ಕೈಗಾರಿಕೋದ್ಯಮಿಗಳ ಸಮಸ್ಯೆ ಪರಿಹಾರಕ್ಕೆ ವೆಬ್‍ಸೈಟ್ ಪ್ರಾರಂಭ: ಜಗದೀಶ್ ಶೆಟ್ಟರ್

Update: 2020-09-12 14:34 GMT

ಬೆಂಗಳೂರು, ಸೆ.12: ಕೈಗಾರಿಕೋದ್ಯಮಿಗಳಿಗೆ ಸಂಬಂಧಿಸಿದ ಎಲ್ಲ ಸಮಸ್ಯೆಗಳನ್ನು ಶೀಘ್ರವಾಗಿ ನಿವಾರಿಸುವ ನಿಟ್ಟಿನಲ್ಲಿ ಇಲಾಖೆ ವತಿಯಿಂದ ಏಕಗವಾಕ್ಷಿ ವೆಬ್‍ಸೈಟ್‍ನ್ನು ಸದ್ಯದಲ್ಲೇ ಪ್ರಾರಂಭಿಸಲಾಗುವುದೆಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.

ನಗರದ ಖಾಸಗಿ ಹೋಟೆಲ್‍ನಲ್ಲಿ ಎಫ್‍ಸಿಐ ವತಿಯಿಂದ ಆಯೋಜಿಸಿದ್ದ ಫಾರಿನ್ ಇನ್‍ವೆಸ್ಟರ್ಸ್ ಕೌನ್ಸಿಲ್ ಕರ್ನಾಟಕ ಚಾಪ್ಟರ್ ನ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯದಲ್ಲಿ ಹೆಚ್ಚಿನ ಬಂಡವಾಳ ಹೂಡಿಕೆ ಹಾಗೂ ಕೈಗಾರಿಕೆಗಳನ್ನು ಆಹ್ವಾನಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ವಿಶೇಷ ಆಸಕ್ತಿ ವಹಿಸಿ ಕಾರ್ಯಯೋಜನೆಗಳನ್ನು ರೂಪಿಸುತ್ತಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಉದ್ಯಮಸ್ನೇಹಿ ಉಪಕ್ರಮಗಳನ್ನು ಅನುಷ್ಠಾನಗೊಳಿಸುವತ್ತ ಹೆಚ್ಚಿನ ಗಮನ ಹರಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಈಗಾಗಲೇ ಹೊಸ ಕೈಗಾರಿಕಾ ನೀತಿಯನ್ನು ಜಾರಿಗೊಳಿಸಲಾಗಿದೆ. ಹಾಗೂ ಕೈಗಾರಿಕಾ ಸೌಲಭ್ಯ ಅಧಿನಿಯಮದಲ್ಲಿ ಆಮೂಲಾಗ್ರ ಬದಲಾವಣೆಯನ್ನು ಮಾಡಿರುವ ದೇಶದ ಮೊದಲ ರಾಜ್ಯ ಕರ್ನಾಟಕವಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಏಕಗವಾಕ್ಷಿ ಯೋಜನೆಯ ಮೂಲಕ ಕೈಗಾರಿಕೆಗಳ ಸ್ಥಾಪನೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಅನೇಕ ನೀತಿಗಳನ್ನು ರೂಪಿಸಲಾಗುತ್ತಿದೆ. ಕೈಗಾರಿಕೋದ್ಯಮಿಗಳ ಸಮಸ್ಯೆಗಳ ನಿವಾರಣೆಗಾಗಿಯೇ ವೆಬ್‍ಸೈಟ್ ರಚಿಸಲಾಗುತ್ತಿದೆ. ಇದರಲ್ಲಿ ಕೈಗಾರಿಕೆಗಳ ಸ್ಥಾಪನೆ, ಬೆಳವಣಿಗೆಯಲ್ಲಿ ಎದುರಾಗಬಹುದಾದ ಎಲ್ಲ ಸಮಸ್ಯೆಗಳಿಗೂ ಸಮರ್ಪಕವಾದ ಉತ್ತರ ದೊರೆಯಲಿದೆ. ಹಾಗೂ ಸಮಸ್ಯೆಗಳ ಪರಿಹಾರಕ್ಕೆ ವಿಳಂಬ ನೀತಿ ಅನುಸರಿಸುವ ಅಧಿಕಾರಿಗಳಿಗೂ ಎಚ್ಚರಿಕೆ ನೀಡುವ ವ್ಯವಸ್ಥೆಯು ಇದಾಗಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಫಾರಿನ್ ಇನ್‍ವೆಸ್ಟರ್ ಫೋರಂನ ಕೃಷ್ಣಕುಮಾರ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News