ಸ್ಯಾಂಡಲ್‍ವುಡ್‍ ಡ್ರಗ್ಸ್ ದಂಧೆ ಪ್ರಕರಣ: ರಾಗಿಣಿ, ಸಂಜನಾ ಸೇರಿ ಹಲವರು ಮತ್ತೆ ಪೊಲೀಸ್ ಕಸ್ಟಡಿಗೆ

Update: 2020-09-11 14:36 GMT

ಬೆಂಗಳೂರು, ಸೆ.11: ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ ಸಂಬಂಧ ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಸೇರಿ ಆರು ಜನ ಆರೋಪಿಗಳನ್ನು ಮತ್ತೆ ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

ಪ್ರಕರಣ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು, ಶುಕ್ರವಾರ ಒಂದನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶರ ಎದುರು ವಿಡಿಯೋ ಕಾನ್ಫರೆನ್ಸ್ ಮೂಲಕ ಆರು ಆರೋಪಿಗಳನ್ನು ಹಾಜರುಪಡಿಸಿದರು.

ಈ ವೇಳೆ ಸಿಸಿಬಿ ಪರ ವಕೀಲರು, ಆರೋಪಿಗಳ ವಿಚಾರಣೆ ಅವಶ್ಯಕತೆ ಇರುವ ಹಿನ್ನೆಲೆ ಮತ್ತೆ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದರು. ಹಾಗೆ ವಿಚಾರಣೆಗೆ ಕೆಲ ಆರೋಪಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ. ಹೀಗಾಗಿ ಮತ್ತೆ ವಿಚಾರಣೆ ನಡೆಸಬೇಕೆಂದು ಮನವಿ ಮಾಡಿ ತನಿಖಾ ಪ್ರಗತಿಯ ವರದಿಯನ್ನು ಸಲ್ಲಿಸಿದರು.

ಈ ವೇಳೆ ಇಬ್ಬರು ಆರೋಪಿಗಳ ಪರ ವಕೀಲರು, ಇತರರ ಹೇಳಿಕೆ ಆಧಾರದ ಮೇರೆಗೆ ಸಿಸಿಬಿ ಪೊಲೀಸರು ನಟಿಯರನ್ನ ಬಂಧಿಸಿದ್ದಾರೆ. ದಾಳಿ ವೇಳೆ ಇಬ್ಬರಿಂದ ಯಾವುದೇ ರೀತಿಯಾದ ಮಾದಕ ವಸ್ತು ದೊರೆತಿಲ್ಲ. ಮತ್ತೆ ಸಿಸಿಬಿ ಕಸ್ಟಡಿಗೆ ಕೊಡುವ ಅವಶ್ಯಕತೆ ಇಲ್ಲ. ನ್ಯಾಯಾಂಗ ಬಂಧನಕ್ಕೆ ಕೊಡುವ ಅವಶ್ಯಕತೆ ಇಲ್ಲ ಎಂದು ವಾದಿಸಿದರು ಎಂದು ತಿಳಿದುಬಂದಿದೆ.

ಇಬ್ಬರ ವಾದ ಆಲಿಸಿ ನಟಿ ರಾಗಿಣಿ ಮತ್ತು ನಟಿ ಸಂಜನಾರನ್ನು ಮತ್ತೆ ಮೂರು ದಿನಗಳ ಕಾಲ ಸಿಸಿಬಿ ಕಸ್ಟಡಿಗೆ ನೀಡಿ ನ್ಯಾಯಾಧೀಶರು ಆದೇಶಿಸಿದರು. ಇದರ ಅನ್ವಯ ನಟಿಯರಾದ ರಾಗಿಣಿ, ಸಂಜನಾ ಹಾಗೂ ವಿರೇನ್ ಖನ್ನಾ, ಪ್ರಶಾಂತ್ ರಂಕ, ಲೂಮ್ ಪೆಪ್ಪರ್ ಮತ್ತು ರಾಹುಲ್‍ನನ್ನು ಮತ್ತೆ ಸಿಸಿಬಿ ವಿಚಾರಣೆ ನಡೆಸಲಿದ್ದು, ಸದ್ಯ ನಟಿಯರನ್ನು ಪುನಃ ಮಹಿಳಾ ಸ್ವಾಂತನ ಕೇಂದ್ರದಲ್ಲಿಡಲಾಗಿದೆ.

ಪ್ರಶಾಂತ್ ಸಂಬರಗಿ ವಿರುದ್ಧ ಎಫ್‍ಐಆರ್ ದಾಖಲು

ಸ್ಯಾಂಡಲ್ ವುಡ್ ಡ್ರಗ್ಸ್ ದಂಧೆ ಪ್ರಕರಣ ಸಂಬಂಧ ಶಾಸಕ ಝಮೀರ್ ಅಹ್ಮದ್ ಖಾನ್ ಬಗ್ಗೆ ಅಪಪ್ರಚಾರ ಮಾಡಿದ್ದ ಹಾಗೂ ಗೌರವಕ್ಕೆ ಧಕ್ಕೆ ತಂದ ಆರೋಪದಡಿ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ವಿರುದ್ಧ ಚಾಮರಾಜಪೇಟೆಯಲ್ಲಿ ಎಫ್ಐಆರ್ ದಾಖಲಾಗಿದೆ.

ದೂರಿನ ಆಧಾರದ ಮೇರೆಗೆ ಪೊಲೀಸರು ನ್ಯಾಯಾಲಯದ ಅನುಮತಿ ಪಡೆದು ಐಪಿಸಿ ಸೆಕ್ಷನ್120 ಒಳಸಂಚು, 504 ನಕಲಿ ದಾಖಲೆ, 506 ಬೆದರಿಕೆ, 463, 465 ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಪ್ರಶಾಂತ್ ಸಂಬರಗಿಗೆ ಸಿಸಿಬಿ ನೋಟಿಸ್

ಡ್ರಗ್ಸ್ ಪ್ರಕರಣ ಸಂಬಂಧ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿಗೆ ಸಿಸಿಬಿ ನೋಟಿಸ್ ಜಾರಿ ಮಾಡಿದೆ. ನಾಳೆ(ಸೆ.12) ಚಾಮರಾಜಪೇಟೆ ಬಳಿ ಇರುವ ಸಿಸಿಬಿ ಕಚೇರಿಗೆ ಬಂದು ಮಾಹಿತಿ ನೀಡುವಂತೆ ನೋಟಿಸ್‍ನಲ್ಲಿ ಸೂಚನೆ ನೀಡಿದ್ದಾರೆ.

ಪೆಡ್ಲರ್ ಸಹಚರರ ಸೆರೆ

ಪ್ರಕರಣದ ತನಿಖೆ ಚುರುಕಿನಿಂದ ಸಾಗಿದ್ದು, ಇದೀಗ ಡ್ರಗ್ಸ್ ಪೆಡ್ಲರ್ ವಿರೇನ್ ಖನ್ನಾ ಸಹಚರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಹರಿಯಾಣ ಮೂಲದ ಆದಿತ್ಯ ಅಗರವಾಲ್ ಬಂಧಿತ ಆರೋಪಿ ಎಂದು ಸಿಸಿಬಿ ತಿಳಿಸಿದ್ದು. ಈತ ಹಲವು ವರ್ಷಗಳಿಂದ ನಗರದಲ್ಲಿ ವಾಸವಾಗಿದ್ದು, ರಾಗಿಣಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ. ಅಲ್ಲದೇ ವಿರೇನ್ ಖನ್ನಾ ಸೂಚನೆಯಂತೆ ಕಾರ್ಯನಿರ್ವಹಿಸುತ್ತಿದ್ದ ಎನ್ನಲಾಗಿದೆ.

ಮಂಗಳೂರು ಮೂಲದ ಪ್ರತೀಕ್ ಶೆಟ್ಟಿ ಸೆರೆ

ಡ್ರಗ್ಸ್ ಜಾಲದ ಕುರಿತು ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು ಮಂಗಳೂರು ಮೂಲದ ಪ್ರತೀಕ್ ಶೆಟ್ಟಿ ಎಂಬಾತನನ್ನು ಬಂಧಿಸಿದ್ದಾರೆ. ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ಸಂಬಂಧ ಬಂಧಿಸಲಾಗಿದ್ದು, ಈತನನ್ನು 2018ರಲ್ಲೂ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದರು ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News