×
Ad

ದೇಶದ ಮೊಟ್ಟ ಮೊದಲ ಸಂಯೋಜಿತ ಏರ್ ಆ್ಯಂಬುಲೆನ್ಸ್ ಗೆ ಸಿಎಂ ಯಡಿಯೂರಪ್ಪ ಚಾಲನೆ

Update: 2020-09-08 16:40 IST

ಬೆಂಗಳೂರು, ಸೆ. 8: ಭಾರತದ ಮೊಟ್ಟ ಮೊದಲ ಏಕೈಕ ಏರ್ ಆಂಬುಲೆನ್ಸ್ ಕಂಪೆನಿಯಾದ ಐಸಿಎಟಿಟಿ (ಇಂಟರ್ ನ್ಯಾಷನಲ್ ಕ್ರಿಟಿಕಲ್ ಏರ್ ಟ್ರಾನ್ಸ್ಫರ್ ಟೀಮ್) ಇಂಟಿಗ್ರೇಟೆಡ್ ಏರ್ ಆಂಬುಲೆನ್ಸ್ ಸೇವೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಗಳವಾರ ಚಾಲನೆ ನೀಡಿದರು.

ನಗರದ ಬಳ್ಳಾರಿ ರಸ್ತೆಯಲ್ಲಿರುವ ಜಕ್ಕೂರು ಏರೋಡ್ರಮ್‍ನಲ್ಲಿ ಏರ್ ಆಂಬುಲೆನ್ಸ್ ಸೇವೆಯನ್ನು ಉದ್ಘಾಟಿಸಿ ಮಾತನಾಡಿದ ಯಡಿಯೂರಪ್ಪ, ಏರ್ ಆಂಬುಲೆನ್ಸ್ ಸೇವೆ, ತುರ್ತು ಸಮಯದಲ್ಲಿ ಸಮಯೋಚಿತ ಮತ್ತು ತ್ವರಿತ ವೈದ್ಯಕೀಯ ಆರೈಕೆ ಮತ್ತು ಚಿಕಿತ್ಸೆ ಬಹಳ ಮಹತ್ವಕಾರಿಯಾಗಿದೆ. ಬೆಂಗಳೂರಿನಲ್ಲಿ ಏರ್ ಆಂಬುಲೆನ್ಸ್ ಸ್ಥಾಪಿಸಿರುವುದಕ್ಕೆ ಸಂತೋಷವಾಗಿದೆ ಎಂದು ತಿಳಿಸಿದರು.

ಇದೇ ವೇಳೆ ಮಾತನಾಡಿದ ಐಸಿಎಟಿಟಿ ಸಹಸಂಸ್ಥಾಪಕ ಮತ್ತು ನಿರ್ದೇಶಕಿ ಡಾ.ಶಾಲಿನಿ ನಾಲ್ವಾಡ್, ಭಾರತದ ಏಕೈಕ ಏರ್ ಆಂಬುಲೆನ್ಸ್ ಕಂಪೆನಿಯಾದ ಐಸಿಎಟಿಟಿ (ಇಂಟನ್ರ್ಯಾಷನಲ್ ಕ್ರಿಟಿಕಲ್ ಏರ್ ಟ್ರಾನ್ಸ್ಫರ್ ಟೀಮ್) ಇಂದು ಮೊದಲ ಬಾರಿಗೆ ಇಂಟಿಗ್ರೇಟೆಡ್ ಏರ್ ಆಂಬುಲೆನ್ಸ್ ಸೇವೆಗಳನ್ನು ನಗರದಲ್ಲಿ ಪ್ರಾರಂಭಿಸಿದೆ. ಇದರಿಂದ ದೂರದ ತುರ್ತು ವೈದ್ಯಕೀಯ ಸೇವೆಗಾಗಿ ಮತ್ತು ಸಮಯೋಚಿತ ಹಾಗೂ ಗುಣಮಟ್ಟದ ತುರ್ತು ವೈದ್ಯಕೀಯ ಅಗತ್ಯ ಸೇವೆಗಳನ್ನು ಪರಿಹರಿಸಿದಂತಾಗುತ್ತದೆ ಎಂದು ಹೇಳಿದರು.

ಎಚ್‍ಎಎಲ್ ವಿಮಾನ ನಿಲ್ದಾಣದಲ್ಲಿ ಸ್ಥಿರ ವಿಂಗ್ ಏರ್ ಆಂಬುಲೆನ್ಸ್, ದಕ್ಷಿಣ ಭಾರತದ ಮೊದಲ ಏರ್ ಆಂಬುಲೆನ್ಸ್ ಸೇವೆಯಾಗಲಿದೆ. ತುರ್ತು ಪರಿಸ್ಥಿತಿಗಳಿಗೆ ತ್ವರಿತ ಸೇವೆ ಮತ್ತು ಮೆಟ್ರೋ ನಗರಗಳಲ್ಲಿನ ಹೆಚ್ಚಿನ ರಸ್ತೆ ಸಂಚಾರದ ಸವಾಲುಗಳನ್ನು ನಿವಾರಿಸುತ್ತದೆ. ಸಿಲಿಕಾನ್ ಸಿಟಿಯಲ್ಲಿ ಭಾರತದ ಮೊದಲ ಇಂಟಿಗ್ರೇಟೆಡ್ ಏರ್ ಆಂಬುಲೆನ್ಸ್ ಸರ್ವೀಸ್ ಪ್ರಾರಂಭ ಅತ್ಯಾಧುನಿಕ ಜರ್ಮನ್ ಐಸೊಲೇಷನ್ ಪಾಡ್‍ನೊಂದಿಗೆ ಸಜ್ಜುಗೊಂಡಿರುವ ಏರ್ ಆಂಬುಲೆನ್ಸ್ ಕೋವಿಡ್-19 ರೋಗಿಗಳಿಗೆ ಸುರಕ್ಷಿತ ಸೇವೆ ಒದಗಿಸಲಿದೆ ಎಂದರು.

ಆರೋಗ್ಯದ ತುರ್ತು ಸಂದರ್ಭಗಳಲ್ಲಿ ಉತ್ತಮ ತುರ್ತು ವೈದ್ಯಕೀಯ ಸೇವೆಗಳ ಅಗತ್ಯವಿದೆ. ದಿಲ್ಲಿ ಮತ್ತು ಮುಂಬೈ ಏರ್ ಆಂಬುಲೆನ್ಸ್ ಸೇವೆಗಳು ದೇಶಾದ್ಯಂತ ವಿಭಜಿತ ಸೇವೆಗಳನ್ನು ಒದಗಿಸುತ್ತಿವೆ. ಆದರೆ, ಅಗತ್ಯ ಸಮಯದಲ್ಲಿ ಸೇವೆ ಪೂರೈಸುವಲ್ಲಿ ವಿಳಂಬ ವಾಗುತ್ತದೆ. ವೈದ್ಯಕೀಯ ಪರಿಣಿತರ ತಂಡ ಮತ್ತು ಏರ್ ಆಂಬುಲೆನ್ಸ್ ಸೇವೆ ರಾಜ್ಯದಲ್ಲಿ ಸರ್ವಕಾಲಿಕ ಉತ್ತಮ ಸೇವೆ ಒದಗಿಸುತ್ತದೆ ಎಂದು ಅವರು ತಿಳಿಸಿದರು.

ಈ ವೇಳೆ ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಡಾ.ಅಶ್ವತ್ಥ ನಾರಾಯಣ, ಆರೋಗ್ಯ ಸಚಿವ ಶ್ರೀರಾಮುಲು, ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್, ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಸೇರಿದಂತೆ ಇನ್ನಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News