ಸ್ಯಾಂಡಲ್‍ವುಡ್ ಡ್ರಗ್ಸ್ ದಂಧೆ ಪ್ರಕರಣ: ಚಿನ್ನದಂಗಡಿ ವ್ಯಾಪಾರಿ ಬಂಧನ

Update: 2020-09-12 14:29 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಸೆ.12: ಸ್ಯಾಂಡಲ್‍ವುಡ್ ಡ್ರಗ್ಸ್ ದಂಧೆ ಆರೋಪ ಪ್ರಕರಣ ಸಂಬಂಧ ತನಿಖೆ ತೀವ್ರಗೊಳಿಸಿರುವ ಸಿಸಿಬಿ ಪೊಲೀಸರು, ಚಿನ್ನದಂಗಡಿ ವ್ಯಾಪಾರಿಯೋರ್ವನನ್ನು ಬಂಧಿಸಿ, ವಿಚಾರಣೆಗೊಳಪಡಿಸಿದ್ದಾರೆ.

ಬಂಧಿತ ಆರೋಪಿ ವೈಭವ್ ಜೈನ್ ಎಂದು ಪೊಲೀಸರು ತಿಳಿಸಿದ್ದು, ಈತ ಕಾಟನ್‍ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ 5ನೇ ಆರೋಪಿ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

ಬಂಧಿತ ಆರೋಪಿಗಳಾದ ನಟಿ ರಾಗಿಣಿ ಹಾಗೂ ರವಿಶಂಕರ್ ನೊಂದಿಗೆ ವೈಭವ್ ಜೈನ್ ಗುರುತಿಸಿಕೊಂಡಿದ್ದ. ತದನಂತರ, ನಗರದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿ, ಡ್ರಗ್ಸ್ ಹಂಚಿಕೆ ಜಾಲದಲ್ಲಿ ಸಕ್ರಿಯವಾಗಿದ್ದ ಎಂದು ಹೇಳಲಾಗುತ್ತಿದೆ.

ಸದ್ಯ ರಾಗಿಣಿ ಆಪ್ತ ಬಂಧಿತ ಆರೋಪಿ ರವಿಶಂಕರ್ ನೀಡಿದ ಮಾಹಿತಿ ಮೇರೆಗೆ ವೈಭವ್‍ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ವಿರೇನ್ ಖನ್ನಾ ಜೊತೆಯೂ ಜತೆಯೂ ಸಂಪರ್ಕ ಹೊಂದಿದ್ದ ವೈಭವ್, ಪ್ರಕರಣದ ಮತ್ತೊಬ್ಬ ಆರೋಪಿ ಆದಿತ್ಯಾ ಆಳ್ವಾ ಜೊತೆ ಸೇರಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿದ್ದ ಎನ್ನುವ ಮಾಹಿತಿ ಬೆಳಕಿಗೆ ಬಂದಿದೆ ಎನ್ನಲಾಗಿದೆ.

ಪೋಷಕರ ಆಗಮನ: ಬಂಧಿತರ ಪೈಕಿ ಪ್ರಮುಖ ಆರೋಪಿ ಎನ್ನಲಾದ ವಿರೇನ್ ಖನ್ನಾ ಪೋಷಕರು ಸಿಸಿಬಿ ಕಚೇರಿಗೆ ದೌಡಾಯಿಸಿ ಆಧಿಕಾರಿಗಳನ್ನು ಶನಿವಾರ ಭೇಟಿ ಮಾಡಿದರು. ನಮ್ಮ ಪುತ್ರ ಯಾವುದೇ ತಪ್ಪು ಮಾಡಿಲ್ಲ. ಆತ ಯಾವುದೇ ಡ್ರಗ್ಸ್ ಪ್ರಕರಣದ ಕಿಂಗ್‍ಪಿನ್ ಅಲ್ಲ. ಸುಖಾಸುಮ್ಮನೆ ಪ್ರಕರಣದಲ್ಲಿ ಮಗನನ್ನು ಬಲಿಪಶು ಮಾಡಲಾಗಿದೆ ಎಂದು ವಿರೇನ್ ಖನ್ನಾ ತಂದೆ ಶ್ರೀರಾಮ್ ಸಮರ್ಥಿಸಿಕೊಂಡರು.

ಆರೋಗ್ಯ ತಪಾಸಣೆ: ಪ್ರಕರಣದಲ್ಲಿ ಪೊಲೀಸ್ ವಶದಲ್ಲಿರುವ ರವಿಶಂಕರ್, ರಾಹುಲ್, ವೈಭವ್ ಜೈನ್, ಪ್ರಶಾಂತ್ ರಾಂಕಾ, ನಿಯಾಝ್ ಸೇರಿದಂತೆ ಒಟ್ಟು 7 ಆರೋಪಿಗಳನ್ನು ಶನಿವಾರ ವೈದ್ಯಕೀಯ ಪರೀಕ್ಷೆಗೆ ಕೆ.ಸಿ.ಜನರಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಪೊಲೀಸ್ ಕಸ್ಟಡಿಯಲ್ಲಿ ಇರುವುದರಿಂದ ಬಂಧಿತ ಆರೋಪಿಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸುವುದು ನಿಯಮವಾಗಿದ್ದು, ಇನ್ನುಳಿದ ಆರೋಪಿಗಳಿಗೂ ಇರುವ ನಂಟಿನ ಕುರಿತು ವಿಚಾರಣೆ ನಡೆಸಲಾಗುತ್ತಿದೆ. ಡ್ರಗ್ಸ್ ದಂಧೆಯಲ್ಲಿ ಈವರೆಗೂ 10ಕ್ಕಿಂತ ಹೆಚ್ಚು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News