ನೇಷನ್ಸ್ ಲೀಗ್: ಪೋರ್ಚುಗಲ್‌ಗೆ 2-0 ಜಯ

Update: 2020-09-09 18:02 GMT

ಲಂಡನ್, ಸೆ.9: ಮಂಗಳವಾರ ನಡೆದ ನೇಷನ್ಸ್ ಲೀಗ್ ಎ’ ಗ್ರೂಪ್ 3ನೇ ಪಂದ್ಯದಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ದಾಖಲಿಸಿದ 100ನೇ ಗೋಲು ನೆರವಿನಲ್ಲಿ ಪೋರ್ಚುಗಲ್ 10 ಮಂದಿ ಸದಸ್ಯರ ಸ್ವೀಡನ್ ತಂಡವನ್ನು 2-0 ಗೋಲುಗಳಿಂದ ಮಣಿಸಿದೆ.

  ಕ್ರಿಸ್ಟಿಯಾನೊ ರೊನಾಲ್ಡೊ 100ನೇ ಅಂತರ್‌ರಾಷ್ಟ್ರೀಯ ಗೋಲು ಗಳಿಸುವ ಮೂಲಕ ಈ ಸಾಧನೆ ಮಾಡಿದ ವಿಶ್ವದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಇರಾನ್ ತಂಡದ ಅಲಿ ಡೇಯಿ (109)ಗರಿಷ್ಠಗೋಲು ಗಳಿಸಿದ ವಿಶ್ವದ ಮೊದಲ ಆಟಗಾರ. 101 ಗೋಲು ಗಳಿಸಿರುವ ರೊನಾಲ್ಡೊ ಆ ಬಳಿಕದ ಸ್ಥಾನ ಪಡೆದಿದ್ದಾರೆ. ರೊನಾಲ್ಡೊ ಈ ಪಂದ್ಯದಲ್ಲಿ ಅವಳಿ ಗೋಲು ಜಮೆ ಮಾಡಿದರು. 35 ರ ಹರೆಯದ ರೊನಾಲ್ಡೊ 45ನೇ ನಿಮಿಷದಲ್ಲಿ ಮೊದಲ ಗೋಲು ಗಳಿಸಿದರು. ಬಳಿಕ 72ನೇ ನಿಮಿಷದಲ್ಲಿ ಇನ್ನೊಂದು ಗೋಲು ಜಮೆ ಮಾಡಿದರು. ಕಳೆದ ಪಂದ್ಯದಲ್ಲಿ ರೊನಾಲ್ಡೊ ಆಡಿರಲಿಲ್ಲ. ಎರಡು ಪಂದ್ಯಗಳಲ್ಲಿ ಎರಡು ಗೆಲುವುಗಳೊಂದಿಗೆ ಪೋರ್ಚುಗಲ್ ಗುಂಪು 3ರಲ್ಲಿ ಅಗ್ರಸ್ಥಾನ , ಫ್ರಾನ್ಸ್ ಅಷ್ಟೇ ಪಂದ್ಯಗಳನ್ನು ಆಡಿ ಎರಡು ಗೆಲುವು ದಾಖಲಿಸಿತ್ತು. ಆದರೆ ಗೋಲು ವ್ಯತ್ಯಾಸದಲ್ಲಿ ಎರಡನೇ ಸ್ಥಾನದಲ್ಲಿದೆ. ಎರಡು ಪಂದ್ಯಗಳನ್ನು ಕಳೆದುಕೊಂಡಿರುವ ಸ್ವೀಡನ್‌ಮೂರನೇ ಮತ್ತು ಕ್ರೊಯೇಷಿಯ ಅಂತಿಮ ಸ್ಥಾನದಲ್ಲಿದೆ.

  ಅಕ್ಟೋಬರ್ 11ರಂದು ಪ್ಯಾರಿಸ್‌ನಲ್ಲಿ ನಡೆಯುವ ಹಣಾಹಣಿಯಲ್ಲಿ ಫ್ರಾನ್ಸ್‌ಗೆ ಪೋರ್ಚುಗಲ್ , ಕ್ರೊಯೇಷಿಯಾಕ್ಕೆ ಸ್ವೀಡನ್ ಎದುರಾಳಿಯಾಗಲಿದೆ.

     ಅಲಿ ದಾಖಲೆ ಹಿಂದಿಕ್ಕಲು ರೊನಾಲ್ಡೊ ಯೋಜನೆ: ಸ್ವೀಡನ್ ವಿರುದ್ಧ ಅವಳಿ ಗೋಲು ಜಮೆ ಮಾಡಿ ಅಂತರ್‌ರಾಷ್ಟ್ರೀಯ ಗೋಲುಗಳ ಸಂಖ್ಯೆಯನ್ನು 101ಕ್ಕೆ ಏರಿಸಿರುವ 35ರ ಹರೆಯದ ರೊನಾಲ್ಡೊ ಇರಾನ್ ತಂಡದ ಅಲಿ ಡೇಯಿ 109 ಅಂತರ್‌ರಾಷ್ಟ್ರೀಯ ಗೋಲುಗಳ ದಾಖಲೆಯನ್ನು ಮುರಿಯುವ ಯೋಜನೆಯಲ್ಲಿದ್ದಾರೆ. 2004ರಲ್ಲಿ ಪೋರ್ಚುಗಲ್ ತಂಡದ ಪರ ಚೊಚ್ಚಲ ಪಂದ್ಯವನ್ನಾಡಿದ್ದ ರೊನಾಲ್ಡೊ ಇದೀಗ 165ನೇ ಪಂದ್ಯದಲ್ಲಿ 101 ಗೋಲುಗಳ ದಾಖಲೆಯನ್ನು ತಲುಪಿದರು.

ಗಾಯದಿಂದ ಶನಿವಾರ ಕ್ರೊಯೇಷಿಯಾ ವಿರುದ್ಧದ ಪಂದ್ಯದಲ್ಲಿ ರೊನಾಲ್ಡೊ ಆಡಿರಲಿಲ್ಲ. ‘‘ನಾನು 100 ಗೋಲುಗಳ ಈ ಮೈಲಿಗಲ್ಲನ್ನು ಮುಟ್ಟುವಲ್ಲಿ ಯಶಸ್ವಿಯಾಗಿದ್ದೇನೆ. ಮುಂದೆ ದಾಖಲೆ ನಿರ್ಮಿಸಲು ಯತ್ನಿಸುವೆನು. ಇದು ಹಂತ ಹಂತವಾಗಿ. ದಾಖಲೆಗಳು ಸ್ವಾಭಾವಿಕ ರೀತಿಯಲ್ಲಿ ಬರುತ್ತವೆ ಎಂದು ನಾನು ನಂಬಿದ್ದೇನೆ’’ ಎಂದು ರೊನಾಲ್ಡೊ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News