ಪರಿಸರ ಪರಿಣಾಮ ಮೌಲ್ಯಮಾಪನ ಕರಡು ಅಧಿಸೂಚನೆಗೆ ನೀಡಿದ್ದ ತಡೆಯಾಜ್ಞೆ ವಿಸ್ತರಿಸಿದ ಹೈಕೋರ್ಟ್

Update: 2020-09-08 11:55 GMT

ಬೆಂಗಳೂರು, ಸೆ.8: ಕೇಂದ್ರ ಸರಕಾರದ ಪರಿಸರ ಪರಿಣಾಮ ಮೌಲ್ಯಮಾಪನ-2020 ಕರಡು ಅಧಿಸೂಚನೆಗೆ ನೀಡಿದ್ದ ಮಧ್ಯಂತರ ತಡೆಯಾಜ್ಞೆಯನ್ನು ಹೈಕೋರ್ಟ್ ಮುಂದಿನ ಆದೇಶದವರೆಗೂ ವಿಸ್ತರಿಸಿದೆ.

ಕನ್ನಡವೂ ಸೇರಿದಂತೆ ಸ್ಥಳೀಯ ಭಾಷೆಗಳಲ್ಲಿ ಕರಡು ಅಧಿಸೂಚನೆ ಪ್ರಕಟಿಸಲು ಕೇಂದ್ರ ಸರಕಾರ ನಿರಾಸಕ್ತಿ ತೋರಿದ ಹಿನ್ನೆಲೆಯಲ್ಲಿ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ಪೀಠ, ಕರಡು ಅಧಿಸೂಚನೆಗೆ ಆ.5ರಂದು ತಡೆ ನೀಡಿ ಮಧ್ಯಂತರ ಆದೇಶ ನೀಡಿತ್ತು.

ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸುವ ಕಾಲಾವಕಾಶವನ್ನು ವಿಸ್ತರಿಸಲು ಮತ್ತು ರಾಜ್ಯ ಭಾಷೆಗಳಲ್ಲಿ ಕರಡು ಪ್ರಕಟಿಸಲು ಕೇಂದ್ರ ಸರಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಅರ್ಜಿದಾರರು ಪಿಐಎಲ್ ಸಲ್ಲಿಸಿದ್ದಾರೆ. ಅರ್ಜಿ ವಿಚಾರಣೆ ಸಂದರ್ಭದಲ್ಲಿ ಕೇಂದ್ರ ಸರಕಾರದ ಪರ ವಕೀಲರು, ಕರಡನ್ನು ಹಿಂದಿ ಮತ್ತು ಇಂಗ್ಲಿಷ್‍ನಲ್ಲಿ ಮಾತ್ರ ಪ್ರಕಟಿಸಲು ಸಾಧ್ಯವಿದೆ. ರಾಜ್ಯಗಳ ಅಧಿಕೃತ ಭಾಷೆಯಲ್ಲಿ ಗೆಜೆಟ್ ಹೊರಡಿಸುವ ಅಗತ್ಯ ಕೇಂದ್ರ ಸರಕಾರಕ್ಕೆ ಇಲ್ಲ ಎಂದು ವಾದಿಸಿದ್ದರು.

ಅರ್ಜಿದಾರರ ಪರ ವಕೀಲರು ಸಂವಿಧಾನದ ಆಶಯದಂತೆ ದೇಶದ ಪ್ರತಿಯೊಬ್ಬ ಪ್ರಜೆಗೂ ಸರಕಾರದ ನಿಲುವುಗಳನ್ನು ತಿಳಿದುಕೊಳ್ಳುವ ಹಕ್ಕಿದೆ. ಕರಡು ಅಧಿಸೂಚನೆ ಪ್ರಸ್ತುತ ಮತ್ತು ಭವಿಷ್ಯದಲ್ಲಿ ಕೈಗೊಳ್ಳಲಿರುವ ಅಭಿವೃದ್ಧಿ ಕಾಮಗಾರಿ ಯೋಜನೆಗಳ ಮೇಲೆ ಅತ್ಯಂತ ಪರಿಣಾಮಕಾರಿಯಾಗಿದ್ದು, ಸಾರ್ವಜನಿಕರಿಗೆ ಈ ಬಗ್ಗೆ ಮಾಹಿತಿ ತಲುಪುವ ಅಗತ್ಯವಿದೆ ಎಂದು ವಾದಿಸಿದ್ದರು.

ಅರ್ಜಿದಾರರ ವಾದ ಪರಿಗಣಿಸಿದ್ದ ಹೈಕೋರ್ಟ್ ವಿಭಾಗೀಯ ಪೀಠ, 2011ರ ಜನಗಣತಿ ಪ್ರಕಾರ ದೇಶದಲ್ಲಿ ಶೇ.43ರಷ್ಟು ಜನಕ್ಕೆ ಹಿಂದಿ ಭಾಷೆ ತಿಳಿದಿದೆ. ಹಿಂದಿ ತಿಳಿಯದ ಜನ ಶೇ. 57ರಷ್ಟಿದ್ದಾರೆ. ಹೀಗಾಗಿ, ಕರಡು ಅಧಿಸೂಚನೆಯನ್ನು ಕನ್ನಡವೂ ಸೇರಿದಂತೆ ಆಯಾ ರಾಜ್ಯಭಾಷೆಗಳಲ್ಲಿ ಪ್ರಕಟಿಸಿ, ಸಾರ್ವಜನಿಕರಿಗೆ ತಲುಪುವಂತೆ ವ್ಯಾಪಕ ಪ್ರಚಾರ ನೀಡಬೇಕು. ಅಲ್ಲಿವರೆಗೂ, ಕರಡು ಅಧಿಸೂಚನೆಯನ್ನು ಅಂತಿಮಗೊಳಿಸಬಾರದು ಎಂದು ಆ.5ರಂದು ಮಧ್ಯಂತರ ಆದೇಶ ಹೊರಡಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News