ಬಿಬಿಎಂಪಿ ಆಡಳಿತಾಧಿಕಾರಿಯಾಗಿ ಗೌರವ ಗುಪ್ತ ಅಧಿಕಾರ ಸ್ವೀಕಾರ

Update: 2020-09-11 12:00 GMT

ಬೆಂಗಳೂರು, ಸೆ.11: ಪಾಲಿಕೆ ಸದಸ್ಯರ ಅವಧಿ ಮುಕ್ತಾಯವಾದ ಬಳಿಕ ಸರಕಾರದ ಆದೇಶದಂತೆ ಬಿಬಿಎಂಪಿ ಆಡಳಿತಾಧಿಕಾರಿಯಾಗಿ ಐಎಎಸ್ ಹಿರಿಯ ಅಧಿಕಾರಿ ಗೌರವ ಗುಪ್ತ ಅಧಿಕಾರ ಸ್ವೀಕರಿಸಿದರು. ಗೌರವ ಗುಪ್ತ ಅವರನ್ನು ಆಯುಕ್ತ ಎನ್. ಮಂಜುನಾಥ ಪ್ರಸಾದ್ ಬರ ಮಾಡಿಕೊಂಡರು.

ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಆಡಳಿತಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿದ ಗೌರವ್ ಗುಪ್ತ, ಕೋವಿಡ್ ವಿಷಯವನ್ನು ಪಾಲಿಕೆ ಗಂಭೀರವಾಗಿ ಪರಿಗಣಿಸಿ ನಿಯಂತ್ರಣಕ್ಕಾಗಿ ಸಾಕಷ್ಟು ಕೆಲಸ ಮಾಡಿದೆ. ಆಗಿರುವ ಕೆಲಸದ ಬಗ್ಗೆ ಸಮೀಕ್ಷೆ ನಡೆಸಿ ಮುಂದೆ ಆಗಬೇಕಿರುವ ಕೆಲಸಗಳ ಬಗ್ಗೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಜತೆ ಚರ್ಚೆ ನಡೆಸುತ್ತೇನೆ ಎಂದರು.

ಸರಕಾರದ ಆದೇಶದ ನಿಮಿತ್ತ ಈಗಾಗಲೇ ಅಧಿಕಾರ ಸ್ವೀಕರಿಸಿದ್ದೇನೆ. ಆಯುಕ್ತರು ಮತ್ತು ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ಮಾಡಿ, ಕೋವಿಡ್, ಮಳೆ ಪರಿಸ್ಥಿತಿಯ ಬಗ್ಗೆ ಚರ್ಚೆ ಮಾಡಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ರಾಜ್ಯ ಸರಕಾರದ ನೆರವು ಇರಲಿದೆ. ಹಾಗೆಯೇ ಬಿಬಿಎಂಪಿಯನ್ನು ಆರ್ಥಿಕವಾಗಿ ಸದೃಢಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಆದಾಯದ ಮೂಲಗಳನ್ನು ಬಲಪಡಿಸಿ, ಕ್ರೋಡೀಕರಣಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು. ಆಸ್ತಿ ತೆರಿಗೆ ಹೆಚ್ಚಳದ ಬಗ್ಗೆಯೂ ಸರಕಾರದ ಗಮನಕ್ಕೆ ಈಗಾಗಲೇ ಪ್ರಸ್ತಾವನೆ ಹೋಗಿದ್ದರೆ ಅದನ್ನೂ ಸಮರ್ಪಕವಾಗಿ ಕ್ರಮ ಕೈಗೊಳ್ಳಲಾಗುವುದು ಎಂದರು.

ವಾರ್ಡ್ ಮಟ್ಟದಲ್ಲಿ ಜನರೊಟ್ಟಿಗಿದ್ದು ಕೆಲಸ ಮಾಡುತ್ತಿದ್ದ ಪಾಲಿಕೆ ಸದಸ್ಯರ ಅವಧಿ ಮುಗಿದಿದ್ದರೂ ಎಲ್ಲರ ಸಹಕಾರ ಪಡೆದು ಕಾರ್ಯನಿರ್ವಹಿಸುತ್ತೇವೆ. ಜನಪರವಾದ ಆಡಳಿತಕ್ಕೆ ಜನರ ಮತ್ತು ಜನಪ್ರತಿನಿಧಿಗಳ ಸಹಕಾರ ಮುಖ್ಯ ಎಂದು ಹೇಳಿದರು.

ಚುನಾಯಿತ ಜನಪ್ರತಿನಿಧಿಗಳ ಅಧಿಕಾರ ಅವಧಿ ಮುಕ್ತಾಯ ಆದ ಬಳಿಕ ಎಲ್ಲಾ ಹಂತದ ಅಧಿಕಾರಿಗಳ ಜವಾಬ್ದಾರಿ ಹೆಚ್ಚಾಗಿದೆ. ಪ್ರತಿಯೊಬ್ಬರು, ಜನರ ಸಂಪರ್ಕದಲ್ಲಿರಬೇಕು, ಜನರಿಗೆ ಏನೇ ಕುಂದುಕೊರತೆಗಳಿದ್ದರೂ, ಬಗೆಹರಿಸಲು, ಸಮಸ್ಯೆಗಳಿಗೆ ಸ್ಪಂದಿಸಲು ಪ್ರಯತ್ನಿಸಬೇಕು. ಕೋವಿಡ್ ನಿಯಂತ್ರಣಕ್ಕೆ ರಾಜ್ಯ ಸರಕಾರ ಏನೆಲ್ಲಾ ಮಾರ್ಗಸೂಚಿ, ಟಾರ್ಗೆಟ್‍ಗಳನ್ನು ನೀಡಿದೆಯೋ ಅದನ್ನು ಪಾಲಿಸಲಾಗುವುದು ಎಂದು ತಿಳಿಸಿದರು.

ಜನಪ್ರತಿನಿಧಿಗಳ ಅಧಿಕಾರ ಅವಧಿ ಮುಗಿದಿರುವುದರಿಂದ ಮುಂದಿನ ಚುನಾವಣೆವರೆಗೆ ಮಾತ್ರ ಸ್ವಲ್ಪ ಸಮಯದ ಅವಧಿ ಇದೆ. ಆದುದರಿಂದ ಯಾವುದೇ ಹೊಸ ಯೋಜನೆ ಇಲ್ಲದೆ ಇರುವ ಯೋಜನೆಗಳನ್ನೇ ಸಮರ್ಪಕವಾಗಿ ಮುಂದುವರಿಸಲಾಗುವುದು. ಆಡಳಿತಾಧಿಕಾರಿ ಸೇರಿದಂತೆ ಪ್ರತಿಯೊಬ್ಬ ಅಧಿಕಾರಿಗಳೂ ಜನರ ಸೇವೆಗೆ ಲಭ್ಯವಾಗಬೇಕು. ಅವರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಆನ್‍ಲೈನ್ ಮೂಲಕವೂ ಸ್ಪಂದಿಸಲಾಗುವುದು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News