ಸ್ಯಾಂಡಲ್‍ವುಡ್ ಡ್ರಗ್ಸ್ ದಂಧೆ ಪ್ರಕರಣ: ನಟಿ ಸಂಜನಾ ಗಲ್ರಾನಿ 5 ದಿನ ಪೊಲೀಸ್ ಕಸ್ಟಡಿಗೆ

Update: 2020-09-08 14:30 GMT

ಬೆಂಗಳೂರು, ಸೆ.8: ಕನ್ನಡ ಚಿತ್ರರಂಗದಲ್ಲಿನ ಡ್ರಗ್ಸ್ ಸರಬರಾಜು ಪ್ರಕರಣ ಸಂಬಂಧ ತನಿಖೆ ಮುಂದುವರಿಸಿರುವ ಸಿಸಿಬಿ ಪೊಲೀಸರು, ನಟಿ ಸಂಜನಾ ಗಲ್ರಾನಿ ಅನ್ನು ಬಂಧಿಸಿ, 5 ದಿನಗಳ ಕಸ್ಟಡಿಗೆ ಪಡೆದಿದ್ದಾರೆ.

ಸರ್ಚ್ ವಾರೆಂಟ್ ಪಡೆದು ಇಲ್ಲಿನ ಇಂದಿರಾನಗರದಲ್ಲಿರುವ ನಟಿ ಸಂಜನಾ ನಿವಾಸದ ಮೇಲೆ ಮಂಗಳವಾರ ಮುಂಜಾನೆ ದಾಳಿ ನಡೆಸಿದ ಸಿಸಿಬಿ ಪೊಲೀಸರು, ಶೋಧ ನಡೆಸಿ, ಪರಿಶೀಲನೆ ನಡೆಸಿದರು. ತದನಂತರ, ಕೆಲ ವಸ್ತುಗಳನ್ನು ಜಪ್ತಿ ಮಾಡಿ, ಸಂಜನಾ ಅನ್ನು ನಗರದ ಚಾಮರಾಜಪೇಟೆಯ ಸಿಸಿಬಿ ಕಚೇರಿಗೆ ಕರೆತಂದರು.

ಬಳಿಕ, ಸತತ ವಿಚಾರಣೆ ನಡೆಸಿದ ತನಿಖಾಧಿಕಾರಿಗಳ ತಂಡ, ನಗರದ ಎಂಟನೆ ಎಸಿಎಂಎಂ ನ್ಯಾಯಾಲಯದ ಎದುರು ಹಾಜರುಪಡಿಸಿದರು. ಸಂಜನಾ ಅವರು ಡ್ರಗ್ಸ್ ಜಾಲದಲ್ಲಿ ಭಾಗಿಯಾಗಿರುವ ಮಾಹಿತಿ ಇದೆ. ಹೀಗಾಗಿ, ಅವರ ಮನೆ ಮೇಲೆ ದಾಳಿ ನಡೆಸಿ ಮಾಹಿತಿ ಕಲೆಹಾಕಲಾಗಿದೆ. ಇದೀಗ ಸಂಜನಾ ಅವರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಬೇಕು. ಹೀಗಾಗಿ, ಅವರನ್ನು ಎಂಟು ದಿನಗಳ ಕಾಲ ಕಸ್ಟಡಿಗೆ ನೀಡಬೇಕು ಎಂದು ಸಿಸಿಬಿ ಪೊಲೀಸರು ನ್ಯಾಯಾಧೀಶರನ್ನು ಕೋರಿದರು.

ಅದನ್ನು ಮನ್ನಿಸಿದ ನ್ಯಾಯಾಧೀಶರು, ಸಂಜನಾ ಅವರನ್ನು 5 ದಿನ ಸಿಸಿಬಿಯ ಕಸ್ಟಡಿಗೆ ನೀಡಿದರು. ಇದಕ್ಕೂ ಮುನ್ನ ಸಂಜನಾ ಅವರನ್ನು ಮಲ್ಲೇಶ್ವರದ ಕೆ.ಸಿ.ಜನರಲ್ ಆಸ್ಪತ್ರೆಗೆ ಕರೆದೊಯ್ದು ಕೋವಿಡ್-19 ಸೋಂಕು ಹಾಗೂ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದರು.

ಆರೋಪವೇನು?: ನಟಿ ಸಂಜನಾ ಸಹ ಡ್ರಗ್ಸ್ ಪೆಡ್ಲರ್ ಗಳೊಂದಿಗೆ ಸಂಪರ್ಕ ಹೊಂದಿರುವ ಗಂಭೀರ ಆರೋಪ ಇದ್ದು, ಪ್ರಕರಣ ಸಂಬಂಧ ಈಗಾಗಲೇ ಬಂಧನಕ್ಕೆ ಒಳಗಾಗಿರುವ ರಾಹುಲ್ ಸೇರಿದಂತೆ ಇನ್ನಿತರೆ ಪ್ರಮುಖ ಆರೋಪಿಗಳೊಂದಿಗೆ ಸಂಪರ್ಕ ಹೊಂದಿರುವ ಬಗ್ಗೆ ಪ್ರಾಥಮಿಕ ಮಾಹಿತಿ ಸಂಗ್ರಹಿಸಿದ ಪೊಲೀಸರು ಆಕೆಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಇಲ್ಲಿನ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲು ಮಾಡಲಾಗಿದೆ.

ಸಂಜನಾ ಗಲ್ರಾನಿ ಸದ್ಯ ರಾಗಿಣಿ ಇರುವ ಮಹಿಳಾ ಸಾಂತ್ವನ ಕೇಂದ್ರದಲ್ಲಿಯೇ ಮಂಗಳವಾರ ರಾತ್ರಿ ಕಳೆಯಲಿದ್ದು, ಬುಧವಾರ ಮತ್ತೆ ಸಿಸಿಬಿ ಪೊಲೀಸರು ವಿಚಾರಣೆ ಚುರುಕುಗೊಳಿಸಲಿದ್ದಾರೆ. ಇನ್ನು, ಮಹಿಳಾ ಸಾಂತ್ವನ ಕೇಂದ್ರದಲ್ಲಿರುವ ಕಾರಣ ಮಹಿಳಾ ಸಾಂತ್ವನ ಕೇಂದ್ರದ ಸುತ್ತ ಬಿಗಿ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ.

ಖನ್ನಾ ಮನೆ ಮೇಲೆ ದಾಳಿ

ಈಗಾಗಲೇ ಬಂಧನವಾಗಿರುವ ವೀರೇನ್ ಖನ್ನಾ ನಿವಾಸಕ್ಕೆ ಸರ್ಚ್ ವಾರೆಂಟ್ ಪಡೆದು ಮಂಗಳವಾರ ಸಿಸಿಬಿ ಪೊಲೀಸರು ದಾಳಿ ನಡೆಸಿದಾಗ ನಕಲಿ ಪೊಲೀಸ್ ಸಮವಸ್ತ್ರ, ಮಾದಕವಸ್ತು ಸೇರಿದಂತೆ ಇನ್ನಿತರ ವಸ್ತುಗಳು ಪತ್ತೆಯಾಗಿದೆ. ಅಲ್ಲದೆ ಕೆಲವು ವಿದೇಶಿ ಕರೆನ್ಸಿಗಳು ಸಿಕ್ಕ ಹಿನ್ನೆಲೆ ಈತನ ವಿದೇಶಿ ನಂಟು ಬಯಲಿಗೆ ಬಂದಿದೆ ಎಂದು ಹೇಳಲಾಗುತ್ತಿದೆ.

ಪರಿಶೀಲನೆ ವೇಳೆ ನಕಲಿ ಪೊಲೀಸ್ ಸಮವಸ್ತ್ರ ಮಾತ್ರವಲ್ಲದೆ ಶೂ, ಬೆಲ್ಟ್, ಟೋಪಿ ಪತ್ತೆಯಾಗಿದೆ. ಅಲ್ಲದೆ ಗಾಂಜಾ, ಸಿಗರೇಟ್, ಗಾಂಜಾ ಸೇದುವ ಚಿಮಣಿ, ಸಿರೀಂಜ್, 7 ದೇಶಗಳ 12 ಕರೆನ್ಸಿಗಳು, ಲ್ಯಾಪ್‍ಟಾಪ್, ಪೆನ್‍ಡ್ರೈವ್, ಕಾರ್ಯಕ್ರಮ ನಡೆಸಿರುವ ಬಗ್ಗೆ ದಾಖಲೆಗಳು ಸಿಕ್ಕಿವೆ.

ಮತ್ತೋರ್ವ ಸೆರೆ

ಪ್ರಮುಖ ಆರೋಪಿಗಳ ಬಂಧನಕ್ಕೆ ಶೋಧ ಕಾರ್ಯ ನಡೆಸುತ್ತಿರುವ ಸಿಸಿಬಿ ಪೊಲೀಸರು, ಮಂಗಳವಾರ ಡ್ರಗ್ಸ್ ಪ್ರಕರಣ ಸಂಬಂಧ ಅಶ್ವಿನ್ ಯಾನೆ ಬೂಗಿಯನ್ನು ಬಂಧಿಸಿದ್ದಾರೆ.

ಕಾಟನ್‍ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಡ್ರಗ್ಸ್ ಪ್ರಕರಣ ಸಂಬಂಧ ದಾಖಲಾದ ಎಫ್‍ಐಆರ್ ನಲ್ಲಿ ಈತ 9ನೇ ಆರೋಪಿ ಎನ್ನಲಾಗಿದ್ದು, ತನಿಖೆ ಮುಂದುವರಿಸಲಾಗಿದೆ ಎಂದು ತಿಳಿದುಬಂದಿದೆ.

ಪುತ್ರಿಯ ಮೇಲಿನ ಆರೋಪ ಸುಳ್ಳು. ಪೊಲೀಸರಿಂದ ತನಿಖೆ ನಡೆಯಲಿ. ದೇವರ ದಯೆಯಿಂದ ಎಲ್ಲವೂ ಒಳ್ಳೇದಾಗುತ್ತೆ. ಎಲ್ಲವನ್ನೂ ಹೇಳುವ ಸಮಯ ಬರುತ್ತೆ. ನನ್ನ ಮಗಳು ಆರೋಪ ಮುಕ್ತಳಾಗಿ ಬೇಗ ಹೊರಬರುತ್ತಾಳೆ

-ರೇಷ್ಮಾ ಗಲ್ರಾನಿ, ಸಂಜನಾ ತಾಯಿ

ರಾಜ್ಯದಲ್ಲಿನ ಮಾದಕ ವಸ್ತುಗಳ(ಡ್ರಗ್ಸ್) ವಿರುದ್ಧದ ಕಾರ್ಯಾಚರಣೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರಕಾರ ಅತ್ಯಂತ ಸೂಕ್ತ ಕ್ರಮಗಳನ್ನು ಕೈಗೊಂಡಿದೆ. ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳುವ ಮೂಲಕ ಈ ದಂಧೆಗೆ ಕಡಿವಾಣ ಹಾಕಬೇಕು. ಯುವಶಕ್ತಿಯನ್ನು ಹಾಳುಗೆಡವುತ್ತಿರುವ ಮಾದಕ ವಸ್ತು ಜಾಲವನ್ನು ನಿರ್ಮೂಲನೆ ಮಾಡಲು ಕಠಿಣ ಕ್ರಮ ಜರುಗಿಸಬೇಕು

-ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನಸಭಾ ಸ್ಪೀಕರ್ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News