×
Ad

ಡ್ರಗ್ಸ್ ಮಾಫಿಯಾ: ಯಾವುದೇ ಒತ್ತಡಕ್ಕೂ ಮಣಿಯುವ ಪ್ರಶ್ನೆಯೇ ಇಲ್ಲ- ಸಿಎಂ ಯಡಿಯೂರಪ್ಪ

Update: 2020-09-08 20:02 IST

ಬೆಂಗಳೂರು, ಸೆ.7: ರಾಜ್ಯದಲ್ಲಿ ನೆರೆ ಹಾವಳಿಯಿಂದ ಆಗಿರುವ ಅನಾಹುತದ ಬಗ್ಗೆ ಕೇಂದ್ರ ಅಧ್ಯಯನ ತಂಡದ ಜೊತೆ ಚರ್ಚೆ ನಡೆಸಲಾಗಿದ್ದು, ಅವರಿಗೆ ಎಲ್ಲ ಮಾಹಿತಿಯನ್ನು ಒದಗಿಸಲಾಗಿದೆ. ಆದುದರಿಂದ, ಸದ್ಯಕ್ಕೆ ಹೊಸದಿಲ್ಲಿಗೆ ಭೇಟಿ ನೀಡುವ ಕುರಿತು ನಿರ್ಧಾರ ಮಾಡಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ಹಿರಿಯ ಸಚಿವರೊಂದಿಗೆ ಸೆ.21ರಿಂದ ಆರಂಭವಾಗಲಿರುವ ವಿಧಾನಮಂಡಲದ ಅಧಿವೇಶನದ ಕುರಿತು ಚರ್ಚೆ ಮಾಡಿದ್ದೇನೆ. ಸದನದಲ್ಲಿ ರಾಜ್ಯದ ಜನತೆಯ ಮುಂದೆ ವಾಸ್ತವಾಂಶಗಳನ್ನು ಇರಿಸುತ್ತೇವೆ ಎಂದರು.

ಅತಿವೃಷ್ಟಿ ಪ್ರದೇಶಕ್ಕೆ ಮೂರು ತಂಡಗಳಲ್ಲಿ ಪ್ರವಾಸ ಮಾಡಲು ಉದ್ದೇಶಿಸಲಾಗಿದೆ. ಕೇಂದ್ರ ಅಧ್ಯಯನ ತಂಡದ ಜೊತೆಗೆ ನಮ್ಮ ಅಧಿಕಾರಿಗಳು ಇದ್ದಾರೆ. ಕಳೆದ ವರ್ಷ ಸಂಭವಿಸಿದ ನೆರೆ ಹಾವಳಿಯಲ್ಲಿ ಏನೆಲ್ಲ ಸಮಸ್ಯೆಯಾಗಿದೆ ಎಂಬುದರ ಬಗ್ಗೆಯೂ ಕೇಂದ್ರ ಅಧ್ಯಯನ ತಂಡಕ್ಕೆ ಮನವರಿಕೆ ಮಾಡಿಕೊಡಲಾಗಿದೆ. ಕೇಂದ್ರದ ಅಧ್ಯಯನ ತಂಡ ಏನು ವರದಿ ಸಲ್ಲಿಸುತ್ತೆ ನೋಡೊಣ. ನಾವು ಅತಿವೃಷ್ಟಿ ಪ್ರದೇಶಗಳಿಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕುತ್ತೇವೆ ಎಂದು ಅವರು ಹೇಳಿದರು.

ಡ್ರಗ್ಸ್ ವಿಚಾರದಲ್ಲಿ ಪ್ರಭಾವಿಗಳ ಬಂಧನ ವಿಚಾರವಾಗಿ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ರಾಜ್ಯ ಸರಕಾರ ಡ್ರಗ್ಸ್ ಮಾಫಿಯಾಗೆ ಕಡಿವಾಣ ಹಾಕುವ ವಿಚಾರದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳುತ್ತದೆ. ನಮ್ಮ ಶಕ್ತಿ ಮೀರಿ ಕ್ರಮ ತೆಗೆದುಕೊಳ್ಳಲು ನಾವು ಬದ್ಧವಾಗಿದ್ದೇವೆ. ಯಾವುದೇ ಒತ್ತಡಕ್ಕೂ ನಾವು ಮಣಿಯುವ ಪ್ರಶ್ನೆಯೇ ಇಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News