ನವಾಲ್ನಿಯ ವಿಷಪ್ರಾಶನದ ಹಿಂದಿರುವವರನ್ನು ಪತ್ತೆಹಚ್ಚಿ ಶಿಕ್ಷಿಸಿ: ರಶ್ಯಕ್ಕೆ ಜಿ7 ದೇಶಗಳಿಂದ ಒತ್ತಾಯ

Update: 2020-09-09 16:32 GMT

ಮಾಸ್ಕೋ (ರಶ್ಯ), ಸೆ. 9: ರಶ್ಯದ ಪ್ರತಿಪಕ್ಷ ನಾಯಕ ಅಲೆಕ್ಸೀ ನವಾಲ್ನಿಗೆ ವಿಷಪ್ರಾಶನವಾಗಿದೆಯೆನ್ನಲಾದ ವಿಷಯದಲ್ಲಿ ‘ಅಪಪ್ರಚಾರ ಅಭಿಯಾನ’ ನಡೆಯುತ್ತಿದ್ದು, ರಶ್ಯದ ವಿರುದ್ಧ ಹೊಸದಾಗಿ ದಿಗ್ಬಂಧನಗಳನ್ನು ಹೇರಲು ಅದನ್ನು ಬಳಸಲಾಗುತ್ತಿದೆ ಎಂದು ರಶ್ಯ ಬುಧವಾರ ಹೇಳಿದೆ.

ನವಾಲ್ನಿಯ ಶಂಕಿತ ವಿಷಪ್ರಾಶನದ ಹಿಂದಿರುವವರನ್ನು ಕ್ಷಿಪ್ರವಾಗಿ ಪತ್ತೆಹಚ್ಚಿ ಶಿಕ್ಷಿಸುವಂತೆ ಜಿ7 ದೇಶಗಳ ವಿದೇಶ ಸಚಿವರು ಮಂಗಳವಾರ ರಶ್ಯವನ್ನು ಒತ್ತಾಯಿಸಿದ ಬಳಿಕ, ರಶ್ಯ ಈ ಹೇಳಿಕೆಯನ್ನು ಬಿಡುಗಡೆಗೊಳಿಸಿದೆ.

ಅಲೆಕ್ಸೀ ನವಾಲ್ನಿಗೆ ನೊವಿಚೊಕ್ ನರ್ವ್ ಏಜಂಟ್ ಎಂಬ ರಾಸಾಯನಿಕವನ್ನು ಉಣಿಸಲಾಗಿದೆ ಎಂದು ಜರ್ಮನಿ ಆರೋಪಿಸಿದೆ.

ಪ್ರಕರಣಕ್ಕೆ ಸಂಬಂಧಿಸಿ ತಾನು ಕಂಡುಕೊಂಡಿರುವ ಅಂಶಗಳನ್ನು ರಶ್ಯದೊಂದಿಗೆ ಹಂಚಿಕೊಳ್ಳಲು ಜರ್ಮನಿ ನಿರಾಕರಿಸುತ್ತಿದೆ ಎಂಬುದಾಗಿಯೂ ರಶ್ಯ ವಿದೇಶ ಸಚಿವಾಲಯವು ಹೇಳಿದೆ.

ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್‌ರ ಪ್ರಧಾನ ಟೀಕಾಕಾರ ಅಲೆಕ್ಸೀ ನವಾಲ್ನಿಗೆ ವಿಷಪ್ರಾಶನ ಮಾಡಲಾಗಿದೆ ಎಂಬುದಾಗಿ ಜರ್ಮನಿಯು ತಮಗೆ ಖಚಿತ ಮಾಹಿತಿ ನೀಡಿದೆ ಎಂದು ಜಿ7 ದೇಶಗಳ ಉನ್ನತ ರಾಜತಾಂತ್ರಿಕರು ಹೇಳಿದ್ದಾರೆ. ಈ ಹೇಳಿಕೆಯನ್ನು ಜಿ7 ಸದಸ್ಯ ದೇಶವಾದ ಅಮೆರಿಕದ ವಿದೇಶ ಕಾರ್ಯದರ್ಶಿ ಮೈಕ್ ಪಾಂಪಿಯೊ ಬಿಡುಗಡೆಗೊಳಿಸಿದ್ದಾರೆ.

ಜಿ7 ದೇಶದ ಇತರ ಸದಸ್ಯ ದೇಶಗಳೆಂದರೆ ಬ್ರಿಟನ್, ಕೆನಡ, ಫ್ರಾನ್ಸ್, ಜರ್ಮನಿ, ಇಟಲಿ ಮತ್ತು ಜಪಾನ್. ರಶ್ಯವು 2014ರಲ್ಲಿ ಯುಕ್ರೇನ್‌ನ ಕ್ರೈಮಿಯ ರಾಜ್ಯವನ್ನು ತನ್ನ ವಶಕ್ಕೆ ತೆಗೆದುಕೊಂಡ ಬಳಿಕ ಅದನ್ನು ಜಿ8 ದೇಶಗಳ ಗುಂಪಿನಿಂದ ಹೊರದಬ್ಬಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News