ಬ್ಯಾಂಕಿಂಗ್ ವಂಚನೆ ತಡೆಗೆ ಏಕಗವಾಕ್ಷಿ ಪದ್ಧತಿ ಜಾರಿಗೆ: ಗೃಹ ಸಚಿವ ಬೊಮ್ಮಾಯಿ

Update: 2020-09-10 17:03 GMT

ಬೆಂಗಳೂರು, ಸೆ. 10: ಬ್ಯಾಂಕಿಂಗ್ ವಂಚನೆ ತಡೆಗಟ್ಟಲು ಏಕಗಾವಾಕ್ಷಿ ಪದ್ಧತಿ ಜಾರಿಗೊಳಿಸಲು ಉದ್ದೇಶಿಸಲಾಗಿದೆ. ಅಲ್ಲದೆ, ಈ ಸಂಬಂಧ ವಾಟ್ಸ್ ಆಪ್ ಮೂಲಕವೇ ದೂರು ದಾಖಲಿಸುವುದಲ್ಲದೆ, ಸಮನ್ವಯ ಸಮಿತಿ ರಚನೆ ಮಾಡಲು ತೀರ್ಮಾನಿಸಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಇಂದಿಲ್ಲಿ ಹೇಳಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಬ್ಯಾಂಕಿಂಗ್ ಕ್ಷೇತ್ರದ ಮುಖ್ಯಸ್ಥರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಎಲ್ಲವೂ ಡಿಜಿಟಲ್ ಆಗಿದೆ. ಹಾಗಾಗಿ ಡಿಜಿಟಲ್ ಬ್ಯಾಂಕಿಂಗ್ ವಂಚನೆ, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನಕಲಿ ಕಸ್ಟಮರ್ ಕೇರ್ ಕರೆ ತಡೆಗಟ್ಟಲು ಕ್ರಮ ವಹಿಸಲಾಗುವುದು ಎಂದರು.

ಡಿಜಿಟಲ್ ವಂಚನೆಗೆ ಒಳಗಾದವರು ವಾಟ್ಸ್ ಆಪ್ ಮೂಲಕವೇ ಸಂದೇಶ ಕಳುಹಿಸುವ ಮೂಲಕ ದೂರು ದಾಖಲಿಸಬಹುದು. ಇದಕ್ಕಾಗಿ ಶೀಘ್ರದಲ್ಲೆ ವಾಟ್ಸ್ ಅಪ್ ಸಂಖ್ಯೆಯನ್ನು ನೀಡಲಾಗುವುದು ಎಂದ ಅವರು, ಜನರ ಹಣ ಬ್ಯಾಂಕ್ ಖಾತೆಯಲ್ಲಿ ಸುರಕ್ಷಿತವಾಗಿರಬೇಕು. ಈ ಕಾರಣಕ್ಕೆ ಬ್ಯಾಂಕ್‍ನಿಂದ ಬ್ಯಾಂಕ್, ಬ್ಯಾಂಕ್‍ನಿಂದ ಗ್ರಾಹಕರಿಗೆ ಮಾಹಿತಿ ಪರಸ್ಪರ ಹಂಚಿಕೆ ಆಗಬೇಕಿದೆ ಎಂದು ತಿಳಿಸಿದರು.

ಬ್ಯಾಂಕ್‍ಗಳ ಡಿಜಿಟಲೀಕರಣಗೊಂಡ ನಂತರ ಜನರಿಗೆ ವಂಚನೆ, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ನಲ್ಲಿಯೂ ವಂಚನೆ ಮಾಡುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಸರಕಾರದ ಖಾತೆಗಳಿಂದ ಹಣವನ್ನು ಲಪಟಾಯಿಸಲಾಗುತ್ತಿದೆ ಎಂದ ಅವರು, ಈ ಬಗ್ಗೆ ಎಲ್ಲರೂ ಎಚ್ಚರ ವಹಿಸಬೇಕಿದೆ. ಇಂತಹ ಪ್ರಕರಣಗಳ ತಡೆಗೆ ಸಮಾಲೋಚನೆ ನಡೆಸಲಾಗಿದೆ ಎಂದು ಅವರು ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿಯೂ ಅಪರಾಧ ಹೆಚ್ಚುತ್ತಿದೆ. ಕ್ರೆಡಿಟ್, ಡೆಬಿಟ್ ಕಾರ್ಡ್ ಗಳನ್ನು ನಕಲಿ ಮಾಡಿ ಹಣ ಲಪಟಾಯಿಸುವುದು, ಖಾತೆಗಳಲ್ಲಿನ ಹಣ ಲಪಟಾಯಿಸಲಾಗುತ್ತಿದೆ. ಗ್ರಾಹಕರು ಹಾಗೂ ಬ್ಯಾಂಕಿನ ಸಿಬ್ಬಂದಿ ಮಾಹಿತಿ ಸೋರಿಕೆಯ ಬಗ್ಗೆ ದೂರುಗಳಿವೆ. ಆ ಹಿನ್ನೆಲೆಯಲ್ಲಿ ಬ್ಯಾಂಕಿಂಗ್ ವಲಯದಲ್ಲಿ ಅಪರಾಧ ಕೃತ್ಯಗಳ ತಡೆಗೆ ಸರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ ಎಂದರು.

ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹಾಗೂ ಬ್ಯಾಂಕಿಂಗ್ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಗೃಹ ಹಾಗೂ ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಬ್ಯಾಂಕಿಂಗ್ ವಲಯದಲ್ಲಿ ವಂಚನೆ ಪ್ರಕರಣಗಳು ಹೆಚ್ಚುತ್ತಿದ್ದು, ಜನಸಾಮಾನ್ಯರ ಎಟಿಎಂ ಕಾರ್ಡ್ ಗಳು, ಖಾತೆಗಳು ಸುರಕ್ಷಿತವಾಗಿರಬೇಕು. ಜನರ ನೆರವಿಗಾಗಿ ಸೈಬರ್ ಅಪರಾಧ ತಡೆಗಟ್ಟಲು ಸರಕಾರ ಕ್ರಮ ವಹಿಸಿದೆ. ಬ್ಯಾಂಕುಗಳು ಕೆಲ ನಿಯಮಗಳನ್ನು ಆಳವಡಿಸಿಕೊಳ್ಳುವ ಮೂಲಕ ಬ್ಯಾಂಕಿಂಗ್ ಕ್ಷೇತ್ರದಲ್ಲಿನ ಮೋಸಕ್ಕೆ ಕಡಿವಾಣ ಹಾಕಬೇಕಿದೆ. ಆ ನಿಟ್ಟಿನಲ್ಲಿ ಗೃಹ ಇಲಾಖೆ ಎಲ್ಲರ ಸಹಕಾರ ಅಗತ್ಯವಿದೆ
-ಬಸವರಾಜ ಬೊಮ್ಮಾಯಿ, ಗೃಹ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News