ಕೊಲೆ ಆರೋಪಿಗಳಿಗೆ ಗುಂಡಿಕ್ಕಿ ಬಂಧಿಸಿದ ಪೊಲೀಸರು

Update: 2020-09-11 11:49 GMT

ಬೆಂಗಳೂರು, ಸೆ.11: ಕೊಲೆ ಆರೋಪ ಸಂಬಂಧ ಇಬ್ಬರು ಆರೋಪಿಗಳಿಗೆ ಕಾಲಿಗೆ ಪಿಸ್ತೂಲಿನಿಂದ ಗುಂಡು ಹೊಡೆದು ಬಂಧಿಸುವಲ್ಲಿ ಇಲ್ಲಿನ ದೊಡ್ಡಬಳ್ಳಾಪುರ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿಸಲು ತೆರಳಿದ್ದ ವೇಳೆ ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದಾಗ ಯಲಹಂಕ ಮೂಲದ ಆರೋಪಿಗಳ ಮೇಲೆ ಪೊಲೀಸರು ಗುಂಡು ಹಾರಿಸಿ ಬಂಧಿಸಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.

ದೊಡ್ಡಬೆಳವಂಗಲ ಪೊಲೀಸ್‍ಠಾಣೆ ವ್ಯಾಪ್ತಿಯ ಕೆಸ್ತೂರು ಬಳಿ ಗುರುವಾರ ಸಂಜೆ ಈ ಘಟನೆ ನಡೆದಿದ್ದು ಆರೋಪಿಗಳಿಂದ ಹಲ್ಲೆಗೊಳಗಾಗಿರುವ ರಾಜಾನುಕುಂಟೆ ಸಬ್‍ಇನ್‍ಸ್ಪೆಕ್ಟರ್ ಶಂಕರಪ್ಪ ಮತ್ತು ದೊಡ್ಡಬೆಳವಂಗಲ ಪೇದೆ ಹುಸೇನ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಳೆದ ಆ.16ರಂದು ಆರೋಪಿಗಳು ಹುಲಿಕುಂಟೆ ಗ್ರಾಮದ ತೋಟದ  ಮನೆಯಲ್ಲಿ ಕುಡಿಯಲು ನೀರು ಕೇಳುವ ನೆಪದಲ್ಲಿ ನುಗ್ಗಿ ಮಂಜುನಾಥ್ (21) ಎನ್ನುವ ಯುವಕನ ಕೊಲೆ ಮಾಡಿದ್ದರು. ಈ ಪ್ರಕರಣ ಸಂಬಂಧ ಸರ್ಕಲ್ ಇನ್‍ಸ್ಪೆಕ್ಟರ್ ರಾಘವ ಎಸ್.ಗೌಡ ಹಾಗೂ ದೊಡ್ಡಬೆಳವಂಗಲ ಸಬ್‍ಇನ್‍ಸ್ಪೆಕ್ಟರ್ ಮಂಜೇಗೌಡ ನೇತೃತ್ವದ ಪೊಲೀಸರ ತಂಡ ಕೆಸ್ತೂರು ಬಳಿ ಆರೋಪಿಗಳನ್ನು ಬಂಧಿಸಲು ತೆರಳಿದ್ದರು.

ಈ ವೇಳೆ ಆರೋಪಿಗಳಾದ ಹೇಮಂತ್ ಮತ್ತು ಸೋನು ಎಂಬುವವರು ರಾಜಾನುಕುಂಟೆ ಸಬ್‍ಇನ್‍ಸ್ಪೆಕ್ಟರ್ ಶಂಕರಪ್ಪ ಮತ್ತು ದೊಡ್ಡಬೆಳವಂಗಲ ಪೊಲೀಸ್ ಕಾನ್‍ಸ್ಟೇಬಲ್ ಹುಸೇನ್ ಅವರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದಾಗ ರಾಘವ ಎಸ್.ಗೌಡ ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News