ಕೊಳಚೆ ನೀರು ಮೇಲ್ಸೇತುವೆ ಘಟಕ ಯಡಿಯೂರಪ್ಪರಿಂದ ಲೋಕಾರ್ಪಣೆ

Update: 2020-09-10 18:25 GMT

ಬೆಂಗಳೂರು, ಸೆ.10: ತ್ಯಾಜ್ಯ ನೀರನ್ನು ವೈಜ್ಞಾನಿಕ ರೀತಿಯಲ್ಲಿ ಸಾಗಿಸಿ, ಅದನ್ನು ಸಮರ್ಪಕವಾಗಿ ಸಂಸ್ಕರಿಸಿ ಮರುಬಳಕೆ ಮಾಡಲು ಕೊಳಚೆ ನೀರು ಮೇಲ್ಸೇತುವೆ ಘಟಕ ಸಹಾಯವಾಗಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್‍.ಯಡಿಯೂರಪ್ಪ ಹೇಳಿದ್ದಾರೆ.

ಗುರುವಾರ ಕೋರಮಂಗಲದ ರಾಷ್ಟ್ರೀಯ ಕ್ರೀಡಾಗ್ರಾಮದ ಬಳಿ ಜಲಮಂಡಳಿ ನಿರ್ಮಿಸಿರುವ ಕೊಳಚೆ ನೀರು ಮೇಲೆತ್ತುವ ಘಟಕವನ್ನು ಆನ್‍ಲೈನ್‍ನಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.

ಕೋರಮಂಗಲ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಉತ್ಪತ್ತಿಯಾಗುವ ಕೊಳಚೆ ನೀರಿನ ಪೈಕಿ, ದಿನಕ್ಕೆ 21 ಕೋಟಿ ಲೀಟರ್ ನೀರನ್ನು ಈ ಘಟಕದ ಮೂಲಕ ಮೇಲೆತ್ತಲಾಗುತ್ತದೆ. ಅಲ್ಲಿಂದ ಕೊಳವೆ ಮಾರ್ಗದ ಮೂಲಕ 15 ಕೋಟಿ ಲೀಟರ್ ಸಾಮರ್ಥ್ಯದ ತ್ಯಾಜ್ಯ ನೀರು ಸಂಸ್ಕರಣ ಘಟಕಕ್ಕೆ ಈ ನೀರನ್ನು ಹರಿಸಲಾಗುತ್ತದೆ ಎಂದರು.

ನೀರು ಸಂಸ್ಕರಣೆ ಘಟಕದಿಂದ ಶುದ್ಧೀಕರಿಸಿದ ನೀರನ್ನು ಆನೇಕಲ್ ಮತ್ತು ಹೊಸಕೋಟೆ ತಾಲ್ಲೂಕಿನ ಕೆರೆಗಳಿಗೆ ತುಂಬಿಸಿ, ಅವುಗಳನ್ನು ಪುನರುಜ್ಜೀವನಗೊಳಿಸಲಾಗುತ್ತದೆ. ನೀರಿನ ಅಭಾವ ಎದುರಿಸುತ್ತಿರುವ ಈ ಪ್ರದೇಶಕ್ಕೆ ಶಾಶ್ವತ ನೀರಾವರಿ ಸೌಲಭ್ಯ ಒದಗಿಸುವ ಉದ್ದೇಶವಿದೆ ಎಂದು ಹೇಳಿದರು.

ಕೊಳಚೆ ನೀರು ಕೆರೆ-ಕಟ್ಟೆಗಳಿಗೆ ಸೇರಿ ಮಾಲಿನ್ಯವಾಗುವುದನ್ನು ತಡೆಗಟ್ಟಿ ಜಲಮರುಪೂರಣ, ಜಲ ಮರು ಬಳಕೆಯಾಗುವುದರೊಂದಿಗೆ ಪ್ರಕೃತಿಯ ಸಂರಕ್ಷಣೆಯಾಗುತ್ತದೆ ಎಂದು ಹೇಳಿದರು.

ಶಾಸಕ ರಾಮಲಿಂಗಾರೆಡ್ಡಿ ಮಾತನಾಡಿ, ಕೆ.ಆರ್. ಮಾರುಕಟ್ಟೆಯಿಂದ ಬೆಳ್ಳಂದೂರು ಮಾರ್ಗದಲ್ಲಿ ಒಳಚರಂಡಿ ನೀರುತುಂಬಿ ರಸ್ತೆಯ ಮೇಲೆ ಹರಿಯುತ್ತಿದ್ದರಿಂದ ಅಲ್ಲಿನ ಜನರಿಗೆ ತೊಂದರೆಯಾಗಿತ್ತು. ಈ ಘಟಕದ ಮೂಲಕ ನೀರು ಮೇಲೆತ್ತುವುದರಿಂದ ಜನರಿಗೆ ಸಮಸ್ಯೆ ಆಗುವುದಿಲ್ಲ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಚಿವರಾದ ಬೈರತಿ ಬಸವರಾಜ್, ಎಸ್.ಟಿ. ಸೋಮಶೇಖರ್, ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ್‍ ಭಾಸ್ಕರ್, ಜಲಮಂಡಳಿ ಅಧ್ಯಕ್ಷ ಎನ್. ಜಯರಾಂ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News