ಝಮೀರ್ ಡ್ರಗ್ಸ್ ಮಾಫಿಯಾದಲ್ಲಿದ್ದಾರೆ ಎಂದು ನಾನು ಎಲ್ಲೂ ಹೇಳಿಲ್ಲ: ಪ್ರಶಾಂತ್ ಸಂಬರಗಿ

Update: 2020-09-12 14:42 GMT

ಬೆಂಗಳೂರು, ಸೆ.12: ಸ್ಯಾಂಡಲ್‍ವುಡ್ ಡ್ರಗ್ಸ್ ದಂಧೆ ಆರೋಪ ಪ್ರಕರಣ ಸಂಬಂಧ ಸಿಸಿಬಿ ವಿಚಾರಣೆಗೆ ಹಾಜರಾದ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ, ತನಿಖಾಧಿಕಾರಿಗಳ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಿಲ್ಲ ಎಂದು ತಿಳಿದುಬಂದಿದೆ.

ಶನಿವಾರ ನಗರದ ಚಾಮರಾಜಪೇಟೆಯ ಸಿಸಿಬಿ ಕಚೇರಿಗೆ ಹಾಜರಾದ ಪ್ರಶಾಂತ್ ಸಂಬರಗಿ ಅನ್ನು ಸತತ 3 ಗಂಟೆಗಳ ಕಾಲ ತನಿಖಾಧಿಕಾರಿಗಳು ವಿಚಾರಣೆ ನಡೆಸಿದ್ದು, ಈ ವೇಳೆ ಅವರು ಆರೋಪ ಹೊರಿಸಿರುವ ವ್ಯಕ್ತಿಗಳ ಬಗ್ಗೆ ಯಾವುದೇ ರೀತಿಯ ದಾಖಲೆ ನೀಡಿಲ್ಲ. ಜತೆಗೆ ಸಮರ್ಪಕವಾದ ಉತ್ತರಗಳನ್ನು ನೀಡದ ಹಿನ್ನೆಲೆ ಮತ್ತೊಮ್ಮೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಕಳುಹಿಸಲಾಗಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

ನಟಿ ಸಂಜನಾ, ಉದ್ಯಮಿ ಶೇಕ್ ಫಾಝೀಲ್ ಹಾಗೂ ಶಾಸಕ ಝಮೀರ್ ಅಹ್ಮದ್ ಖಾನ್ ಕುರಿತು ನೀವು ಮಾಡಿರುವ ಆರೋಪಗಳಿಗೆ ತಕ್ಕಂತೆ ಸಾಕ್ಷ್ಯ ಅಥವಾ ಮಾಹಿತಿ ನೀಡುವಂತೆ ವಿಚಾರಣೆಯಲ್ಲಿ ಸಿಸಿಬಿ ತನಿಖಾಧಿಕಾರಿ ಸಂಬರಗಿಗೆ ಪ್ರಶ್ನಿಸಿದ್ದಾರೆ. ಈ ವೇಳೆ, ಸಾಮಾಜಿಕ ಜಾಲತಾಣಗಳಲ್ಲಿರುವ ಕೆಲ ಚಿತ್ರಗಳು, ವಿಡಿಯೋಗಳನ್ನು ಪ್ರಶಾಂತ್ ತೋರಿಸಿದರು. ಇದನ್ನು ಒಪ್ಪದ ತನಿಖಾಧಿಕಾರಿಗಳು, ಮುಂದಿನ ವಾರ ಸಾಕ್ಷ್ಯಗಳ ಸಮೇತ ವಿಚಾರಣೆಗೆ ಬನ್ನಿ ಎಂದು ಸೂಚಿಸಿದರು ಎಂದು ಹೇಳಲಾಗುತ್ತಿದೆ.

ಈ ಕುರಿತು ವಿಚಾರಣೆ ಬಳಿಕ ಮಾಧ್ಯಮ ಪತ್ರಿನಿಧಿಗಳೊಂದಿಗೆ ಮಾತನಾಡಿದ ಪ್ರಶಾಂತ್ ಸಂಬರಗಿ, ದಾಖಲೆ ಸಮರ್ಪಕವಾಗಿಲ್ಲ. ಶುಕ್ರವಾರ ಮತ್ತೆ ನೋಟಿಸ್ ಜಾರಿ ಮಾಡುತ್ತೇವೆ, ದಾಖಲೆ ಸಮೇತ ಮತ್ತೆ ವಿಚಾರಣೆಗೆ ಬನ್ನಿ ಎಂದು ಸಿಸಿಬಿ ಪೊಲೀಸರು ಹೇಳಿದ್ದಾರೆ ಎಂದರು.

ಝಮೀರ್ ಡ್ರಗ್ಸ್ ಮಾಫಿಯಾ ಎಂದಿಲ್ಲ

ಮಾಜಿ ಸಚಿವ ಝಮೀರ್ ಅಹ್ಮದ್ ಖಾನ್ ಡ್ರಗ್ಸ್ ಮಾಫಿಯಾದಲ್ಲಿದ್ದಾರೆ ಎಂದು ನಾನು ಎಲ್ಲೂ ಹೇಳಿಲ್ಲ. ಝಮೀರ್ ಶ್ರೀಲಂಕಾ ಕ್ಯಾಸಿನೋಗೆ ಹೋಗಿದ್ದರು ಎಂದು ಹೇಳಿದ್ದೇನೆ ಅಷ್ಟೇ. ನನ್ನ ನೇರ ಟಾರ್ಗೇಟ್ ಝಮೀರ್ ಅಲ್ಲ.

-ಪ್ರಶಾಂತ್ ಸಂಬರಗಿ, ಸಾಮಾಜಿಕ ಕಾರ್ಯಕರ್ತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News