ಬೆಂಗಳೂರು : ಖ್ಯಾತ ನಟ ಸಿದ್ದರಾಜ್ ಕಲ್ಯಾಣ್ಕರ್ ನಿಧನ
ಬೆಂಗಳೂರು : ಖ್ಯಾತ ನಟ ಸಿದ್ದರಾಜ್ ಕಲ್ಯಾಣ್ಕರ್ (60) ಅವರು ಬೆಂಗಳೂರಿನಲ್ಲಿ ಹೃದಯಾಘಾತದಿಂದ ಮಂಗಳವಾರ ನಿಧನರಾದರು.
ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.
ಹುಬ್ಬಳ್ಳಿಯ ನವನಗರದ ನಿವಾಸಿ ಸಿದ್ದರಾಜ್ ಕಲ್ಯಾಣ್ಕರ್ ರಂಗಭೂಮಿ, ಕಿರುತೆರೆ ಹಾಗೂ ಸಿನಿಮಾದಲ್ಲಿ ಅವರು ಸಕ್ರಿಯರಾಗಿದ್ದರು. ಕಿರುತೆರೆ ಮೂಲಕ ಬೆಳ್ಳಿತೆರೆ ಪ್ರವೇಶಿಸಿದ ಅವರು ಕನ್ನಡದಲ್ಲಿ 70ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಮೊದಲ ಸಿನಿಮಾ ‘ಯಾರೇ ನೀ ಅಭಿಮಾನಿ’. ಇದು ತೆರೆ ಕಂಡಿದ್ದು 2000ರಲ್ಲಿ.‘ಹೃದಯ ಹೃದಯ’, ‘ಶ್ರೀಮಂಜುನಾಥ’, ‘ಸೂಪರ್’, ‘ಬುದ್ಧಿವಂತ’ ಅವರು ಅಭಿನಯಿಸಿರುವ ಪ್ರಮುಖ ಚಿತ್ರಗಳಾಗಿವೆ.
1993ರಲ್ಲಿ ‘ಹೊಸಹೆಜ್ಜೆ’ ಧಾರಾವಾಹಿ ಮೂಲಕ ಅವರ ಕಿರುತೆರೆ ಪಯಣ ಆರಂಭಗೊಂಡಿತು. ಸಿನಿಮಾಗಳ ಜೊತೆ ಜೊತೆಗೆಯೇ ಕಿರುತೆರೆಯಲ್ಲೂ ಪ್ರಧಾನ ಪಾತ್ರಗಳಿಗೆ ಬಣ್ಣ ಹಚ್ಚುವ ಮೂಲಕ ಮನೆ ಮಾತಾಗಿದ್ದರು. ಹಿರಿತೆರೆ ಮತ್ತು ಕಿರುತೆರೆಯಲ್ಲಿ ತೊಡಗಿಸಿಕೊಂಡಿದ್ದರೂ ರಂಗಭೂಮಿಯ ನಂಟನ್ನು ಅವರು ಬಿಟ್ಟಿರಲಿಲ್ಲ. ಪ್ರಸ್ತುತ ಅವರು ‘ಪ್ರೇಮಲೋಕ’ ಮತ್ತು ‘ಗಿಣಿರಾಮ’ ಧಾರಾವಾಹಿಯಲ್ಲಿ ನಟಿಸುತ್ತಿದ್ದರು.