×
Ad

ಸರಕಾರದಿಂದ ಖಾಸಗಿ ವಾಹನ ಚಾಲಕರ ನಿರ್ಲಕ್ಷ್ಯ ಖಂಡಿಸಿ ವಾಹನ ಚಾಲಕರ ಒಕ್ಕೂಟದಿಂದ ಪ್ರತಿಭಟನಾ ಧರಣಿ

Update: 2020-09-05 23:02 IST

ಬೆಂಗಳೂರು, ಸೆ.5: ಖಾಸಗಿ ವಾಹನ ಚಾಲಕರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ನಿರ್ಲಕ್ಷ್ಯ ವಹಿಸುತ್ತಿರುವ ಕೇಂದ್ರ ಹಾಗೂ ರಾಜ್ಯ ಸರಕಾರದ ನೀತಿಯನ್ನು ವಿರೋಧಿಸಿ ಕರ್ನಾಟಕ ಖಾಸಗಿ ವಾಹನ ಚಾಲಕರ ಒಕ್ಕೂಟದಿಂದ ನಗರದ ಮೌರ್ಯ ವೃತ್ತದ ಬಳಿ ಪ್ರತಿಭಟನಾ ಧರಣಿಯನ್ನು ಹಮ್ಮಿಕೊಳ್ಳಲಾಗಿತ್ತು.

ಖಾಸಗಿ ವಾಹನಗಳಿಂದ ರಸ್ತೆ ತೆರಿಗೆ, ಡೀಸೆಲ್ ಮೇಲೆ ಜಿಎಸ್ಟಿ, ಟೋಲ್ ತೆರಿಗೆ, ಬಿಡಿ ಭಾಗಗಳ ಮೇಲೆ ತೆರಿಗೆ, ವಿಮೆ, ವಾಹನ ಖರೀದಿಸುವಾಗ ತೆರಿಗೆ, ಇಷ್ಟೆಲ್ಲದರ ಜೊತೆಗೆ ಆದಾಯ ತೆರಿಗೆ ನೀಡುವ ಹಾಗೂ ದೇಶದಲ್ಲಿ ಅತೀ ಹೆಚ್ಚು ತೆರಿಗೆ ಪಾವತಿ ಮಾಡುವ ಅಸಂಘಟಿತ ಉದ್ಧಿಮೆಯು ಇದಾಗಿದೆ. ಇಂತಹ ಉದ್ದಿಮೆಯು 2020 ಮಾರ್ಚ್ ತಿಂಗಳಿನಿಂದ ಇಲ್ಲಿಯತನಕ ನೆಲಕಚ್ಚಿದೆ ಮತ್ತು ಚೇತರಿಕೆ ಕಾಣುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಇಂತಹ ಕ್ಲಿಷ್ಟ ಪರಿಸ್ಥಿತಿಯಲ್ಲಿ ನಾವು ನಮ್ಮ ನ್ಯಾಯಯುತ ಬೇಡಿಕೆಯ ಮನವಿಯನ್ನ ಸರಕಾರಕ್ಕೆ ಸಲ್ಲಿಸಿದ್ದರೂ ಸರಕಾರ ನಮಗೆ ಸ್ಪಂದಿಸುತ್ತಿಲ್ಲವೆಂದು ಖಾಸಗಿ ವಾಹನ ಚಾಲಕರ ಒಕ್ಕೂಟದ ಗಂಡಸಿ ಸದಾನಂದಸ್ವಾಮಿ ಆರೋಪಿಸಿದ್ದಾರೆ.

ಖಾಸಗಿ ಸಾರಿಗೆ ಉದ್ದಿಮೆಯ ಮೇಲೆ ರಾಜ್ಯದಲ್ಲಿ ಸುಮಾರು 80 ಲಕ್ಷ ಜನ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಅವಲಂಬಿತರಾಗಿದ್ದು, ಅವರ ಪರಿಸ್ಥಿತಿ ಚಿಂತಾನಜನಕವಾಗಿದೆ. ಇಂತಹ ಕ್ಲಿಷ್ಟ ಪರಿಸ್ಥಿಯ ನಡುವೆಯು ಸದ್ಯ ರಾಜ್ಯದಲ್ಲಿ ಬರೀ ಶೆ.5ರಷ್ಟು ವಾಹನಗಳು ಸಂಚರಿಸುತ್ತಿವೆ.ಇದಕ್ಕೂ ರಾಜ್ಯದ ಸಾರಿಗೆ ಇಲಾಖೆ ಅಧಿಕಾರಿಗಳು ಲಂಚದ ಆಸೆಗೆ ಯಾವುದೋ ಹಳೆಯ ಆದೇಶವೊಂದನ್ನು ನೆಪವಾಗಿಟ್ಟುಕೊಂಡು ಆಯುಕ್ತರ ಸೂಚನೆಯ ಮೇರೆಗೆ ರಸ್ತೆಗಳಲ್ಲಿ ಚಾಲಕರಿಗೆ ಕಿರುಕುಳ ನೀಡುತ್ತಿರುತ್ತಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾ ಧರಣಿಯಲ್ಲಿ ಲಯನ್ ಕೆ.ರಾಧಾಕೃಷ್ಣ ಹೊಳ್ಳ (ಕೆಎಸ್‌ಟಿಒಎ), ನಟರಾಜ ಶರ್ಮಾ (ಕೆಎಸ್‌ಟಿಒಎ), ಗಂಡಸಿ ಸದಾನಂದ ಸ್ವಾಮಿ (ಎನ್‌ಡಿಯು), ನಾರಾಯಣಸ್ವಾಮಿ (ಕೆಸಿಒ), ಆದರ್ಶ ಮಂಜುನಾಥ್, ಹಮೀದ್ ಅಕ್ಬರ್ ಅಲಿ (ಕೆಎಸ್‌ಟಿಒಎ) ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News