ಬೆಂಗಳೂರು: ಪೂರ್ಣ ಪ್ರಮಾಣದಲ್ಲಿ ಮೆಟ್ರೋ ರೈಲುಗಳ ಸಂಚಾರ

Update: 2020-09-11 11:58 GMT

ಬೆಂಗಳೂರು, ಸೆ.11: ಕೊರೋನ ಹಿನ್ನೆಲೆಯಲ್ಲಿ ಕಳೆದ ಐದು ತಿಂಗಳಿನಿಂದ ಸ್ಥಗಿತಗೊಂಡಿದ್ದ ನಮ್ಮ ಮೆಟ್ರೋ ಸೇವೆಗೆ ಅಧಿಕೃತವಾಗಿ ಚಾಲನೆ ಸಿಕ್ಕಿದ್ದು, ನಗರದಲ್ಲಿ ಎರಡೂ ಮಾರ್ಗಗಳಲ್ಲಿ ಪೂರ್ಣ ಪ್ರಮಾಣದಲ್ಲಿ ರೈಲುಗಳು ಸಂಚಾರ ನಡೆಸಲಿವೆ.

ನೇರಳ ಮಾರ್ಗದಲ್ಲಿ ಮೊದಲಿಗೆ ಸಂಚಾರಕ್ಕೆ ಅವಕಾಶ ನೀಡಲಾಯಿತು. ಬಳಿಕ ಅದನ್ನು ಹಸಿರು ಮಾರ್ಗಕ್ಕೂ ವಿಸ್ತರಿಸಲಾಯಿತು ಹಾಗೂ ಬೆಳಗ್ಗೆ ಹಾಗೂ ಸಂಜೆಯಷ್ಟೇ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು. ಇದೀಗ ಸೆ.11 ರಿಂದ ಎರಡೂ ಮಾರ್ಗಗಳಲ್ಲಿ ಬೆಳಗ್ಗೆ 7ರಿಂದ ರಾತ್ರಿ 9ರವರೆಗೆ ರೈಲುಗಳು ಓಡಾಟ ನಡೆಸಲಿವೆ.

ಜನದಟ್ಟಣೆಯ ಅವಧಿಯಲ್ಲಿ ಪ್ರತಿ 5 ನಿಮಿಷಕ್ಕೆ ಒಂದರಂತೆ ಹಾಗೂ ಬೇರೆ ಸಮಯದಲ್ಲಿ 10 ನಿಮಿಷಗಳ ಅಂತರದಲ್ಲಿ ನಮ್ಮ ಮೆಟ್ರೋ ಸಂಚಾರ ನಡೆಸಲಿದೆ. ಎಲ್ಲ ಪ್ರಯಾಣಿಕರು ಕಡ್ಡಾಯವಾಗಿ 2 ಮೀಟರ್ ದೂರ ಅಂತರ ಕಾಯ್ದುಕೊಳ್ಳಬೇಕು. 50ಕ್ಕೂ ಹೆಚ್ಚು ಪ್ರಯಾಣಿಕರು ನಿಲ್ದಾಣದಲ್ಲಿ ನಿಲ್ಲುವಂತಿಲ್ಲ. ಆರು ಬೋಗಿ ರೈಲಿನಲ್ಲಿ 400 ಪ್ರಯಾಣಿಕರಿಗೆ ಅವಕಾಶ ಕಲ್ಪಿಸಲಾಗಿದೆ.

ರೈಲಿನಲ್ಲಿ ಗುರುತಿಸಿರುವ ಆಸನಗಳಲ್ಲಿ ಕೂರಲು ಮಾತ್ರ ಅವಕಾಶವಿದೆ. ಇನ್ನು ಈಗಲೂ ಟೋಕನ್ ಮಾರಾಟವನ್ನು ನಿಷೇಧಿಸಲಾಗಿದ್ದು, ಪ್ರಯಾಣಿಕರು ಸ್ಮಾರ್ಟ್ ಕಾರ್ಡ್ ಗಳನ್ನು ಮಾತ್ರ ಬಳಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News