ವರಿಷ್ಠರ ತೀರ್ಮಾನಕ್ಕೆ ಬದ್ಧರಾಗಿ, ಅಪಸ್ವರ ಎತ್ತಬೇಡಿ: ಸಂಪುಟ ಸದಸ್ಯರಿಗೆ ಬಿಎಸ್‌ವೈ ನಿರ್ದೇಶನ

Update: 2020-09-08 16:29 GMT

ಬೆಂಗಳೂರು, ಸೆ. 8: ಸಚಿವ ಸಂಪುಟ ವಿಸ್ತರಣೆ ಹಾಗೂ ಪುನಾರಚನೆ ಸೇರಿದಂತೆ ಪಕ್ಷದ ವರಿಷ್ಟರು ಕೈಗೊಳ್ಳುವ ತೀರ್ಮಾನಕ್ಕೆ ಎಲ್ಲ ಸಚಿವರು ಬದ್ಧರಾಗಿರಬೇಕು. ಯಾರೊಬ್ಬರು ಅಪರಸ್ವರ ಎತ್ತಬಾರದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತನ್ನ ಸಂಪುಟದ ಸಹೋದ್ಯೋಗಿಗಳಿಗೆ ಇಂದಿಲ್ಲಿ ನಿರ್ದೇಶನ ನೀಡಿದ್ದಾರೆ.

ವಿಧಾನ ಮಂಡಲ ಅಧಿವೇಶನದ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ಸಂಪುಟ ಸಹೋದ್ಯೋಗಿಗಳೊಂದಿಗೆ ಸಮಾಲೋಚನೆ ನಡೆಸಿದ ಅವರು, ಸಚಿವ ಸಂಪುಟ ವಿಸ್ತರಣೆ, ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ಕೇಂದ್ರದಿಂದ ಬರಬೇಕಾದ ಅನುದಾನ, ಕೋವಿಡ್ ನಿರ್ವಹಣೆ ಮತ್ತು ಸ್ಥಿತಿಗತಿ, ಡಿ.ಜೆ.ಹಳ್ಳಿ ಗಲಭೆ, ಡ್ರಗ್ಸ್ ದಂಧೆ, ಸರಕಾರದ ಭ್ರಷ್ಟಾಚಾರ ಆರೋಪದ ಪ್ರಕರಣಗಳು ಸೇರಿದಂತೆ ಇನ್ನಿತರ ವಿಚಾರಗಳ ಬಗ್ಗೆ ಚರ್ಚಿಸಿದ್ದಾರೆ ಎಂದು ಗೊತ್ತಾಗಿದೆ.

ಹೈಕಮಾಂಡ್‍ನಿಂದ ಆಹ್ವಾನ ಬಂದ ಕೂಡಲೇ ದಿಲ್ಲಿ ತೆರಳಲಿದ್ದು, ಸಚಿವ ಸಂಪುಟ ವಿಸ್ತರಣೆ ವಿಚಾರದಲ್ಲಿ ಹೈಕಮಾಂಡ್ ನಿರ್ಧಾರವೇ ಅಂತಿಮ. ಸಚಿವರನ್ನು ಸಂಪುಟದಿಂದ ಕೈಬಿಡುವ ವಿಚಾರದಲ್ಲೂ ವರಿಷ್ಠರದ್ದೇ ಅಂತಿಮ ತೀರ್ಮಾನ. ವರಿಷ್ಠರು ಏನೇ ನಿರ್ಧಾರ ಕೈಗೊಂಡರೂ ಒಪ್ಪಿಕೊಳ್ಳಬೇಕು ಎಂದು ಸೂಚನೆ ನೀಡಿದ್ದಾರೆ. ಆದರೆ, ಸದ್ಯಕ್ಕೆ ಸಚಿವರನ್ನು ಸಂಪುಟದಿಂದ ಕೈಬಿಡುವುದು ಬೇಡ ಎಂದು ಮನವಿ ಮಾಡುತ್ತೇನೆ. ಆದರೆ ವರಿಷ್ಠರ ನಿರ್ಧಾರ ಏನು ಎಂಬುದು ನನಗೂ ಗೊತ್ತಿಲ್ಲ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.

ವಿಧಾನ ಮಂಡಲ ಅಧಿವೇಶನದಲ್ಲಿ ವಿಪಕ್ಷಗಳ ವಿರುದ್ಧ ಒಗ್ಗಟ್ಟಿನಿಂದ ಸರಕಾರ ಸಮರ್ಥ ರೀತಿಯಲ್ಲಿ ಉತ್ತರ ನೀಡಬೇಕು. ಆ ನಿಟ್ಟಿನಲ್ಲಿ ಎಲ್ಲ ಇಲಾಖಾ ಸಚಿವರು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ಸರಕಾರ ಡಿ.ಜೆ.ಹಳ್ಳಿ ಗಲಭೆ, ಕೋವಿಡ್ ನಿರ್ವಹಣೆ ಹಾಗೂ ಡ್ರಗ್ಸ್ ದಂಧೆ ಸೇರಿದಂತೆ ಎಲ್ಲವನ್ನು ಸಮರ್ಥವಾಗಿ ನಿಭಾಯಿಸಿದೆ ಎಂಬ ಅಂಶದ ಬಗ್ಗೆ ಎಲ್ಲರೂ ಸೂಕ್ತ ಉತ್ತರ ನೀಡಬೇಕು ಎಂದು ಯಡಿಯೂರಪ್ಪ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಮಳೆಗಾಲದ ಅಧಿವೇಶನದ ಬಗ್ಗೆ ಸಚಿವರೊಂದಿಗೆ ಸಮಾಲೋಚನೆ ಮಾಡಲಾಗಿದ್ದು, ಹೊಸದಿಲ್ಲಿ ದೆಹಲಿಗೆ ತೆರಳುವ ದಿನಾಂಕ ಇನ್ನು ನಿಗದಿಯಾಗಿಲ್ಲ. ಸೆ.21ರಿಂದ ಅಧಿವೇಶನ ಕಲಾಪ ಆರಂಭವಾಗಲಿದ್ದು, ರಾಜ್ಯದ ಅತಿವೃಷ್ಟಿ ಕುರಿತು ವಾಸ್ತವಾಂಶಗಳನ್ನು ತಿಳಿಸುತ್ತೇವೆ. ಕೇಂದ್ರದ ಅಧ್ಯಯನ ತಂಡ ರಾಜ್ಯದ ಅತಿವೃಷ್ಟಿ ಪ್ರದೇಶಗಳಲ್ಲಿ ಅಧ್ಯಯನ ಕೈಗೊಂಡಿದೆ. ತಂಡದೊಂದಿಗೆ ರಾಜ್ಯ ಸರಕಾರದ ಅಧಿಕಾರಿಗಳು ಇದ್ದು ಸೂಕ್ತ ಮಾಹಿತಿ ಒದಗಿಸಿದ್ದಾರೆ. ಕೇಂದ್ರದಿಂದ ಸೂಕ್ತ ಪರಿಹಾರ ಬಿಡುಗಡೆ ಮನವಿ ಮಾಡಲಾಗುವುದು

-ಯಡಿಯೂರಪ್ಪ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News