×
Ad

ಕೋವಿಡ್ ಸಾವಿನ ಪ್ರಮಾಣ ಶೇ.1ಕ್ಕಿಂತ ಕೆಳಗಿಳಿಸುವ ಗುರಿ: ಸಚಿವ ಸುಧಾಕರ್

Update: 2020-09-10 21:57 IST

ಬೆಂಗಳೂರು, ಸೆ.10: ರಾಜ್ಯದಲ್ಲಿ ಕೋವಿಡ್ ಸಾವಿನ ಪ್ರಮಾಣ ಶೇ. 1.62 ರಷ್ಟಿದ್ದು, ಮುಂದಿನ ದಿನಗಳಲ್ಲಿ ಈ ಪ್ರಮಾಣವನ್ನು ಶೇ.1 ಕ್ಕಿಂತ ಕೆಳಗಿಳಿಸುವ ಗುರಿ ಹೊಂದಿದ್ದೇವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ.

ರಾಜೀವ್‍ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ವತಿಯಿಂದ ಗುರುವಾರ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸರ್ವಪಲ್ಲಿ ರಾಧಾಕೃಷ್ಣನ್‍ರ ಜನ್ಮದಿನವನ್ನು ಪ್ರತಿ ವರ್ಷ ಶಿಕ್ಷಕರ ದಿನವನ್ನಾಗಿ ಆಚರಿಸುತ್ತೇವೆ. ಮಕ್ಕಳೊಂದಿಗೆ ಇವರು ಹೊಂದಿದ್ದ ಅವಿನಾಭಾವ ಸಂಬಂಧವೇ ಇವರ ಶ್ರೇಷ್ಠತೆಗೆ ಕಾರಣವಾಗಿದೆ. ಎಲ್ಲ ಕಾಲಕ್ಕೂ ಶಿಕ್ಷಕರಿಗೆ ಇವರೇ ಮಾದರಿ ಎಂದು ಬಣ್ಣಿಸಿದರು.

ಶಿಕ್ಷಕರು ಮಕ್ಕಳ ಭವಿಷ್ಯ ರೂಪಿಸುವಲ್ಲಿ ತಂದೆ ತಾಯಿಗಿಂತ ದೊಡ್ಡ ಜವಾಬ್ದಾರಿ ನಿಭಾಯಿಸ ಬೇಕಾಗುತ್ತದೆ. ಮಕ್ಕಳಿಗೆ ಕೇವಲ ಪಠ್ಯದಲ್ಲಿನ ಶಿಕ್ಷಣ ಕೊಡುವುದಷ್ಟೇ ಶಿಕ್ಷಕರ ಜವಾಬ್ದಾರಿ ಅಲ್ಲ. ಮಕ್ಕಳನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಗುಣ, ಸಂಸ್ಕಾರ ನೀಡುವುದು ಅವರ ಜವಾಬ್ದಾರಿ. ನಿಮ್ಮ ನಡೆ, ವಿದ್ಯಾರ್ಥಿಗಳಲ್ಲಿ ಪ್ರತಿಬಿಂಬಿಸಿದಾಗ ಮಾತ್ರ ನಿಮ್ಮ ವೃತ್ತಿ ಬದುಕು ಸಾರ್ಥಕವಾಗಲು ಸಾಧ್ಯ ಎಂದರು.

ಕೋವಿಡ್ ಪರಿಸ್ಥಿತಿ ನಿಭಾಯಿಸುವಲ್ಲಿ ರಾಜೀವ್‍ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಶಿಕ್ಷಕರು, ವಿದ್ಯಾರ್ಥಿಗಳ ಪಾತ್ರ ದೊಡ್ಡದು. ನೀವೆಲ್ಲರು ಹಗಲಿರುಳು ಶ್ರಮಿಸಿದ ಕಾರಣ ಇಂದು ರಾಜ್ಯದಲ್ಲಿ ಕೊರೋನ ನಿಯಂತ್ರಣದಲ್ಲಿದೆ. ರಾಜ್ಯದಲ್ಲಿ ಸಾವಿನ ಪ್ರಮಾಣ ಶೇ.1.62 ರಷ್ಟಿದ್ದು, ಕೆಲವೇ ದಿನಗಳಲ್ಲಿ ಇದನ್ನು ಶೇ.1 ಕ್ಕಿಂತ ಕೆಳಗಿಸುವ ಗುರಿ ಹೊಂದಿದ್ದೇವೆ ಎಂದು ತಿಳಿಸಿದರು.

ವೈದ್ಯಕೀಯ ಶಿಕ್ಷಣ ಇಲಾಖೆ ಬೋಧಕ ಬೋಧಕೇತರ ಸಿಬ್ಬಂದಿಯ ಬಹುದಿನಗಳ ಬೇಡಿಕೆಯಾದ ಪಿಂಚಣಿ ಯೋಜನೆ(ಎನ್‍ಪಿಎಸ್)ಯನ್ನು ಜಾರಿಗೊಳಿಸುವ ಮೂಲಕ ಸುಮಾರು 6 ಸಾವಿರ ಸಿಬ್ಬಂದಿಗೆ ಪ್ರಯೋಜನವಾಗಿದೆ. ಜೊತೆಗೆ ಶೇ.40 ರಷ್ಟು ಶಿಷ್ಯ ವೇತನ ಹೆಚ್ಚಿಸುವುದು ಸೇರಿದಂತೆ ಕಳೆದ ಆರು ತಿಂಗಳಲ್ಲಿ ವೈದ್ಯ ಸಮೂಹಕ್ಕೆ ನಮ್ಮ ಸರಕಾರ ಸಾಕಷ್ಟು ಕೊಡುಗೆ ನೀಡಿದೆ. ಆರ್ಥಿಕ ದುಸ್ಥಿತಿಯಲ್ಲೂ ನಮ್ಮ ಸರಕಾರ ವೈದ್ಯರ ನೆರವಿಗೆ ನಿಂತಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News