ಸೆ.21ರಿಂದ ವಿಧಾನಮಂಡಲ ಅಧಿವೇಶನ: ಹಿರಿಯ ಸಚಿವರೊಂದಿಗೆ ಮುಖ್ಯಮಂತ್ರಿ ಸಮಾಲೋಚನೆ

Update: 2020-09-07 16:23 GMT

ಬೆಂಗಳೂರು, ಸೆ.7: ರಾಜ್ಯ ಸರಕಾರವು ಸೆ.21ರಿಂದ 30ರವರೆಗೆ ನಡೆಸಲು ನಿರ್ಧರಿಸಿರುವ ಮಳೆಗಾಲದ ವಿಧಾನಮಂಡಲದ ಅಧಿವೇಶನದಲ್ಲಿ ಪ್ರತಿಪಕ್ಷಗಳನ್ನು ಎದುರಿಸುವ ಸಂಬಂಧ ಯಾವ ರೀತಿಯ ಯೋಜನೆಗಳನ್ನು ರೂಪಿಸಬೇಕೆಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ತಮ್ಮ ಸಂಪುಟದ ಹಿರಿಯ ಸಚಿವರೊಂದಿಗೆ ಗೃಹ ಕಚೇರಿ ಕೃಷ್ಣಾದಲ್ಲಿ ಸಮಾಲೋಚನಾ ಸಭೆ ನಡೆಸಿದ್ದಾರೆ.

ಕೋವಿಡ್ ಲಾಕ್‍ಡೌನ್ ಹಿನ್ನೆಲೆಯಲ್ಲಿ ಮಾರ್ಚ್ ನಲ್ಲಿ ನಡೆದ ಬಜೆಟ್ ಅಧಿವೇಶನವನ್ನು ಮೊಟಕುಗೊಳಿಸಲಾಗಿತ್ತು. ಅಲ್ಲದೆ, ಜೂನ್ ತಿಂಗಳಲ್ಲಿ ನಡೆಸಬೇಕಿದ್ದ ಮಳೆಗಾಲದ ಅಧಿವೇಶನವನ್ನು ಇದೀಗ ಸೆಪ್ಟಂಬರ್ ನಲ್ಲಿ ನಡೆಸಲಾಗುತ್ತಿದೆ. ಈ ಅವಧಿಯಲ್ಲಿ ರಾಜ್ಯ ಸರಕಾರವು ಮಹತ್ವದ ಎಪಿಎಂಸಿ ಕಾಯ್ದೆ, ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಸೇರಿದಂತೆ ಇನ್ನಿತರ ಕಾಯ್ದೆಗಳನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಿತ್ತು.

ಎಪಿಎಂಸಿ ಕಾಯ್ದೆ, ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ಹಾಗೂ ಕೋವಿಡ್ ನಿಯಂತ್ರಣ, ಅತಿವೃಷ್ಟಿ ನಿರ್ವಹಣೆ, ಅಭಿವೃದ್ಧಿ ಕಾರ್ಯಗಳ ಕುಂಠಿತ, ಜಿಎಸ್‍ಟಿ ಪರಿಹಾರ ಪಡೆಯುವಲ್ಲಿ ವಿಳಂಬ ಸೇರಿದಂತೆ ಇನ್ನಿತರ ಪ್ರಮುಖ ವಿಚಾರಗಳನ್ನು ಮುಂದಿಟ್ಟುಕೊಂಡು ಸರಕಾರದ ವಿರುದ್ಧ ಸದನದಲ್ಲಿ ಮುಗಿಬೀಳಲು ವಿರೋಧ ಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ಈಗಾಗಲೆ ಸಿದ್ಧತೆಗಳನ್ನು ಆರಂಭಿಸಿವೆ.

ಜೊತೆಗೆ, ಡಿ.ಜೆ.ಹಳ್ಳಿಯಲ್ಲಿ ನಡೆದ ಗಲಭೆ ಹಾಗೂ ಡ್ರಗ್ಸ್ ಮಾಫಿಯಾಗೆ ಸಂಬಂಧಿಸಿದಂತೆಯೂ ಸದನದಲ್ಲಿ ಗಂಭೀರವಾದ ಚರ್ಚೆ ನಡೆಯಲಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಅಧಿವೇಶನದಲ್ಲಿ ಪ್ರತಿಪಕ್ಷಗಳನ್ನು ಸಮರ್ಥವಾಗಿ ಎದುರಿಸುವ ಸಂಬಂಧ ಸಿದ್ಧತೆಗಳನ್ನು ಮಾಡಿಕೊಳ್ಳುವುದು ಹಾಗೂ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷಗಳಿಗೆ ಅವಕಾಶವಿಲ್ಲದಂತೆ ನೋಡಿಕೊಳ್ಳುವ ಸಂಬಂಧ ಮುಖ್ಯಮಂತ್ರಿ, ಹಿರಿಯ ಸಚಿವರಿಗೆ ಜವಾಬ್ದಾರಿಗಳನ್ನು ವಹಿಸಿದ್ದಾರೆ ಎಂದು ತಿಳಿದು ಬಂದಿದೆ.

ಪ್ರಮುಖವಾಗಿ ಎಪಿಎಂಸಿ ಕಾಯ್ದೆ, ಭೂ ಸುಧಾರಣಾ ಕಾಯ್ದೆಗಳು ಸದನದಲ್ಲಿ ಅಂಗೀಕಾರಗೊಳ್ಳುವಂತೆ ತಂತ್ರ ರೂಪಿಸುವುದು. ಅಲ್ಲದೆ,ಕೋವಿಡ್ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಯಾವುದೆ ಅವ್ಯವಹಾರ ಆಗಿಲ್ಲ ಎಂಬುದಕ್ಕೆ ಸಂಬಂಧಿಸಿದಂತೆ ವಿಪಕ್ಷಗಳಿಗೆ ಅಂಕಿ ಅಂಶಗಳ ಸಮೇತ ಉತ್ತರ ನೀಡಲು ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಮುಖ್ಯಮಂತ್ರಿ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

ಸಭೆಯಲ್ಲಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಕಂದಾಯ ಸಚಿವ ಆರ್.ಅಶೋಕ್, ವಸತಿ ಸಚಿವ ವಿ.ಸೋಮಣ್ಣ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಸೇರಿದಂತೆ ಇನ್ನಿತರ ಪ್ರಮುಖ ಸಚಿವರು ಪಾಲ್ಗೊಂಡ್ದಿದ್ದರು ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News