ನಿದ್ರೆಯ ಕೊರತೆ ವಿದ್ಯಾರ್ಥಿಗಳಲ್ಲಿ ಮಾನಸಿಕ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ

Update: 2020-09-06 18:29 GMT

ಸಮರ್ಪಕ ನಿದ್ರೆಯು ಆರೋಗ್ಯಕರ ಬದುಕಿಗೆ ಮೂಲಮಂತ್ರವಾಗಿದೆ. ಸಾಕಷ್ಟು ನಿದ್ರೆಯು ಶರೀರವು ಸಮರ್ಪಕವಾಗಿ ಕಾರ್ಯ ನಿರ್ವಹಿಸಲು ನೆರವಾಗುತ್ತದೆ ಮತ್ತು ಮರುದಿನವನ್ನು ಆರಂಭಿಸಲು ಅಗತ್ಯ ಶಕ್ತಿಯನ್ನು ಒದಗಿಸುತ್ತದೆ. ಸಾಕಷ್ಟು ನಿದ್ರೆಯು ದೊರೆಯದಿದ್ದರೆ ಅದರ ಪ್ರತಿಕೂಲ ಪರಿಣಾಮಗಳನ್ನು ಈ ಹಿಂದೆ ಹಲವಾರು ಅಧ್ಯಯನಗಳು ತೋರಿಸಿವೆ. ಹೊಸ ಅಧ್ಯಯನವೊಂದು ನಿದ್ರೆಯ ಕೊರತೆಯು ವಿದ್ಯಾರ್ಥಿಗಳ ಬೀರುವ ಕೆಟ್ಟ ಪರಿಣಾಮಗಳನ್ನು ಪ್ರಮುಖವಾಗಿ ಬಿಂಬಿಸಿದೆ.

‘ಸ್ಲೀಪ್’ ಜರ್ನಲ್‌ನಲ್ಲಿ ಪ್ರಕಟವಾಗಿರುವ ಅಧ್ಯಯನ ವರದಿಯು ನಿದ್ರೆಯ ಕೊರತೆಯು ವಿದ್ಯಾರ್ಥಿಗಳಲ್ಲಿ ಉದ್ವೇಗ,ಸ್ವ-ಹಾನಿ ಮತ್ತು ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆಗಳಂತಹ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಹೆಚ್ಚಿಸುತ್ತದೆ ಎಂದು ಹೇಳಿದೆ.

ಸಂಶೋಧಕರು 110,496 ವಿದ್ಯಾರ್ಥಿಗಳನ್ನು ಅಧ್ಯಯನಕ್ಕೊಳಪಡಿಸಿದ್ದು,ಈ ಪೈಕಿ 8,462 ಕ್ರೀಡಾಪಟುಗಳಿದ್ದರು. ಅಧ್ಯಯನದ ಬಳಿಕ ಸಂಶೋಧಕರು,ಸಾಕಷ್ಟು ನಿದ್ರೆಯ ಕೊರತೆಯು ಮಾನಸಿಕ ಅಸ್ವಸ್ಥತೆ ಸ್ಥಿತಿಗಳ ಲಕ್ಷಣಗಳನ್ನು ಶೇ.20ರಷ್ಟು ಹೆಚ್ಚಿಸುತ್ತದೆ ಎಂಬ ತೀರ್ಮಾನಕ್ಕೆ ಬಂದಿದ್ದಾರೆ.

ನಿದ್ರೆಯ ಕೊರತೆಯು ಖಿನ್ನತೆಯ ಅಪಾಯವನ್ನು ಶೇ.21ರಷ್ಟು,ಸಿಟ್ಟನ್ನು ಶೇ.24ರಷ್ಟು,ಉದ್ವೇಗವನ್ನು ಶೇ.25ರಷ್ಟು,ನಿರಾಶಾವಾದವನ್ನು ಶೇ.24ರಷ್ಟು,ಸ್ವ-ಹಾನಿ ಮಾಡಿಕೊಳ್ಳುವ ಬಯಕೆಯನ್ನು ಶೇ.26ರಷ್ಟು,ಕಾರ್ಯಾತ್ಮಕ ಸಮಸ್ಯೆಗಳನ್ನು ಶೇ.28ರಷ್ಟು ಮತ್ತು ಆತ್ಮಹತ್ಯೆ ಯೋಚನೆಗಳನ್ನು ಶೇ.28ರಷ್ಟು ಹೆಚ್ಚಿಸುತ್ತದೆ ಎಂದು ವರದಿಯು ವಿವರಿಸಿದೆ.

ಕಾಲೇಜು ವಿದ್ಯಾರ್ಥಿಗಳಲ್ಲಿ ನಿದ್ರೆಯ ಕೊರತೆಯು ಹಲವಾರು ಮಾನಸಿಕ ಸಮಸ್ಯೆಗಳ ಲಕ್ಷಣಗಳೊಂದಿಗೆ ಇಷ್ಟೊಂದು ಬಲವಾದ ನಂಟು ಹೊಂದಿರುವುದು ನಿಜಕ್ಕೂ ಅಚ್ಚರಿಯನ್ನುಂಟು ಮಾಡಿದೆ ಎಂದು ವರದಿಯ ಮುಖ್ಯಲೇಖಕಿಯಾಗಿರುವ ಅಮೆರಿಕದ ಅರಿರೆನಾ ವಿವಿಯ ಥಿಯಾ ರಾಮ್ಸೆ ಹೇಳಿದ್ದಾರೆ.

ಹೆಚ್ಚಿನ ಕಾಲೇಜು ವಿದ್ಯಾರ್ಥಿಗಳು ಸೂಕ್ತ ಆರೋಗ್ಯ ಮತ್ತು ಕ್ರಿಯಾತ್ಮಕ ಬದುಕಿಗೆ ಅಗತ್ಯವಾದಷ್ಟು ನಿದ್ರೆಯನ್ನು ಮಾಡುವುದಿಲ್ಲ,ಹೀಗಾಗಿ ನಿದ್ರೆಯ ಕೊರತೆಯು ಮಾನಸಿಕ ಆರೋಗ್ಯದೊಂದಿಗೆ ಬಲವಾದ ನಂಟು ಹೊಂದಿದೆ ಎನ್ನುವುದು ಮಹತ್ವವನ್ನು ಪಡೆದುಕೊಂಡಿದೆ ಎಂದು ಸಂಶೋಧಕರ ತಂಡದ ಸದಸ್ಯ ಮೈಕೆಲ್ ಗ್ರಾಂಡ್ನರ್ ಹೇಳಿದ್ದಾರೆ.

ನಿದ್ರಾ ಕೊರತೆಯ ಇತರ ಆರೋಗ್ಯ ಸಮಸ್ಯೆಗಳು

ನಿದ್ರೆಯ ಕೊರತೆಯು ಹಲವಾರು ಮಾನಸಿಕ ಅಸ್ವಸ್ಥತೆಗಳಿಗೆ ಕಾರಣವಾಗುವುದಲ್ಲದೆ, ಹಸಿವಿನ ಹಾರ್ಮೋನ್‌ನ್ನು ಪ್ರಚೋದಿಸುವ ಮೂಲಕ ದೇಹತೂಕವನ್ನು ಹೆಚ್ಚಿಸುತ್ತದೆ. ದಿನವಿಡೀ ಬಳಲಿಕೆ ಮತ್ತು ಆಯಾಸವನ್ನುಂಟು ಮಾಡುತ್ತದೆ. ಅದು ಹೃದಯನಾಳೀಯ ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ ಮತ್ತು ಚರ್ಮದ ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News