ಕೇಶವಾನಂದ ಭಾರತಿ ಪ್ರಕರಣದಲ್ಲಿ ಸುಪ್ರೀಂ ತೀರ್ಪು ಪ್ರಜಾತಂತ್ರಕ್ಕೆ ಮಾರಕ: ಪ್ರೊ.ರವಿವರ್ಮ ಕುಮಾರ್

Update: 2020-09-07 17:47 GMT

ಬೆಂಗಳೂರು, ಸೆ.7: ಕೇಶವಾನಂದ ಭಾರತಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪು ಪ್ರಜಾತಂತ್ರಕ್ಕೆ ಮಾರಕವಾಗಿದೆ. ಆ ಮೊಕದ್ದಮೆಯನ್ನು ಕೂಡಲೇ ಪುನರ್ ವಿಮರ್ಶಿಸಬೇಕು. ಕೇಶವಾನಂದ ಭಾರತಿ ಮೊಕದ್ದಮೆಯ ತೀರ್ಪನ್ನು ಕಸದ ಬುಟ್ಟಿಗೆ ಹಾಕುವುದೇ ಅವರಿಗೆ ಸಲ್ಲಿಸುವ ಅತ್ಯುತ್ತಮ ಶ್ರದ್ಧಾಂಜಲಿ ಎಂದು ಹಿರಿಯ ನ್ಯಾಯವಾದಿ, ಸಂವಿಧಾನ ತಜ್ಞ ಪ್ರೊ. ರವಿವರ್ಮ ಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ.

ವಾರ್ತಾಭಾರತಿಯೊಂದಿಗೆ ಮಾತನಾಡಿದ ಅವರು, ಕೇಶವಾನಂದ ಭಾರತಿ ಮೊಕದ್ದಮೆ ತೀರ್ಪು ಪ್ರಜಾತಂತ್ರವನ್ನು ಎತ್ತಿಹಿಡಿದಿಲ್ಲ. ಬದಲಾಗಿ ಪ್ರಜಾತಂತ್ರಕ್ಕೆ ಇದು ಮಾರಕವಾಗಿದೆ. ರಾಜ್ಯ ಶಕ್ತಿಯ ವಿಂಗಡನೆಯನ್ನು ಬುಡಮೇಲು ಮಾಡಿ, ಶಾಸಕಾಂಗವನ್ನು ಕೆಳಕ್ಕೆ ಹಾಕಿದೆ. ನ್ಯಾಯಾಂಗ ಹೇಳಿದ್ದೇ ಸಂವಿಧಾನ ಎನ್ನುವಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕೇಶವಾನಂದ ಭಾರತಿ ಮೊಕದ್ದಮೆಯ ತೀರ್ಪನ್ನು ನಾವು ಅವಲೋಕಿಸುವಾಗ ಈ ತೀರ್ಪಿನಿಂದಾಗಿ ಪ್ರಜಾತಂತ್ರಕ್ಕೆ ಮಾರಕವಾಗಿರುವ ಅಂಶಗಳನ್ನು ನಾವು ಗಮನಿಸಬೇಕಾಗಿದೆ. ಶಾಸಕಾಂಗವನ್ನು ತನ್ನ ಕಪಿಮುಷ್ಟಿಯಲ್ಲಿಟ್ಟುಕೊಂಡು ತಾನು ಹೇಳಿದ ನ್ಯಾಯಾಂಗವನ್ನು ರಚಿಸುವ ಅಧಿಕಾರವನ್ನು ಇಟ್ಟುಕೊಂಡಿದ್ದು, ಪ್ರಜಾಪ್ರಭುತ್ವಕ್ಕೆ ಅತ್ಯಂತ ಮಾರಕವಾದ ವಿಚಾರವಾಗಿದೆ ಎಂದು ಹೇಳಿದರು.

ಭಾರತ ಸುಪ್ರೀಂಕೋರ್ಟ್ ಹಾಗೂ ಇತರ ಹೈಕೋರ್ಟ್ ‌ಗಳಲ್ಲಾಗಲಿ ನ್ಯಾಯಮೂರ್ತಿಗಳ ನೇಮಕದ ಬಗ್ಗೆ ಪ್ರಶ್ನೆ ಮಾಡುವ ಪ್ರಕ್ರಿಯೆಯೇ ಇಲ್ಲದಂತಾಗಿದೆ. ಉತ್ತರದಾಯಿತ್ವವೇ ಇಲ್ಲದಂತಾಗಿದೆ. ಮಹಿಳೆಯರಿಗೆ ಪ್ರಾತಿನಿಧ್ಯ ಇಲ್ಲ. ಪರಿಶಿಷ್ಟ ಜಾತಿಯವರಿಗೆ ಸೂಕ್ತ ಪ್ರಾತಿನಿಧ್ಯ ಇಲ್ಲ. ಪರಿಶಿಷ್ಟ ಪಂಗಡದ ಒಬ್ಬರೂ ಸುಪ್ರೀಂಕೋರ್ಟ್‌ನಲ್ಲಿಲ್ಲ. ಹಿಂದುಳಿದ ವರ್ಗಗಳನ್ನು ಕೇಳುವವರೇ ಇಲ್ಲ ಎನ್ನುವಂತಾಗಿದೆ. ಇವತ್ತು ನ್ಯಾಯಾಂಗ ತನ್ನ ಉತ್ತರದಾಯಿತ್ವವನ್ನು ಕಳೆದುಕೊಂಡು ಸೂತ್ರವಿಲ್ಲದೆ ಗಾಳಿಪಟದಂತೆ ಕೇಶವಾನಂದ ಭಾರತಿ ಮೊಕದ್ದಮೆ ಆಧಾರದ ಮೇಲೆ ತನ್ನ ಸಾರ್ವಭೌಮತ್ವವನ್ನು ಭಾರತದಲ್ಲಿ ಸ್ಥಾಪಿಸಿ ಶಾಸಕಾಂಗ ಮತ್ತು ಕಾರ್ಯಾಂಗವನ್ನು ತನ್ನ ಅಡಿಯಾಳನ್ನಾಗಿ ಮಾಡಿಕೊಂಡಿದೆ. ಇದು ಕೇಶವಾನಂದ ಭಾರತಿ ಮೊಕದ್ದಮೆಯ ಅತ್ಯಂತ ದುರಂತಮಯವಾದ ಬೆಳವಣಿಗೆಯಾಗಿದೆ ಎಂದು ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News