×
Ad

ಡಾ.ಶಿವಕುಮಾರ ಸ್ವಾಮೀಜಿ ಪರೀಕ್ಷಾ ಅಧ್ಯಯನ ಕೇಂದ್ರಕ್ಕೆ ಸಿಎಂ ಚಾಲನೆ

Update: 2020-09-07 22:57 IST

ಬೆಂಗಳೂರು, ಸೆ.7: ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಮೂಡಲಪಾಳ್ಯ ವಾರ್ಡ್ ನಲ್ಲಿ ಬಿಬಿಎಂಪಿ ವತಿಯಿಂದ ನಿರ್ಮಾಣ ಮಾಡಿದ ಡಾ. ಶಿವಕುಮಾರ ಸ್ವಾಮೀಜಿ ಸ್ಪರ್ಧಾತ್ಮಕ ಪರೀಕ್ಷೆಯ ಅಧ್ಯಯನ ಕೇಂದ್ರ, ಇ-ಲೈಬ್ರೆರಿ ಹಾಗೂ ಶಿವಕುಮಾರ ಸ್ವಾಮೀಜಿಯ ಕಂಚಿನ ಪುತ್ಥಳಿಯನ್ನು ಸಿಎಂ ಯಡಿಯೂರಪ್ಪ ಉದ್ಘಾಟಿಸಿದರು.

ಈ ಕಟ್ಟಡದಲ್ಲಿ ವ್ಯಾಯಾಮ ಶಾಲೆ, ಸಭಾಂಗಣವೂ ನಿರ್ಮಾಣವಾಗಿದೆ. ಒಟ್ಟು 15 ಕೋಟಿ ರೂ. ವೆಚ್ಚದಲ್ಲಿ ಜ್ಞಾನಸೌಧ ನಿರ್ಮಾಣ ಮಾಡಲಾಗಿದೆ. ಇದೇ ವೇಳೆ ತಲಕಾವೇರಿ ಅಭಿವೃದ್ಧಿಗಾಗಿ ಬಿಬಿಎಂಪಿ ವತಿಯಿಂದ 1 ಕೋಟಿ ರೂಪಾಯಿ ಚೆಕ್ ಹಸ್ತಾಂತರಿಸಲಾಯಿತು.

ಉದ್ಘಾಟನೆ ಬಳಿಕ ಮಾತನಾಡಿದ ಸಿಎಂ, ಒಂದು ರೂಪಾಯಿಯನ್ನು ವ್ಯರ್ಥ ಮಾಡದೆ ನಗರೋತ್ಥಾನ ಯೋಜನೆಯಡಿ ಬಿಬಿಎಂಪಿಯು ಈ ಕಟ್ಟಡ ನಿರ್ಮಾಣ ಮಾಡಿದೆ. ವಿದ್ಯಾರ್ಥಿಗಳು ಇದನ್ನು ಬಳಸಿಕೊಳ್ಳಬೇಕು. ಪ್ರತಿಭಾವಂತ ವಿದ್ಯಾರ್ಥಿಗಳು ಸರಕಾರಿ ವ್ಯವಸ್ಥೆಯಲ್ಲಿ ಸೇವೆ ಸಲ್ಲಿಸಲು ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧರಾಗಲು ಇದೊಂದು ಒಳ್ಳೆಯ ಅವಕಾಶವಾಗಿದೆ. ಇನ್ನೆರಡು ತಿಂಗಳಲ್ಲಿ ಬೆಂಗಳೂರಿನ ಚಿತ್ರಣ ಬದಲಿಸುವ ಹಲವಾರು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ದೊರೆಯಲಿದೆ ಎಂದರು.

ತುಮಕೂರು ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ಮುಖ್ಯಮಂತ್ರಿಗಳ ಖಜಾನೆ ಖಾಲಿಯಾಗಿರ್ಬಹುದು. ಆದರೆ ನೀರಿನ ಖಜಾನೆ ತುಂಬಿದೆ. ರೈತರ ಬಾಳು ಹಸನು ಮಾಡಲು ಕಾರ್ಯಕ್ರಮ ರೂಪಿಸಿದ್ದಾರೆ ಎಂದು ಹೇಳಿದರು.

ವಸತಿ ಸಚಿವ ವಿ.ಸೋಮಣ್ಣ ಮಾತನಾಡಿ, ಸಂಕಷ್ಟದ ಸಂದರ್ಭದಲ್ಲೂ ರಾಜ್ಯದ ರಕ್ಷಣೆ ಮಾಡಬಹುದು ಅನ್ನುವುದಕ್ಕೆ ಯಡಿಯೂರಪ್ಪ ಉದಾಹರಣೆ. ಗೋವಿಂದರಾಜನಗರಕ್ಕೆ ಒಂದು ವರ್ಷ ಎರಡು ತಿಂಗಳಲ್ಲಿ ಹತ್ತಾರು ಕೋಟಿ ರೂಪಾಯಿ ಅನುದಾನದ ಮೂಲಕ ವಿವಿಧ ಅಭಿವೃದ್ಧಿ ಕೆಲಸ ಮಾಡಲಾಗಿದೆ. ಎಲ್ಲರಿಗೂ ಸೂರು ನೀಡುವ ಕೆಲಸದಲ್ಲಿ ನಾವು ಭಾಗಿಯಾಗಿದ್ದೇವೆ. ಎಲ್ಲರಿಗೂ ಈ ಕಟ್ಟಡ ಜ್ಞಾನಸೌಧ ಆಗಲಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News