×
Ad

ಹೆಣ್ಣಿನಲ್ಲಾಗುವ ನೈಸರ್ಗಿಕ ಕ್ರಿಯೆಯನ್ನು ಸೂತಕವೆಂದು ಬಿಂಬಿಸಲಾಗಿದೆ: ಎಚ್.ಎಲ್. ಪುಷ್ಪಾ

Update: 2020-09-06 21:58 IST

ಬೆಂಗಳೂರು, ಸೆ. 6: ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಹೆಣ್ಣಿನ ದೇಹದಲ್ಲಾಗುವ ನೈಸರ್ಗಿಕ ಕ್ರಿಯೆಗಳನ್ನು ಸೂತಕವೆಂದು ಇಂದಿಗೂ ಭಾವಿಸುತ್ತಾ ಬರಲಾಗುತ್ತಿದೆ ಎಂದು ಹಿರಿಯ ಕವಯತ್ರಿ ಎಚ್.ಎಲ್.ಪುಷ್ಪಾ ಬೇಸರ ವ್ಯಕ್ತಪಡಿಸಿದ್ದಾರೆ.

ಜನದನಿ ಸಂಸ್ಥೆ ಆಯೋಜಿಸಿದ್ದ ಜನಜಾಗೃತಿ ಅಭಿಯಾನ ಆನ್‍ಲೈನ್ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನನ್ನ ದೇಹ ನನ್ನ ಹಕ್ಕು ಎಂಬ ಪರಿಕಲ್ಪನೆ ಇತ್ತೀಚೆಗೆ ಬಂದದ್ದು. ಅದಕ್ಕಿಂತಲೂ ಮೊದಲು ಹೆಣ್ಣಿನ ದೇಹವೆಂದರೆ ಅದು ಸಂತಾನಕ್ಕೆ ಮಾತ್ರ ಸೀಮಿತವೆಂದು ಭಾವಿಸಲಾಗಿತ್ತೆಂದರು.

ಮುಟ್ಟು, ಗರ್ಭ ಧರಿಸುವ ಪ್ರಕ್ರಿಯೆಗೆ ಮಾತ್ರ ಹೆಣ್ಣು ಯೋಗ್ಯಳು. ಅದನ್ನು ಹೊರತು ಪಡಿಸಿದರೆ, ಹಿರಿಯರು ಹೇಳಿಕೆ ಜವಾಬ್ದಾರಿಗಳನ್ನು ಪಾಲಿಸುವುದು, ಸಾಂಸಾರಿಕ ಜೀವನದಲ್ಲಿ ಮಗಳಾಗಿ, ತಾಯಿಯಾಗಿ, ಹೆಂಡತಿಯಾಗಿ ತಮ್ಮ ಜವಾಬ್ದಾರಿಗಳನ್ನು ಸರಿಯಾಗಿ ಪಾಲನೆ ಮಾಡಬೇಕು ಎನ್ನುವುದೇ ಮುಖ್ಯ ಗುರಿಯನ್ನಾಗಿ ಮಾಡಲಾಗಿತ್ತೆಂದು ಅವರು ವಿವರಿಸಿದರು.

ಹೆಣ್ಣಿನಲ್ಲಿ ಸಹಜವಾಗಿ ನಡೆಯುವ ಮುಟ್ಟು ಎಂಬ ಪ್ರಕ್ರಿಯೆ ಜರುಗುವುದು ಮತ್ತು ನಿಲ್ಲುವುದು ಹೆಣ್ಣಿಗೆ ಸಂಕುಚಿತ ಮನೋಭಾವವನ್ನು ಉಂಟು ಮಾಡುತ್ತಿತ್ತು. ಹೀಗಿದ್ದಾಗ ಹೆಣ್ಣಿಗೆ ತನ್ನ ದೇಹದ ಕುರಿತು ಸಂಭ್ರಮಿಸಬೇಕೋ ಅಥವಾ ವಿಷಾದಿಸಬೇಕೋ ಎಂಬುದು ಗೊತ್ತಿಲ್ಲದಂತಹ ಸಂದರ್ಭ ನಿರ್ಮಾಣವಾಗಿತ್ತು. ಈ ಪರಿಸ್ಥಿತಿ ಈಗಲೂ ಆಗೆಯೇ ಇದೆ ಎಂದು ಅವರು ಹೇಳಿದರು.

ಕನ್ನಡ ಕಾವ್ಯದಲ್ಲಿ ದೇಹ ಮತ್ತು ವ್ಯಕ್ತಿತ್ವ ಕುರಿತು ಹಿರಿಯ ಕವಯತ್ರಿ ಹಾಗೂ ಸಿನೆಮಾ ನಿರ್ದೇಶಕಿ ಪ್ರತಿಭಾ ನಂದಕುಮಾರ್ ಮಾತನಾಡಿ, ಎಲ್ಲ ಕಲಾ ಪ್ರಕಾರಗಳಲ್ಲೂ ಮಹಿಳೆಯರ ದೇಹವನ್ನು ವರ್ಣಿಸುತ್ತಿದ್ದು ಪುರುಷರೇ ಆಗಿದ್ದರು. ಮುಖ್ಯವಾಗಿ ಕನ್ನಡ ಕಾವ್ಯದಲ್ಲಿ ಹೆಣ್ಣಿನ ವರ್ಣನೆಯನ್ನು ಸಂಕುಚಿತದಿಂದ ಹಾಗೂ ಪುರುಷರನ್ನು ವರ್ಣಿಸುವಾಗ ಧೀರೋತ್ತತೆ, ಶೂರತ್ವದಿಂದ ಬಿಂಬಿಸಲಾಗಿದೆ. ಆಧುನಿಕ ಯುಗದಲ್ಲಿಯೂ ಗಂಡು-ಹೆಣ್ಣಿನ ದೇಹದ ಕುರಿತು ನಮ್ಮ ತಾಕಲಾಟಗಳು ಗೊಂದಲದ ಗೂಡಿನೊಳಗೆ ಸಿಕ್ಕಿಕೊಂಡಿವೆ ಎಂದು ಅಭಿಪ್ರಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News