ಕಂಗನಾಗೆ 'ವೈ ಪ್ಲಸ್ ಭದ್ರತೆ ಒದಗಿಸಿದ ಕೇಂದ್ರ ಸರಕಾರ

Update: 2020-09-07 18:35 GMT

ಹೊಸದಿಲ್ಲಿ/ಮುಂಬೈ, ಸೆ. 7: ಮಹತ್ವದ ಬೆಳವಣಿಗೆಯೊಂದರಲ್ಲಿ ಬಾಲಿವುಡ್ ನಟಿ ಕಂಗನಾ ರಾಣವತ್‌ಗೆ ಗೃಹ ಸಚಿವಾಲಯ ಸೋಮವಾರ ವೈ+ ಭದ್ರತೆ ನೀಡಿದೆ. ಮಹಾರಾಷ್ಟ್ರದಲ್ಲಿ ಮುಂಬೈ ಪೊಲೀಸ್ ಹಾಗೂ ಶಿವಸೇನೆ ನೇತೃತ್ವದ ಸರಕಾರದ ಕುರಿತ ಕಂಗನಾ ರಾಣಾವತ್ ಇತ್ತೀಚೆಗೆ ನೀಡಿದ ಹೇಳಿಕೆ ಬಳಿಕ ಮಹಾರಾಷ್ಟ್ರ ಸರಕಾರ ಹಾಗೂ ಅವರ ನಡುವೆ ಭಿನ್ನಾಭಿಪ್ರಾಯ ತಲೆದೋರಿದೆ.

ಕಂಗನಾ ರಾಣವತ್ ಅವರಿಗೆ 7 ಮಂದಿ ಪೊಲೀಸರು ಭದ್ರತೆ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕೇಂದ್ರ ಗೃಹ ಸಚಿವಾಲಯದ ನಿರ್ಧಾರದ ಕುರಿತು ಪ್ರತಿಕ್ರಿಯಿಸಿರುವ ಕಂಗನಾ, ಕೇಂದ್ರ ಸಚಿವ ಅಮಿತ್ ಶಾ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

  ರಾಷ್ಟ್ರೀಯವಾದಿಯ ಧ್ವನಿ ನಿಗ್ರಹಿಸಲು ಯಾವುದೇ ಫ್ಯಾಶಿಸ್ಟ್ ಶಕ್ತಿಗೆ ಸಾಧ್ಯವಾಗದು ಎಂಬುದಕ್ಕೆ ಇದು ಸಾಕ್ಷಿ. ಪರಿಸ್ಥಿತಿ ಅವಲೋಕಿಸಿ ಮುಂಬೈಗೆ ಭೇಟಿ ನೀಡಿ ಎಂದು ಹೇಳಿದ ಅಮಿತ್ ಶಾ ಅವರಿಗೆ ನಾನು ಅಭಾರಿಯಾಗಿದ್ದೇನೆ. ಅವರು ಈ ದೇಶದ ಪುತ್ರಿಯ ಮಾತುಗಳಿಗೆ ಬೆಲೆ ನೀಡಿದ್ದಾರೆ. ‘ಜೈ ಹಿಂದ್’ ಎಂದು ಕಂಗನಾ ರಾಣಾವತ್ ಟ್ವೀಟ್ ಮಾಡಿದ್ದಾರೆ.

 ಮುಂಬೈಯನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿ ಕಂಗನಾ ರಾಣವತ್ ವಿವಾದ ಹುಟ್ಟು ಹಾಕಿದ್ದಾರೆ. ಅವರ ಹೇಳಿಕೆ ಶಿವಸೇನೆ ನಾಯಕರಲ್ಲಿ ಅಸಮಾಧಾನ ಉಂಟು ಮಾಡಿದೆ. ಮುಂಬೈಗೆ ಬರುವ ಬಗ್ಗೆ ಶಿವಸೇನೆ ಸಂಸದ ಎಚ್ಚರಿಕೆ ನೀಡಿದ ಬಳಿಕ ಕಂಗನಾ ರಾಣಾವತ್ ಈ ಹೇಳಿಕೆ ನೀಡಿದ್ದರು.

ಕಂಗನಾ ರಾಣವತ್ ರವಿವಾರ ರಾವತ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು ಹಾಗೂ ನಾನು ಮಹಾರಾಷ್ಟ್ರದವಳು ಅಲ್ಲ. ನನ್ನಿಂದ ಕ್ಷಮೆ ಕೇಳುವ ಯಾವುದೇ ಹಕ್ಕು ಅವರಿಗೆ ಇಲ್ಲ ಎಂದು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News