ನವೆಂಬರ್ 29ರ ಒಳಗೆ ಬಿಹಾರ ವಿಧಾನ ಸಭೆ ಚುನಾವಣೆ, ಉಪ ಚುನಾವಣೆ: ಚುನಾವಣಾ ಆಯೋಗ

Update: 2020-09-04 18:45 GMT

ಹೊಸದಿಲ್ಲಿ, ಸೆ. 4: ಬಾಕಿ ಉಳಿದಿರುವ 65 ಸ್ಥಾನಗಳಿಗೆ ಉಪ ಚುನಾವಣೆ ಹಾಗೂ ಬಿಹಾರ ವಿಧಾನ ಸಭೆ ಚುನಾವಣೆಯನ್ನು ಸರಿಸುಮಾರು ಒಂದೇ ಸಮಯದಲ್ಲಿ ನಡೆಸಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗ ಶುಕ್ರವಾರ ಘೋಷಿಸಿದೆ.

ಬಿಹಾರ ವಿಧಾನ ಸಭೆ ಚುನಾವಣೆಯನ್ನು ನವೆಂಬರ್ 29ರ ಒಳಗೆ ನಡೆಸಲಾಗುವುದು ಎಂದು ಚುನಾವಣಾ ಆಯೋಗ ಹೇಳಿದೆ. ಕೇಂದ್ರ ಸೇನಾ ಪಡೆಯ ಸುಲಭ ಸಂಚಾರ ಹಾಗೂ ಚುನಾವಣೆಗೆ ಸಂಬಂಧಿಸಿದ ಸರಕುಗಳ ಪೂರೈಕೆ ಹಿನ್ನೆಲೆಯಲ್ಲಿ ಈ ಚುನಾವಣೆಗಳನ್ನು ಒಂದೇ ಸಮಯದಲ್ಲಿ ನಡೆಸಲು ನಿರ್ಧರಿಸಲಾಗಿದೆ ಎಂದು ಚುನಾವಣಾ ಆಯೋಗದ ಹೇಳಿಕೆ ತಿಳಿಸಿದೆ. ಲೋಕಸಭೆಯ ಹಾಗೂ ವಿಧಾನ ಸಭೆಯ 65 ಸ್ಥಾನಗಳಿಗೆ ಉಪಚುನಾವಣೆ ನಡೆಯಬೇಕಿದೆ. ಇವುಗಳಲ್ಲಿ 64 ವಿವಿಧ ರಾಜ್ಯಗಳಲ್ಲಿರುವ ವಿಧಾನ ಸಭೆ ಸ್ಥಾನಗಳು. ಒಂದು ಲೋಕಸಭೆ ಸ್ಥಾನ.

ಕೊರೋನ ಸಾಂಕ್ರಾಮಿಕ ಹರಡುವಿಕೆ ಹಾಗೂ ತೀವ್ರವಾಗಿ ಸುರಿದ ಮಳೆಯಿಂದಾಗಿ ಹಲವು ಉಪ ಚುನಾವಣೆಗಳನ್ನು ಮುಂದೂಡಲಾಗಿತ್ತು. ವಿವಿಧ ರಾಜ್ಯಗಳಲ್ಲಿ ಉಪ ಚುನಾವಣೆ ನಡೆಸುವುದಕ್ಕೆ ಸಂಬಂಧಿಸಿ ಇಂದು ಬೆಳಗ್ಗೆ ಚುನಾವಣಾ ಆಯೋಗ ಸಭೆ ನಡೆಸಿದೆ ಎಂದು ಪತ್ರಿಕಾ ಹೇಳಿಕೆ ತಿಳಿಸಿದೆ. ಕೆಲವು ಪ್ರದೇಶಗಳಲ್ಲಿ ಭಾರೀ ಮಳೆ ಸುರಿಯುತ್ತಿರುವುದು ಹಾಗೂ ಕೊರೋನ ಸಾಂಕ್ರಾಮಿಕ ರೋಗದಂತಹ ಇತರ ಅಡ್ಡಿಗಳು ಸೇರಿದಂತೆ ಹಲವು ಅಂಶಗಳ ಕಾರಣಕ್ಕಾಗಿ ತಮ್ಮ ರಾಜ್ಯಗಳಲ್ಲಿ ಉಪ ಚುನಾವಣೆ ಮುಂದೂಡುವಂತೆ ಕೋರಿ ಸಂಬಂಧಿತ ಹಲವು ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು/ಮುಖ್ಯ ಚುನಾವಣಾ ಅಧಿಕಾರಿಗಳು ನೀಡಿದ ವರದಿ ಹಾಗೂ ಮಾಹಿತಿಯನ್ನು ಪರಿಶೀಲನೆ ನಡೆಸಲಾಗಿತ್ತು ಎಂದು ಚುನಾವಣಾ ಆಯೋಗದ ಹೇಳಿದೆ. ಬಿಹಾರದ ವಿಧಾನ ಸಭೆ ಚುನಾವಣೆ 2020 ನವೆಂಬರ್ 29ಕ್ಕಿಂತ ಮುನ್ನ ಪೂರ್ಣಗೊಳ್ಳಬೇಕು. ಈ ಹಿನ್ನೆಲೆಯಲ್ಲಿ ಎಲ್ಲ 65 ಸ್ಥಾನಗಳ ಉಪ ಚುನಾವಣೆ ಹಾಗೂ ಬಿಹಾರ್ ವಿಧಾನಸಭೆ ಚುನಾವಣೆಯನ್ನು ಒಂದೇ ಸಮಯದಲ್ಲಿ ನಡೆಸಲು ಚುನಾವಣಾ ಆಯೋಗ ನಿರ್ಧರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News