'ಮಾದಕ'ದ ವಿರುದ್ಧ ಬೆಂಗಳೂರು ಪೊಲೀಸರ ಕಾರ್ಯಾಚರಣೆ: 28 ಮಂದಿ ಸೆರೆ, 1.57 ಕೋಟಿ ರೂ. ಮೌಲ್ಯದ ವಸ್ತು ಜಪ್ತಿ

Update: 2020-09-07 15:56 GMT

ಬೆಂಗಳೂರು, ಸೆ.7: ಸ್ಯಾಂಡಲ್‍ವುಡ್ ಡ್ರಗ್ಸ್ ಪ್ರಕರಣ ಬೆನ್ನಲ್ಲೇ ಮಾದಕ ವಸ್ತುಗಳ ಜಾಲದ ಮೇಲೆ ತೀವ್ರ ನಿಗಾ ಇಟ್ಟಿರುವ ನಗರದ ಪೊಲೀಸರು, 28 ಮಂದಿಯನ್ನು ಬಂಧಿಸಿ 1.57 ಕೋಟಿ ರೂ. ಮೌಲ್ಯದ ವಿವಿಧ ಬಗೆಯ ಮಾದಕ ವಸ್ತುಗಳನ್ನು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಸೋಮವಾರ ಈ ಕುರಿತು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ಇಲ್ಲಿನ ಪೂರ್ವ ವಿಭಾಗದ ಪೊಲೀಸರು 11 ಮಂದಿ ಆರೋಪಿಯನ್ನು ಬಂಧಿಸಿ 90 ಲಕ್ಷ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡರೆ, ಆಗ್ನೇಯ ವಿಭಾಗದ ಪೊಲೀಸರು 17 ಮಂದಿ ಆರೋಪಿಗಳನ್ನು ಬಂಧಿಸಿ 67 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳನ್ನು ಜಪ್ತಿ ಮಾಡಿದ್ದು, ಇದರ ಒಟ್ಟು ತೂಕ 250 ಕೆಜಿಯಷ್ಟಿದೆ ಎಂದು ವಿವರಿಸಿದರು.

ಇಲ್ಲಿನ ಹಲಸೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಬ್ಬರು ಡ್ರಗ್ಸ್ ಪೆಡ್ಲರ್ ಗಳನ್ನು ಬಂಧಿಸಿ ಎಂಡಿಎಂಎ ಟ್ಯಾಬ್ಲೆಟ್‍ಗಳು, ಬ್ರೌನ್‍ಶುಗರ್, ವಿಡ್ ಆಯಿಲ್ ಅನ್ನು ವಶಪಡಿಸಿಕೊಂಡಿದ್ದಾರೆ. ಬಾಣಸವಾಡಿ, ರಾಮಮೂರ್ತಿನಗರ, ಡಿ.ಜೆ.ಹಳ್ಳಿ ಠಾಣೆಗಳಲ್ಲಿ ಗಾಂಜಾ ಮಾರಾಟಗಾರರನ್ನು ಬಂಧಿಸಿ 48 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ.

ಇನ್ನು, ಬಿಸಿಎ ಪದವೀಧರನಾದ ಕೇವಲ್ ಎಂ.ಲೋಹಿತ್ ಎಂಬ ಆರೋಪಿ ಬೆಂಗಳೂರು, ಗೋವಾಗಳಲ್ಲಿನ ರೇವ್ ಪಾರ್ಟಿಗಳಲ್ಲಿ ಭಾಗವಹಿಸಿ ಮಾದಕ ವ್ಯಸನಿಯಾಗಿದ್ದ. ವಿದೇಶಿ ಡ್ರಗ್ಸ್ ಪೆಡ್ಲರ್ ಗಳ ಸಂಪರ್ಕ ಹೊಂದಿದ್ದ. ಅಷ್ಟೇ ಅಲ್ಲದೆ, ಈತ ಡಾರ್ಕ್ ವೆಬ್ ಮತ್ತು ಬಿಟ್‍ಕಾಯಿನ್ ಬಳಸಿ ವ್ಯವಹಾರ ಮಾಡುತ್ತಿದ್ದ ಎನ್ನುವ ಮಾಹಿತಿ ಬೆಳಕಿಗೆ ಬಂದಿದೆ ಎಂದು ಆಯುಕ್ತರು ತಿಳಿಸಿದರು.

ಕಾರ್ಯಾರಚರಣೆ ನಡೆಸಿ ಆರೋಪಿಯನ್ನು ಬಂಧಿಸುವ ಸಿಬ್ಬಂದಿಗೆ 50 ಸಾವಿರ ಬಹುಮಾನ ಘೋಷಿಸಿ ಹಾಗೂ ಮೆಚ್ಚುಗೆ ಪತ್ರ ನೀಡಲಾಗುವುದು ಎಂದು ಕಮಲ್ ಪಂತ್ ತಿಳಿಸಿದರು.

ವಿದೇಶಿ ಸೇರಿ ಹಲವರ ಬಂಧನ

ಡ್ರಗ್ಸ್ ಮಾರಾಟ ದಂಧೆಯಲ್ಲಿ ನಿರತ ಆರೋಪದಲ್ಲಿ ನೈಜೀರಿಯನ್ ಪ್ರಜೆಯೊಬ್ಬನ ಸಹಿತ ಇಬ್ಬರನ್ನು ಹನುಮಂತನಗರ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ನಗರದ ಹೆಣ್ಣೂರಿನಲ್ಲಿ ವಾಸವಿದ್ದ ನೈಜೀರಿಯಾ ನಿವಾಸಿ ಜಾನ್ ಓಗೊಲೋಗೊ(35) ಹಾಗೂ ಹಲಸೂರು ನಿವಾಸಿ ಸ್ಯಾಮ್‍ಸನ್(24) ಬಂಧಿತ ಆರೋಪಿಗಳಾಗಿದ್ದು, ಬಂಧಿತರಿಂದ ಎರಡೂವರೆ ಕೆಜಿ ಗಾಂಜಾ, 20 ಗ್ರಾಂ ಎಂಡಿಎಂಎ ಡ್ರಗ್ಸ್ ಹಲವು ರೀತಿಯ ಮಾದಕ ವಸ್ತುಗಳನ್ನು ಜಪ್ತಿ ಮಾಡಲಾಗಿದೆ

ಆರೋಪಿಗಳು ಹನುಮಂತನಗರ ಠಾಣಾ ವ್ಯಾಪ್ತಿಯ ಅಶೋಕ ನಗರದ ಬಿಎಂಎಸ್ ಇಂಜಿನಿಯರಿಂಗ್ ಹಾಸ್ಟೆಲ್ ಬಳಿ ದ್ವಿಚಕ್ರ ವಾಹನದಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದಾರೆ ಎಂಬ ಮಾಹಿತಿಯನ್ನು ಆಧರಿಸಿ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News