'ಡ್ರಗ್ಸ್ ಜಾಲ' ತನಿಖೆಯಲ್ಲಿ ಹಸ್ತಕ್ಷೇಪವಿಲ್ಲವೆಂಬ ಬದ್ಧತೆ ತೋರಿಸಬೇಕು: ಸಿಎಂಗೆ ಮೇಲ್ಮನೆ ಸದಸ್ಯ ಲೇಹರ್ ಸಿಂಗ್ ಪತ್ರ

Update: 2020-09-12 13:38 GMT

ಬೆಂಗಳೂರು, ಸೆ. 12: ರಾಜ್ಯ ಮತ್ತು ರಾಜಧಾನಿ ಬೆಂಗಳೂರಿನಲ್ಲಿ ವ್ಯಾಪಕವಾಗಿರುವ ಡ್ರಗ್ಸ್ ಜಾಲಕ್ಕೆ ಕಡಿವಾಣ ಹಾಕುವ ದೃಷ್ಟಿಯಿಂದ ತಕ್ಷಣವೇ ಬೆಂಗಳೂರಿನ ಎಲ್ಲ ಸಂಸದರು, ಶಾಸಕರು ಹಾಗೂ ಮೇಲ್ಮನೆ ಸದಸ್ಯರು ಸೇರಿದಂತೆ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳ ಸಭೆ ಕರೆದು ಚರ್ಚಿಸಿ, ತನಿಖೆಯಲ್ಲಿ ಯಾವುದೇ ಹಸ್ತಕ್ಷೇಪವಿಲ್ಲವೆಂಬ ಬದ್ಧತೆ ತೋರಿಸಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ವಿಧಾನ ಪರಿಷತ್ ಸದಸ್ಯ ಲೇಹರ್ ಸಿಂಗ್ ಪತ್ರ ಬರೆದಿದ್ದಾರೆ.

ಶನಿವಾರ ಮೂರು ಪುಟಗಳ ಸುದೀರ್ಘ ಪತ್ರ ಬರೆದಿರುವ ಲೇಹರ್ ಸಿಂಗ್, ಶೈಕ್ಷಣಿಕ ಸಂಸ್ಥೆಗಳು, ಪಬ್‍ಗಳು, ಬಾರ್ ಗಳು, ಹೊಟೇಲ್ ಸೇರಿದಂತೆ ಇನ್ನಿತರ ಪ್ರದೇಶದಲ್ಲಿ ಮಾದಕ ವಸ್ತುಗಳು ಪತ್ತೆಯಾದಲ್ಲಿ ಆ ಸಂಸ್ಥೆಗಳನ್ನೇ ಹೊಣೆ ಮಾಡಬೇಕು. ಇಂತಹ ಅಪರಾಧ ಕೃತ್ಯದಲ್ಲಿ ತೊಡಗುವವರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಕಾಯ್ದೆ ಉಲ್ಲಂಘಿಸುವವರ ವಿರುದ್ಧ ಅಗತ್ಯವಿದ್ದರೆ ಪ್ರಸ್ತುತ ಇರುವ ಕಾನೂನಿಗೆ ಮಾರ್ಪಾಡು ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಅವರು ಕೋರಿದ್ದಾರೆ.

ಎನ್‍ಡಿಪಿಎಸ್ ಕಾಯ್ದೆ ಸೇರಿದಂತೆ ಪ್ರಸ್ತುತ ಇರುವ ಕಾನೂನಿನಲ್ಲಿ ಮಾದಕ ವಸ್ತುಗಳ ದಂಧೆಯಲ್ಲಿ ತೊಡಗಿರುವ ಎಲ್ಲರಿಗೂ ಶಿಕ್ಷೆಗೆ ಒಳಪಡಿಸಲು ಸಾಧ್ಯವಾಗುತ್ತಿಲ್ಲ. ಆದುದರಿಂದ ಅಗತ್ಯಕ್ಕೆ ತಕ್ಕಂತೆ ಕಾಯ್ದೆಗೆ ತಿದ್ದುಪಡಿ ತರಬೇಕಿದೆ. ಡ್ರಗ್ಸ್ ಜಾಲವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯವ ನಿಟ್ಟಿನಲ್ಲಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಲು ಸಮರ್ಥ ವಕೀಲರನ್ನು ನ್ಯಾಯಾಲಯದಲ್ಲಿ ನಿಯೋಜಿಸಬೇಕು ಎಂದು ಲೇಹರ್ ಸಿಂಗ್ ಮನವಿ ಮಾಡಿದ್ದಾರೆ.

ಬೆಂಗಳೂರು ನಗರದಲ್ಲಿ ದಿನೇ ದಿನೇ ಯುವ ಪೀಳಿಗೆ ಹಾಗೂ ಮಕ್ಕಳು ಈ ಮಾದಕ ವಸ್ತುಗಳ ವಿಷಜಾಲಕ್ಕೆ ಬಲಿಯಾಗುತ್ತಿದ್ದು, ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಪೊಲೀಸ್ ಅಧಿಕಾರಿಗಳ ಮಾಹಿತಿ ಅನ್ವಯ ಬೆಂಗಳೂರು ಇಡೀ ದಕ್ಷಿಣ ಭಾರತಕ್ಕೆ ಮಾದಕ ವಸ್ತು ಪೂರೈಕೆ ವ್ಯಾಪಕವಾಗಿರುವುದು ಗೊತ್ತಾಗುತ್ತದೆ. ಕೆಲ ಶಂಕಿತರನ್ನು ಬಂಧಿಸುವುದು ಈ ಸಮಸ್ಯೆಗೆ ಪರಿಹಾರವಲ್ಲ. ಹೀಗಾಗಿ ತಪ್ಪಿತಸ್ಥರು ಯಾರೇ ಇದ್ದರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಮೂಲಕ ಈ ದಂಧೆಗೆ ಕಡಿವಾಣ ಹಾಕಬೇಕು ಎಂದು ಲೇಹರ್ ಸಿಂಗ್ ಪತ್ರದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News