ವಿಸಾ ಮುಗಿದರೂ ಇಲ್ಲಿಯೇ ಉಳಿದಿರುವ ವಿದೇಶಿ ವಿದ್ಯಾರ್ಥಿಗಳ ಮೇಲೆ ಅನುಮಾನ: ಮೇಯರ್ ಗೌತಮ್ ಕುಮಾರ್

Update: 2020-09-08 18:17 GMT

ಬೆಂಗಳೂರು, ಸೆ.8: ಡ್ರಗ್ಸ್ ಆರೋಪದ ಬೆನ್ನಲ್ಲೇ ವೀಸಾ ಮುಗಿದರೂ ಇಲ್ಲಿಯೇ ಉಳಿದ ನೈಜೀರಿಯನ್-ದಕ್ಷಿಣ ಆಫ್ರಿಕಾದ ವಿದ್ಯಾರ್ಥಿಗಳ ಮೇಲೆ ಅನುಮಾನ ಇದೆ ಎಂದು ಮೇಯರ್ ಗೌತಮ್ ಕುಮಾರ್ ಹೇಳಿದ್ದಾರೆ.

ಡ್ರಗ್ ಮಾಫಿಯಾ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಅವರು, ಡ್ರಗ್ಸ್ ಜಾಲದ ಬೇರು ಎಲ್ಲೆಲ್ಲ ಹರಡಿದೆ, ಅದೆಲ್ಲವನ್ನು ಕಿತ್ತೊಗೆಯಬೇಕು. ಸಿಸಿಬಿಯಿಂದ ಈಗ ನಡೆಯುತ್ತಿರೋ ತನಿಖೆ ಕಟ್ಟುನಿಟ್ಟಾಗಿ ಮುಂದುವರಿಸಬೇಕು. ಈಗಿನ ಯುವಕರು ತುಂಬಾ ಜನ ಈ ಡ್ರಗ್ಸ್ ಚಟಕ್ಕೆ ಒಳಗಾಗುತ್ತಿದಾರೆ. ಮನೆಯಲ್ಲಿ ಒಳ್ಳೆಯ ವಾತಾವರಣ ಕಲ್ಪಿಸಬೇಕು. ಪೊಲೀಸ್ ವ್ಯವಸ್ಥೆಯೂ ಅತ್ಯಂತ ಕಟ್ಟುನಿಟ್ಟಾಗಿ ಇದನ್ನು ನಿಯಂತ್ರಿಸಬೇಕು ಎಂದರು.

ಈವರೆಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಇಂತಹ ದೂರು ಕೇಳಿ ಬಂದಿರಲಿಲ್ಲ. ಇತ್ತೀಚೆಗೆ ಡಿಜೆ ಹಳ್ಳಿ ಗಲಭೆ ನಡೆದಾಗ, ಅಲ್ಲಿನ ಜೆಡಿಎಸ್ ಮಹಿಳಾ ಕಾರ್ಪೋರೇಟರ್ ಗಲಭೆಗೆ ಡ್ರಗ್ಸ್ ಕೂಡಾ ಒಂದು ಕಾರಣ ಎಂದಿದ್ದರು. ಕೆಲವೊಂದು ಸೆಕ್ಟರ್ ಗಳಲ್ಲಿ ಡ್ರಗ್ಸ್ ನ ಪ್ರಭಾವ ಇದೆ. ಸೌತ್ ಆಫ್ರಿಕಾದಿಂದ ಸ್ಟಡಿ ವೀಸಾ ಪಡೆದು ಬಂದವರ, ವೀಸಾ ಅವಧಿ ಮುಗಿದರೂ ಇಲ್ಲಿ ಚೆಕ್ ಮಾಡುತ್ತಿಲ್ಲ. ನೈಜೇರಿಯನ್‍ನಿಂದ ಹಾಗೂ ಸ್ಟಡಿ ವೀಸಾ ಮೂಲಕ ಬಂದ ಫಾರೀನ್ ಸ್ಟುಡೆಂಟ್ಸ್ ಗಳ ಕಾರ್ಯಚಟುವಟಿಕೆ ಗಮನಿಸುತ್ತಿರಬೇಕು. ವಿದೇಶಗಳಲ್ಲಿ ವೀಸಾ ಅವಧಿ ಮುಗಿದ ಬಳಿಕವೂ ಅಲ್ಲಿಯೇ ಇದ್ದರೆ ಅರೆಸ್ಟ್ ಮಾಡಿ ಕರೆದುಕೊಂಡು ಹೋಗ್ತಾರೆ. ಇಲ್ಲಿಯೂ ಹಾಗೇ ಮಾಡಬೇಕು ಎಂದರು.

ಇನ್ನು ಪಾನ್ ಬೀಡಾ ಅಂಗಡಿಗಳಲ್ಲಿ ಸುಲಭವಾಗಿ ಕೈಗೆಟಕುವ ರೀತಿ ಡ್ರಗ್ಸ್ ಮಾರಾಟ ನಡೀತಿದೆ ಎಂಬ ಸುದ್ದಿ ಇದ್ದು, ನಮ್ಮ ಎಲ್ಲಾ ಆರೋಗ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿ ನಿಯಂತ್ರಿಸಲು ಈಗಲೇ ಆಯುಕ್ತರಿಗೆ ಪತ್ರ ಬರೆಯಲಾಗುವುದು ಎಂದು ಮೇಯರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News