ಬೆಟ್ಟಹಲಸೂರು ಮೆಟ್ರೊ ನಿಲ್ದಾಣ: ಬಿಎಂಆರ್‍ಸಿಎಲ್-ಎಂಬೆಸ್ಸಿ ಗ್ರೂಪ್ ಒಡಂಬಡಿಕೆಗೆ ಸಹಿ

Update: 2020-09-08 18:15 GMT

ಬೆಂಗಳೂರು, ಸೆ.8: ಬೆಂಗಳೂರು ಅಂತರ್‍ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕ್ಷಿಪ್ರಗತಿಯ ಹಾಗೂ ಸೀಮಾತೀತ ಸಂಪರ್ಕವನ್ನು ನಿರ್ಮಿಸುವುದಕ್ಕಾಗಿ ಬೆಂಗಳೂರು ಮೆಟ್ರೊ ರೈಲು ನಿಗಮ(ಬಿಎಂಆರ್‍ಸಿಎಲ್)ದೊಂದಿಗೆ ಎಂಬೆಸ್ಸಿ ಗ್ರೂಪ್ ಪರಸ್ಪರ ತಿಳುವಳಿಕಾ ಒಡಂಬಡಿಕೆಗೆ ಸಹಿ ಹಾಕಿದೆ. ಇದರಡಿ 140 ಕೋಟಿ ರೂ.ಗಳ ಹೂಡಿಕೆಯೊಂದಿಗೆ ಬೆಟ್ಟಹಲಸೂರು ಮೆಟ್ರೊ ಸ್ಟೇಷನ್ ನಿರ್ಮಿಸಲಾಗುತ್ತಿದೆ.

ಮಂಗಳವಾರ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಮ್ಮುಖದಲ್ಲಿ ಈ ತಿಳುವಳಿಕಾ ಒಡಂಬಡಿಕೆಗೆ ಸಹಿ ಹಾಕಲಾಗಿದ್ದು, ಇದು ಮತ್ತೊಂದು ಗಮನಾರ್ಹ ಸಾರ್ವಜನಿಕ ಖಾಸಗಿ ಪಾಲುದಾರಿಕೆಯ ಒಪ್ಪಂದವಾಗಿದೆ.

ಬಾಗಲೂರು ಕ್ರಾಸ್ ಮತ್ತು ಟ್ರಂಪೆಟ್ ಜಂಕ್ಷನ್‍ಗಳ ನಡುವೆ ಬೆಟ್ಟಹಲಸೂರಿನಲ್ಲಿ ಮೆಟ್ರೋ ನಿಲ್ದಾಣ ನಿರ್ಮಾಣವಾಗಲಿದೆ. ಸೆಂಟ್ರಲ್ ಸಿಲ್ಕ್ ಬೋರ್ಡ್ ನಿಂದ ಹೆಬ್ಬಾಳಕ್ಕೆ, ಕೆ.ಆರ್.ಪುರಂ ಮೂಲಕ ಮತ್ತು ರಾಷ್ಟ್ರೀಯ ಹೆದ್ದಾರಿ 44 ರ ಮೇಲೆ ಟ್ರಂಪೆಟ್ ಸ್ಟೇಷನ್‍ವರೆಗೆ ಸಾಗುವ ಹಾಗೂ ಅಂತಿಮವಾಗಿ ಕೆಂಪೇಗೌಡ ಅಂತರ್‍ರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಗರಕ್ಕೆ ಜೋಡಿಸುವ ಹೊರವರ್ತುಲ ರಸ್ತೆಯ ಮೇಲಿನ ಬಿಎಂಆರ್‍ಸಿಎಲ್ ಪ್ರಸ್ತಾಪಿತ ನೂತನ ಮಾರ್ಗ 'ಒಆರ್‍ಆರ್-ಏರ್ ಪೋರ್ಟ್ ಮೆಟ್ರೊ'ದ ಭಾಗ ಇದಾಗಿರುತ್ತದೆ.

ನೂತನ ಮಾರ್ಗ ಮಾಹಿತಿ ತಂತ್ರಜ್ಞಾನ ಕೇಂದ್ರ ಭಾಗವನ್ನು ವಿಮಾನ ನಿಲ್ದಾಣದೊಂದಿಗೆ ಕ್ಷಿಪ್ರ ಸಂಚಾರ ಮಾರ್ಗದಲ್ಲಿ ಜೋಡಿಸಲು ನೆರವಾಗುತ್ತದೆ. ವಾಣಿಜ್ಯ ಕಾರ್ಯಾಚರಣೆಗಳು ಆರಂಭವಾದ ದಿನಾಂಕದಿಂದ 30 ವರ್ಷಗಳವರೆಗಿನ ಆರಂಭದ ರಿಯಾಯಿತಿ ಅವಧಿಯನ್ನು ಈ ಪರಸ್ಪರ ತಿಳುವಳಿಕಾ ಒಡಂಬಡಿಕೆ ಒಳಗೊಂಡಿರುತ್ತದೆ.

ಇಂದು ಸಹಿ ಹಾಕಲಾದ ಎಂಬೆಸ್ಸಿ ಬುಲೆವಾರ್ಡ್-ಬೆಟ್ಟಹಲಸೂರು ಮೆಟ್ರೊ ಸ್ಟೇಷನ್‍ಗಾಗಿ ಬಿಎಂಆರ್‍ಸಿಎಲ್ ಜೊತೆಗೆ ಕೈಗೊಳ್ಳಲಾದ ತನ್ನ ಪರಸ್ಪರ ತಿಳುವಳಿಕಾ ಒಡಂಬಡಿಕೆಗೆ ತಕ್ಕಂತೆ ಮೆಟ್ರೊ ಸ್ಟೇಷನ್‍ಗೆ ಹೆಚ್ಚುವರಿಯಾಗಿ ಪಾದಚಾರಿಗಳು ನಡೆಯಲು 5-6 ಮೀಟರ್ ಗಳ ಅಗಲದ ಫೂಟ್ ಒವರ್ ಬ್ರಿಡ್ಜ್ ಅನ್ನು ನಿರ್ಮಿಸಲಾಗುತ್ತಿದೆ.

ಈ ಮಾರ್ಗವನ್ನು ರಾಷ್ಟ್ರೀಯ ಹೆದ್ದಾರಿ 44ರ ಇನ್ನೊಂದು ಭಾಗದ ಕಡೆಗೆ ಮೆಟ್ರೊ ವಯಾಡಕ್ಟ್ ಅಡಿಯಲ್ಲಿ ಬರುವಂತೆ ಬಿಎಂಆರ್‍ಸಿಎಲ್ ನಿರ್ಮಿಸಲಿದೆ. ಒಡಂಬಡಿಕೆಯ ಭಾಗವಾಗಿ ಒಳಾಂಗಣ ವಿನ್ಯಾಸ, ಫಿಟ್ಟಿಂಗ್‍ಗಳು ಮತ್ತು ಇತರೆ ಸೌಲಭ್ಯಗಳನ್ನು ಬಿಎಂಆರ್‍ಸಿಎಲ್‍ನ ಸಲಹೆ ಪಡೆದು ಅಳವಡಿಸುವ ಸಂಪೂರ್ಣ ಅಧಿಕಾರವನ್ನು ಎಂಬೆಸ್ಸಿ ಸಮೂಹ ಹೊಂದಿರುತ್ತದೆ. ಇದಕ್ಕಾಗಿ ಸುಮಾರು 7 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ.

ಎಂಬೆಸ್ಸಿ ಸಮೂಹ ತನ್ನ ಬ್ರಾಂಡಿಂಗ್ ಹಾಗೂ ಜಾಹೀರಾತು ಚಟುವಟಿಕೆಗಳಿಗಾಗಿ ಈ ನಿಲ್ದಾಣದಲ್ಲಿನ ಸಾವಿರ ಚದರ ಅಡಿ ಗೋಡೆಯ ಪ್ರದೇಶವನ್ನು ಬಳಸಿಕೊಳ್ಳಲು ಅವಕಾಶ ಇರುತ್ತದೆ. ಅಲ್ಲದೆ, 3000 ಚದರ ಅಡಿ ಪ್ರದೇಶವನ್ನು ವಾಣಿಜ್ಯ ಅಭಿವೃದ್ದಿಗಾಗಿ ಬಳಸಿಕೊಳ್ಳಬಹುದಾಗಿದ್ದು, ಇದರಲ್ಲಿ ರಿಟೇಲ್ ಮಳಿಗೆಗಳು, ಆಹಾರ, ಪೇಯ ಮತ್ತು ಇತರೆ ಕಿಯಾಸ್‍ಗಳು ಸೇರಿರಬಹುದು.

ಇದರೊಂದಿಗೆ ಎಂಬೆಸ್ಸಿ ಸಮೂಹ ಬೆಂಗಳೂರು ನಗರ ಮೂಲಸೌಕರ್ಯದಲ್ಲಿ ನಡೆಸಿರುವ ಹೂಡಿಕೆ 450 ಕೋಟಿ ರೂ.ಗಳಷ್ಟಾಗಿದ್ದು, ಇದರಲ್ಲಿ ಕಾಡುಬೀಸನಹಳ್ಳಿ ಮತ್ತು ಬೆಟ್ಟಹಲಸೂರು ಮೆಟ್ರೊ ಸ್ಟೇಷನ್‍ಗಳು, ಸ್ಕೈವಾಕ್ ಹಾಗೂ ಥಣಿಸಂದ್ರ ಮತ್ತು ನಾಗವಾರ ಕೆರೆ ಜಂಕ್ಷನ್ ನಡುವಿನ ಫ್ಲ್ಲೈ ಒವರ್‍ಗಳು ಸೇರಿರುತ್ತವೆ.

ಈ ಸಂದರ್ಭದಲ್ಲಿ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್, ಎಂಬೆಸ್ಸಿ ಸಮೂಹದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆದಿತ್ಯಾ ವಿರ್ವಾಣಿ, ಬಿಎಂಆರ್‍ಸಿಎಲ್‍ನ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇಠ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News