ಬೆಂಗಳೂರು ಗಲಭೆ ಪೂರ್ವನಿಯೋಜಿತ, ಎಸ್‍ಡಿಪಿಐ- ಪಿಎಫ್‍ಐ ನೇರ ಕಾರಣ: ಸತ್ಯ ಶೋಧನಾ ಸಮಿತಿ

Update: 2020-09-04 14:16 GMT
ಫೈಲ್ ಚಿತ್ರ

ಬೆಂಗಳೂರು, ಸೆ. 4: ನಗರದ ದೇವರಜೀವನಹಳ್ಳಿ(ಡಿ.ಜೆ.ಹಳ್ಳಿ) ಮತ್ತು ಕಾಡುಗೊಂಡನಹಳ್ಳಿ(ಕೆ.ಜಿ.ಹಳ್ಳಿ)ಯಲ್ಲಿ ನಡೆದ ಗಲಭೆ `ಸಂಘಟಿತ ಮತ್ತು ಪೂರ್ವನಿಯೋಜಿತ ಗಲಾಟೆಯಾಗಿದ್ದು, ಇದು ಆಕಸ್ಮಿಕವಾಗಿ ನಡೆದಿಲ್ಲ' ಎಂಬ ಅಂಶವನ್ನು ನಿವೃತ್ತ ಜಿಲ್ಲಾ ನ್ಯಾಯಾಧೀಶ ಶ್ರೀಕಾಂತ್ ಡಿ.ಬಬಲಾಡಿ, ನಿವೃತ್ತ ಐಎಎಸ್ ಅಧಿಕಾರಿ ಮದನ್ ಗೋಪಾಲ್ ನೇತೃತ್ವದ ಸಿಟಿಜನ್ ಫಾರ್ ಡೆಮಾಕ್ರಸಿ ಎಂಬ ಸಂಘಟನೆ ನಡೆಸಿದ ಸತ್ಯಾ ಶೋಧನಾ ಸಮಿತಿ ವರದಿಯಲ್ಲಿ ತಿಳಿಸಲಾಗಿದೆ.

ಶುಕ್ರವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಬೆಂಗಳೂರಿನ ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸತ್ಯ ಶೋಧನಾ ಸಮಿತಿ ಒಟ್ಟು 49 ಪುಟಗಳ ವರದಿಯನ್ನು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಸಲ್ಲಿಸಿತು. `ಈ ಗಲಭೆ ಕೇವಲ ಕೋಮುಗಲಭೆಯಲ್ಲ, ವ್ಯವಸ್ಥೆಯ ವಿರುದ್ದದ ಆಕ್ರೋಶ ಹೊರ ಹಾಕುವ ಪ್ರಯತ್ನ ಇದಾಗಿದೆ. ಸ್ಥಳೀಯರೇ ಈ ಕೃತ್ಯ ಎಸಗಿದ್ದು, ಅಲ್ಲಿನ ಜನರೇ ಗಲಭೆಯಲ್ಲಿ ಶಾಮೀಲಾಗಿದ್ದಾರೆ. ಆದರೆ, ರಾಜಕೀಯ ಉದ್ದೇಶಕ್ಕಾಗಿ ಗಲಭೆ ನಡೆದಿಲ್ಲ. ಇದೊಂದು ಪೂರ್ವನಿಯೋಜಿತವಾಗಿ ಎಸಗಿರುವ ಕೃತ್ಯವಾಗಿದ್ದು, ಇದಕ್ಕೆ ಎಸ್‍ಡಿಪಿಐ ಮತ್ತು ಪಿಎಫ್‍ಐ ಸಂಘಟನೆಗಳು ನೇರ ಕಾರಣ' ಎಂದು ವರದಿಯಲ್ಲಿ ಆರೋಪಿಸಲಾಗಿದೆ.

ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ವರದಿಯನ್ನ ಹಸ್ತಾಂತರಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ನಿವೃತ್ತ ಐಎಎಸ್ ಅಧಿಕಾರಿ ಮದನ್ ಗೋಪಾಲ್, `ಡಿ.ಜೆ.ಹಳ್ಳಿ, ಮತ್ತು ಕೆ.ಜಿ.ಹಳ್ಳಿ ಗಲಭೆ ತಕ್ಷಣಕ್ಕಾಗಲಿ, ಇಲ್ಲವೇ ಆಕಸ್ಮಿಕವಾಗಿ ನಡೆದಿಲ್ಲ. ಪೂರ್ವಭಾವಿ ಸಿದ್ಧತೆಯೊಂದಿಗೆ ವ್ಯವಸ್ಥಿತವಾಗಿ ಸಮುದಾಯವೊಂದನ್ನು ಗುರಿಯನ್ನಾಗಿಟ್ಟುಕೊಂಡು ನಡೆಸಲಾಗಿದೆ. ಈ ಘಟನೆಯನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಇಡೀ ದೇಶದ ಅರ್ಥವ್ಯವಸ್ಥೆಯನ್ನು ಹಾಳು ಮಾಡುವ ವ್ಯರ್ಥ ಪ್ರಯತ್ನ ಇದಾಗಿದೆ' ಎಂದು ಉಲ್ಲೇಖಿಸಿದರು.

ದೇಶದ ಬೇರೆ ಬೇರೆ ಭಾಗಗಳಲ್ಲಿ ನಡೆಸಿರುವ ಕೃತ್ಯಗಳಂತೆಯೇ ಬೆಂಗಳೂರಿನಲ್ಲೂ ಗಲಭೆ ನಡೆಸಿದ್ದು, ಸಮಾಜದಲ್ಲಿ ಭೀತಿಯ ವಾತಾವರಣ ಸೃಷ್ಟಿಸಿ ಗಲಭೆ ನಡೆಸಲಾಗಿದೆ. ಉತ್ತರ ಪ್ರದೇಶದಲ್ಲಿ ನಡೆದ ಘಟನೆಯಂತೆ ಇಲ್ಲಿಯೂ ಅದೇ ಮಾದರಿಯಂತೆ ಸಾರ್ವಜನಿಕರ ಆಸ್ತಿಪಾಸಿ ಹಾಳು ಮಾಡಿ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಚಿಕ್ಕ ಘಟನೆ ಸೃಷ್ಟಿಸಿ ಸ್ಥಳೀಯ ಜನರನ್ನು ಭಯಭೀತರನ್ನಾಗಿ ಮಾಡುವುದೇ ಇದರ ಉದ್ದೇಶವಾಗಿತ್ತು. ಒಂದು ಸಲ ಭಯದ ವಾತಾವರಣ ನಿರ್ಮಾಣವಾದರೆ ಜನರು ದೇಶದ ವ್ಯವಸ್ಥೆಯ ಮೇಲೆ ನಂಬಿಕೆ ಕಳೆದುಕೊಳ್ಳುತ್ತಾರೆ ಎಂಬ ಕಾರಣಕ್ಕಾಗಿಯೇ ಈ ಕೃತ್ಯ ಎಸಗಲಾಗಿದೆ' ಎಂದು ಮದನ್ ಗೋಪಾಲ್ ತಿಳಿಸಿದರು.

ಸಮಿತಿಯಲ್ಲಿ ನಿವೃತ್ತ ಜಿಲ್ಲಾ ನ್ಯಾಯಾಧೀಶ ಶ್ರೀಕಾಂತ್.ಡಿ ಬಬಲಾಡಿ, ನಿವೃತ್ತ ಐಎಎಸ್ ಅಧಿಕಾರಿ ಮದನ್ ಗೋಪಾಲ್, ನಿವೃತ್ತ ಐಎಎಫ್ ಅಧಿಕಾರಿಗಳಾದ ಡಾ.ಆರ್.ರಾಜು, ಡಾ.ಪ್ರಕಾಶ್, ನಿವೃತ್ತ ಡಿಜಿಪಿ ಎಂ.ಎನ್.ಕೃಷ್ಣಮೂರ್ತಿ, ಪತ್ರಕರ್ತರಾದ ಆರ್.ಕೆ.ಮ್ಯಾಥ್ಯೂ, ಸಂತೋಷ್ ತಮಯ್ಯ, ಪ್ರೊ.ಡಾ.ಎಂ.ಜಯಪ್ಪ, ಪ್ರೊ.ಡಾ.ಎಚ್.ಟಿ.ಅರವಿಂದ, ಮುನಿರಾಜು ಸೇರಿದಂತೆ ಇನ್ನಿತರರು ಇದ್ದರು.

ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿ ಗಲಭೆ ಬಗ್ಗೆ ಸರಕಾರ ತಕ್ಷಣವೇ ಎಲ್ಲ ಜಾಗೃತೆ ವಹಿಸಬೇಕು. ಗುಪ್ತಚರ ವಿಭಾಗವನ್ನು ಆಧುನಿಕತೆಗೆ ತಕ್ಕಂತೆ ಬಲಪಡಿಸಬೇಕಾದ ಅಗತ್ಯವಿದೆ. ನಾವು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ವರದಿಯನ್ನು ಸಿದ್ಧಪಡಿಸಿದ್ದೇವೆ. ಸರಕಾರ ಈ ಬಗ್ಗೆ ಅಗತ್ಯಕ್ರಮ ಕೈಗೊಳ್ಳುವ ವಿಶ್ವಾಸವಿದೆ'

-ಮದನ್ ಗೋಪಾಲ್, ನಿವೃತ್ತ ಐಎಎಸ್ ಅಧಿಕಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News