ವಿದ್ಯಾಗಮ: ಕೊರೋನದ ಬಗ್ಗೆಯೂ ಕಾಳಜಿ ಇರಲಿ

Update: 2020-09-07 17:14 GMT

ಮಾನ್ಯರೇ,

ವಾರಕ್ಕೆ ಒಮ್ಮೆ 2-3 ಗಂಟೆಗಳ ಶೈಕ್ಷಣಿಕ ಚಟುವಟಿಕೆ ಬಸ್ ನಿಲ್ದಾಣ, ಪಂಚಾಯತ್ ಕಟ್ಟೆ, ಧಾರ್ಮಿಕ ಕೇಂದ್ರಗಳಂತಹ ನಿಗದಿತ ತಾಣಗಳಲ್ಲಿ, ಸನಿಹದ ಸುಮಾರು 50 ಮಕ್ಕಳನ್ನು ಸೇರಿಸಿ ತರಗತಿ ನಡೆಸುವ ಚಿಂತನೆ ಶಾಲೆಗಳಿಂದ ನಡೆದಿದೆ. ಐವತ್ತು ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕರೂ ಇಲ್ಲದಿರುವ ಇಂದಿನ (ಅ)ವ್ಯವಸ್ಥೆಯಲ್ಲಿ ‘ವಿದ್ಯಾಗಮ’ ಯಥಾವತ್ ಅನುಷ್ಠಾನ ಅನುಮಾನ. ಕೊರೋನ ಸಮುದಾಯದಲ್ಲಿ ಸಂಕ್ರಮಣಗೊಳ್ಳುತ್ತಿರುವ ಆತಂಕದ ಈ ದಿನಗಳಲ್ಲಿ ಎಷ್ಟು ಮುಂಜಾಗ್ರತೆ ಇದ್ದರೂ ಸಾಲದು. ಜವಾಬ್ದಾರಿಯುತ ಸಚಿವರು, ಹಿಂಬಾಲಕ ಅಧಿಕಾರಿಗಳೇ ಮಾಸ್ಕ್ ಧಾರಣೆ, ಸುರಕ್ಷಿತ ಅಂತರಗಳು ಮೊದಲಾದ ಸರಕಾರಿ ಕೊರೋನ ಮಾನದಂಡಗಳನ್ನು ಸಾರ್ವಜನಿಕವಾಗಿ ಗಾಳಿಗೆ ತೂರುತ್ತಿರುವಾಗ ಜನ ಸಾಮಾನ್ಯರಿಂದ ಪಾಲನೆ ಮರೀಚಿಕೆಯೇ. ಶಾಲೆಗಳಲ್ಲಿ ಕಾಡುವ ಕೊರೋನ ಆತಂಕ ಬಸ್ ತಂಗುದಾಣ, ಧಾರ್ಮಿಕ ಕೇಂದ್ರ, ಪಂಚಾಯತ್ ಕಟ್ಟೆಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ಇಲ್ಲದಿರುವುದು ಹಾಸ್ಯಾಸ್ಪದ. ಹಳ್ಳಿಯ ಪ್ರತಿ ಮನೆಯಲ್ಲೂ ಮಕ್ಕಳ ಜೊತೆ ವಯೋವೃದ್ಧರು ಹೆಚ್ಚಾಗಿ ಬೆರೆಯುತ್ತಿರುವುದು ಹಿರಿಯರ ಜೀವಕ್ಕೆ ಮುಳುವಾಗುವಂತಹ ಸಾಧ್ಯತೆಯೂ ಇದೆ. ಈ ರೀತಿಯ ಪ್ರಯತ್ನ ಅಪಾಯಕಾರಿ.

ಆದ್ದರಿಂದ ಸರಕಾರ ಸದ್ಯ ನಡೆಸುತ್ತಿರುವ ದೂರದರ್ಶನ ಆಧಾರಿತ ವಿದ್ಯಾಗಮ ಸಂವೇದ ಕಲಿಕಾ ಕಾರ್ಯಕ್ರಮದೊಂದಿಗೆ ಆಯಾ ಶಾಲೆಗಳ ಅಧ್ಯಾಪಕರ ವಾಟ್ಸ್ ಆ್ಯಪ್/ಯೂಟ್ಯೂಬ್ ಚಾನೆಲ್‌ಗಳ ಮೂಲಕ ಪರಸ್ಪರ ಸಂವಹನ ನಡೆಸಿ ಮಕ್ಕಳ ಕಲಿಕಾ ಪ್ರಕ್ರಿಯೆ ಸಾಂಗವಾಗಿಸಬಹುದು. ನಗರ ಕೇಂದ್ರಿತ ಧನದಾಹಿ ಖಾಸಗಿ ಶಾಲೆಗಳ ‘ಗುಣಮಟ್ಟ’ಕ್ಕೆ ಏರುವ ತುಡಿತ ಇರುವ ಸರಕಾರಿ ಶಿಕ್ಷಕರ ಕೀಳರಿಮೆಯೂ ದೂರವಾದೀತು. ಮೊದಲೇ ಗುರುತಿಸಿದ ತಂತ್ರಜ್ಞಾನ ರಹಿತ ವಿದ್ಯಾರ್ಥಿಗಳಿಗೆ ‘ಮಾತ್ರ’ ಅವರ ಮನೆಯ ಸಮೀಪದ ಅಂಗನವಾಡಿಯ ಪೂರಕ ಸಂಪನ್ಮೂಲಗಳ ಸಮಯೋಚಿತ ಸದ್ಬಳಕೆ ಮಾಡುವುದರ ಮೂಲಕ ಮಾರ್ಪಾಡಿತ ವಿದ್ಯಾಗಮ ಯೋಜನೆಯ ಅನುಷ್ಠಾನ ಸಾಮಾಜಿಕ ಆರೋಗ್ಯಕ್ಕೆ ಸಹಕಾರಿ. ಈ ರೀತಿಯ ಕಲಿಕಾ ಜಾಗೃತಿ ನಮ್ಮ ದೇಶ ಮಾತ್ರವಲ್ಲದೆ ಕೋವಿಡ್ ಬಾಧಿತ ಜಗತ್ತಿಗೂ ಮಾದರಿಯಾದೀತು. ಶಿಕ್ಷಕರು ಕೆಲಸ ಮಾಡದೇ ಸರಕಾರಿ ಸಂಬಳ ಪಡೆಯುತ್ತಿದ್ದಾರೆ ಎಂಬ ಕಲ್ಪನೆಯ ನಿವಾರಣೆಯನ್ನು ಆರೋಗ್ಯ - ಕಂದಾಯ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ಕೋವಿಡ್ ಕಾರ್ಯಪಡೆಯಲ್ಲಿ ಶಿಕ್ಷಣ ಇಲಾಖೆಯ ಮಾನವ ಸಂಪನ್ಮೂಲದ ಸದ್ಬಳಕೆ ಮಾಡಬಹುದು.

Writer - -ಡಾ. ರಾಮಚಂದ್ರ ಕೆ.,ಕನ್ಯಾನ

contributor

Editor - -ಡಾ. ರಾಮಚಂದ್ರ ಕೆ.,ಕನ್ಯಾನ

contributor

Similar News