಗ ಬೇರೆಯವರ ಡ್ರಗ್ಸ್ ವ್ಯವಹಾರದ ಮಾಹಿತಿ ಸಿಕ್ಕಿದೆ. ಇದರ ಆಧಾರದ ಮೇಲೆ ನಾವು ಕೆಲವರಿಗೆ ನೋಟಿಸ್ ಕೊಟ್ಟಿದ್ದೇವೆ. ಬೇರೆಯವರ ಮೇಲೆ ಸಿಸಿಬಿ ಅಧಿಕಾರಿಗಳು ನಿಗಾವಹಿಸಿದ್ದಾರೆ.

-ಕಮಲ್ ಪಂತ್, ನಗರ ಪೊಲೀಸ್ ಆಯುಕ್ತ 

ನೆರೆಯ ರಾಷ್ಟ್ರಗಳೊಂದಿಗೆ ಸಂಪರ್ಕ

ಪ್ರಕರಣದ ಆರೋಪಿಗಳಿಗೆ ನೆರೆಯ ರಾಷ್ಟ್ರಗಳಲ್ಲಿನ ಡ್ರಗ್ಸ್ ದಂಧೆಕೋರರ ಜೊತೆ ಸಂಪರ್ಕ ಹೊಂದಿರುವ ಮಾಹಿತಿ ಪ್ರಾಥಮಿಕ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ತನಿಖೆ ಚುರುಕುಗೊಳಿಸಲಾಗಿದೆ ಎಂದು ಸಿಸಿಬಿ ಮಾಹಿತಿ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News