ಬರುತ್ತಿದೆ ಪಬ್-ಜಿಗೆ ಪರ್ಯಾಯ ‘ಫೌ-ಜಿ’: ಪೋಸ್ಟರ್ ಬಿಡುಗಡೆಗೊಳಿಸಿದ ಅಕ್ಷಯ್ ಕುಮಾರ್

Update: 2023-06-30 05:07 GMT

ಹೊಸದಿಲ್ಲಿ: ‘ಫೌ-ಜಿ’ ಎಂಬ ಭಾರತೀಯ ಗೇಮ್  ಪಬ್‌ ಜಿಗೆ ಪರ್ಯಾಯವಾಗಿ ಬಿಡುಗಡೆಯಾಗಲಿದ್ದು, ಬೆಂಗಳೂರು ಮೂಲದ ಎನ್‌ ಕೋರ್ ಗೇಮ್ಸ್ ಇದನ್ನು ಅಭಿವೃದ್ಧಿಪಡಿಸಿದೆ. ಇದನ್ನು ಟ್ವಿಟರ್ ಮೂಲಕ ಪ್ರಚಾರ ಮಾಡಲು ಭಾರತೀಯ ಗೇಮಿಂಗ್ ಜಗತ್ತಿನ ಮುತ್ಸದ್ಧಿ ವಿಶಾಲ್ ಗೊಂಡಲ್ ಮತ್ತು ನಟ ಅಕ್ಷಯ್ ಕುಮಾರ್ ಮುಂದಾಗಿದ್ದಾರೆ.

ಫೌ-ಜಿ ಎನ್ನುವುದು ಫಿಯರ್‌ಲೆಸ್ ಆ್ಯಂಡ್ ಯುನೈಟೆಡ್ ಗಾರ್ಡ್ ಎನ್ನುವುದರ ಸಂಕ್ಷಿಪ್ತ ರೂಪವಾಗಿದೆ. ಇದರ ಪ್ರಚಾರ ಟ್ವೀಟ್‌ ನ ಪ್ರಕಾರ, ಈ ಸಂಸ್ಥೆಯ ಒಟ್ಟು ಆದಾಯದಲ್ಲಿ ಶೇಕಡ 20ನ್ನು ಸರ್ಕಾರದ ನಿಧಿಸಂಗ್ರಹ ಉಪಕ್ರಮವಾದ ಭಾರತ್ ಕೆ ವೀರ್‌ಗೆ ನೀಡಲಾಗುತ್ತದೆ. ಆದರೆ ಫೌ-ಜಿ ಬಿಡುಗಡೆಯ ದಿನಾಂಕವನ್ನು ಪ್ರಕಟಿಸಿಲ್ಲ. ಈ ಗೇಮ್ ಮೊಬೈಲ್‌ ಗೆ ಸೀಮಿತವಾಗಿರುತ್ತದೆಯೇ ಅಥವಾ ವೈಯಕ್ತಿಕ ಕಂಪ್ಯೂಟರ್ ಅವತರಣಿಕೆಯೂ ಇದೆಯೇ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.
ಗೊಂಡಲ್ ಹೊರತಾಗಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಕೂಡಾ ಟ್ವಿಟರ್ ಮೂಲಕ ಫೌ-ಜಿ ಆ್ಯಪ್ ಪ್ರಚಾರ ಆರಂಭಿಸಿದ್ದಾರೆ. ಅವರ ಖಾತೆಯಿಂದ ಗೇಮ್‌ ನ ಸ್ಟೋರಿ ಲೈನ್ ವಿವರಿಸುವ ಪೋಸ್ಟರ್ ಕೂಡಾ ಷೇರ್ ಮಾಡಲಾಗಿದೆ. ಇದು ಪ್ರಧಾನಿ ನರೇಂದ್ರ ಮೋದಿಯವರ ಆತ್ಮನಿರ್ಭರ ಭಾರತಕ್ಕೆ ಕೊಡುಗೆ ನೀಡುತ್ತದೆ ಎಂದು ಬಿಂಬಿಸಲಾಗಿದೆ.
ದೇಶದಲ್ಲಿ ಚೀನಾ ಮೂಲದ 116 ಆ್ಯಪ್‌ಗಳನ್ನು ನಿಷೇಧಿಸಿದ್ದನ್ನು ಕೇಂದ್ರ ಸರ್ಕಾರ ಪ್ರಕಟಿಸಿದ ಕೆಲವೇ ದಿನಗಳಲ್ಲಿ ಈ ಘೋಷಣೆ ಹೊರಬಿದ್ದಿದೆ. ಭಾರತೀಯ ಯುವ ಮೊಬೈಲ್ ಗೇಮಿಂಗ್ ಪ್ರಿಯರಲ್ಲಿ ಬ್ಯಾಟಲ್ ರಾಯಲ್ ಗೇಮ್ ಜನಪ್ರಿಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News