ಬೆಂಗಳೂರು ಹಿಂಸಾಚಾರ: ಸತ್ಯಶೋಧನಾ ಸಮಿತಿಯಲ್ಲಿರುವವರ ಹಿಂದಿನ ಕಹಿಸತ್ಯಗಳು!

Update: 2020-09-12 09:55 GMT

ಬೆಂಗಳೂರು: ಡಿ.ಜೆ. ಹಳ್ಳಿ ಮತ್ತು ಕೆ.ಜೆ. ಹಳ್ಳಿಯಲ್ಲಿ ನಡೆದ ಹಿಂಸಾಚಾರ ಪೂರ್ವನಿಯೋಜಿತವಾಗಿದ್ದು, ಹಿಂದೂಗಳನ್ನು ಗುರಿಯಾಗಿಸಲಾಗಿತ್ತು ಎಂದು ‘ಸಿಟಿಝನ್ಸ್ ಫಾರ್ ಡೆಮಾಕ್ರಸಿ’ ಎನ್ನುವ ಹೆಸರಿನ ಸತ್ಯಶೋಧನಾ ಸಮಿತಿಯೊಂದು ಸೆಪ್ಟೆಂಬರ್ 4ರಂದು ರಾಜ್ಯ ಸರಕಾರಕ್ಕೆ ವರದಿ ಸಲ್ಲಿಸಿತ್ತು.

ಗಲಭೆಯು ರಾಜ್ಯದ ವಿರುದ್ಧವಾಗಿತ್ತು. ಗಲಭೆಯಲ್ಲಿ ಎಸ್ ಡಿಪಿಐ ಮತ್ತು ಪಿಎಫ್ ಐ ಸಂಘಟನೆಗಳ ಪಾತ್ರವಿದೆ ಎಂದೂ ವರದಿಯಲ್ಲಿ ಆರೋಪಿಸಲಾಗಿತ್ತು. ಸರಕಾರಕ್ಕೆ ಈ ತಂಡ ವರದಿ ಸಲ್ಲಿಸಿದ ಬಳಿಕ ಈ ‘ಸತ್ಯಶೋಧನಾ ತಂಡ’ದಲ್ಲಿದ್ದವರ ಬಗ್ಗೆ ಸಂಶಯಗಳು ವ್ಯಕ್ತವಾದವು. ತಂಡದಲ್ಲಿದ್ದವರ ಹಿನ್ನೆಲೆಯು ಇದೊಂದು ‘ಸಂಘಪರಿವಾರ ಪ್ರೇರಿತ’ ವರದಿ ಎನ್ನುವುದನ್ನು ಸಾಬೀತುಪಡಿಸುತ್ತದೆ ಎನ್ನುವ ಮಾತುಗಳೂ ಕೇಳಿಬಂದವು. ದೇಶದಲ್ಲಿ ಮಾನವಹಕ್ಕುಗಳನ್ನು ರಕ್ಷಿಸಲು ಹೋರಾಟ ನಡೆಸುತ್ತಿರುವ ಸಂಘಟನೆಯಾದ ‘ಸಿಟಿಝನ್ಸ್ ಫಾರ್ ಡೆಮಾಕ್ರಸಿ’ಯ ಹೆಸರನ್ನು ಈ ತಂಡಕ್ಕೆ ಇಡಲಾಗಿದ್ದು, ಸಾಮಾಜಿಕ ಕಾರ್ಯಕರ್ತ ಮತ್ತು ಸಂಘಟನೆಯ ದಕ್ಷಿಣ ಭಾರತ ಘಟಕದ ಸಂಘಟಕ ಎಸ್. ಆರ್. ಹಿರೇಮಠ್ ಆಕ್ಷೇಪ ವ್ಯಕ್ತಪಡಿಸಿದ್ದರು.

ಈ ಸತ್ಯಶೋಧನಾ ಸಮಿತಿಯಲ್ಲಿ 12 ಸದಸ್ಯರಿದ್ದು ಅವರ ಪೈಕಿ ಕೆಲವರ ಹಿನ್ನೆಲೆ ಹೀಗಿದೆ.

1. ಎಂ ಮದನ್ ಗೋಪಾಲ್, ಮಾಜಿ ಐಎಎಸ್ ಅಧಿಕಾರಿ ಹಾಗೂ ರಾಜ್ಯ ಸರಕಾರದ ಮಾಜಿ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಈ ಸಮಿತಿಯ ಸದಸ್ಯರಲ್ಲೊಬ್ಬರು. 2018ರ ವಿಧಾನಸಭಾ ಚುನಾವಣೆಗೆ ಆಗ ರಾಜ್ಯ ಬಿಜೆಪಿ ಅಧ್ಯಕ್ಷರಾಗಿದ್ದ ಬಿ.ಎಸ್. ಯಡಿಯೂರಪ್ಪ ರಚಿಸಿದ್ದ 17 ಸದಸ್ಯರ ಬಿಜೆಪಿ ಪ್ರಣಾಳಿಕೆ ಸಮಿತಿಯಲ್ಲಿ ಇವರೂ ಒಬ್ಬರಾಗಿದ್ದರು.

2. ಎಂ. ಎನ್. ಕೃಷ್ಣಮೂರ್ತಿ, ಬೆಂಗಳೂರಿನ ಮಾಜಿ ಡಿಜಿಪಿಯಾಗಿರುವ ಇವರು ವಿವಾದಿತ ಪೌರತ್ವ ತಿದ್ದುಪಡಿ ಕಾಯಿದೆಯ ಬೆಂಬಲಿಗರಾಗಿದ್ದಾರಲ್ಲದೆ ಈ ಕುರಿತು ಪ್ರಧಾನಿಗೂ ಪತ್ರ ಬರೆದವರು.

3. ಆರ್ ರಾಜು, ನಿವೃತ್ತ ಐಎಫ್‍ಎಸ್ ಅಧಿಕಾರಿ- ಇವರು ಬಿಜೆಪಿಯಲ್ಲಿ ಸಕ್ರಿಯವಾಗಿದ್ದಾರೆ ಹಾಗೂ 2019 ಲೋಕಸಭಾ ಚುನಾವಣೆಯಲ್ಲಿ ಚಾಮರಾಜನಗರದಿಂದ ಬಿಜೆಪಿ ಆಕಾಂಕ್ಷಿಯಾಗಿದ್ದರು.

4. ಆರ್. ಕೆ. ಮಟ್ಟು- ಹಿರಿಯ ಪತ್ರಕರ್ತ, ಸ್ಪೇಡ್ ಎ ಸ್ಪೇಡ್ ಸಂಪಾದಕ ಹಾಗೂ ಸಂಘ ಪರಿವಾರಕ್ಕೆ ಹತ್ತಿರವಾಗಿರುವ ಕಾಶ್ಮೀರಿ ಹಿಂದು ಕಲ್ಚರಲ್ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷರಾಗಿರುವ ಇವರು ಎಪ್ರಿಲ್ 2019ರಲ್ಲಿ ಬಿಜೆಪಿಗೆ ಮತ ಹಾಕುವಂತೆ ದೇಶದ ಜನರಿಗೆ ಅಪೀಲು ಮಾಡುವ ಪತ್ರಕ್ಕೆ ಸಹಿ ಹಾಕಿದವರಲ್ಲಿ ಒಬ್ಬರಾಗಿದ್ದರು.

5. ಸಂತೋಷ್ ತಮ್ಮಯ್ಯ - ಹೊಸದಿಗಂತದ ಪತ್ರಕರ್ತರಾಗಿದ್ದ ಇವರು ಸಂಘ ಪರಿವಾರದ ಅಸೀಮಾ ಮ್ಯಾಗಝಿನ್ ಸಂಪಾದಕರೂ ಆಗಿದ್ದಾರೆ. ಪ್ರವಾದಿಯವರನ್ನು ನಿಂದಿಸಿದ್ದಕ್ಕಾಗಿ ಅವರನ್ನು 2018ರಲ್ಲಿ ಬಂಧಿಸಲಾಗಿತ್ತು.

6. ಕ್ಷಮಾ ನರ್ಗುಡ್ ಭಾನಾವತಿ, ವಕೀಲೆ- ಇವರು ಬಿಜೆಪಿ ಮಹಿಳಾ ಘಟಕದ ಸಕ್ರಿಯ ಸದಸ್ಯೆಯಾಗಿದ್ದು ತನ್ನನ್ನು ಆರೆಸ್ಸೆಸ್ ಸೇವಿಕಾ ಎಂದು ಪರಿಚಯಿಸುತ್ತಾರೆ.

7. ಜೆರೋಮ್ ಅಂಟೊ-ಸಾಮಾಜಿಕ ಕಾರ್ಯಕರ್ತ- ಇವರು ಬಿಜೆಪಿ ಸದಸ್ಯರಾಗಿದ್ದು ಪಕ್ಷದ ಅಭಿಯಾನಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News